ಬುಧವಾರ, ನವೆಂಬರ್ 09, 2011

ಐಎಸ್ಐ ಬುಟ್ಟಿಯಲ್ಲಿ ಭಾರತೀಯ ಬುದ್ಧಿಜೀವಿಗಳು

ಭಾರತದ ಅನೇಕ ಸ್ವಘೋಷಿತ `ಮಾನವತಾವಾದಿ'ಗಳ ನಿಜಬಣ್ಣ ಬಯಲಾಗುತ್ತಿದೆ. ಇಂತಹ ಅನೇಕರು ಪಾಕಿಸ್ತಾನದ ಐಎಸ್ಐ ಗೆಸ್ಟ್ ಲಿಸ್ಟ್ನಲ್ಲಿ ವಿರಾಜಮಾನರಾಗಿರುವ ವಿಷಯ ಸುದ್ದಿಯಾಗುತ್ತಿದೆ. ಹೊಸ ಹೊಸ ಹೆಸರುಗಳು ಹೊರಬರುತ್ತಿವೆ. ಆದರೂ ನಮ್ಮ ಸರ್ಕಾರ ಎಚ್ಚೆತ್ತಿರುವ ಹಾಗೆ ಕಾಣುತ್ತಿಲ್ಲ.

ಐಎಸ್ಐ ಖರ್ಚಿನಲ್ಲಿ ವಿದೇಶ ಪ್ರವಾಸ, ಪಂಚತಾರಾ ಹೊಟೇಲಿನ ವಾಸ, ಸೆಮಿನಾರುಗಳಲ್ಲಿ ಭಾರತದ ವಿರುದ್ಧ ಅರಚಾಟ, ಭಾರತದ ಮತ್ತು ವಿದೇಶಗಳ ಪತ್ರಿಕೆಗಳಲ್ಲಿ ಪಾಕಿಸ್ತಾನದ ರಣತಾಂತ್ರಿಕ ನಿಲುವಿಗೆ ಅನುಕೂಲವಾಗುವಂತಹ ಲೇಖನಗಳನ್ನು ಬರಹ, ಹೇಳಿಕೆ ನೀಡಿಕೆ, ಜಿಹಾದಿಗಳ ಪರವಾಗಿ ವಾದಿಸುವುದು - ಇವೆಲ್ಲ ಈ `ಭಾರತೀಯ' ಐಎಸ್ಐ ಬುದ್ಧಿಜೀವಿಗಳ ಪಾಲಿನ ಕರ್ತವ್ಯ.

ಅಮೆರಿಕ, ಲಂಡನ್ ಹಾಗೂ ಬ್ರಸೆಲಗಳಲ್ಲಿ ನಡೆದ ಐಎಸ್ಐ ಸೆಮಿನಾರುಗಳಲ್ಲಿ ಭಾರತದ ಅನೇಕ ನಿವಾಸಿ, ಅನಿವಾಸಿ ಬುದ್ಧಿಜೀವಿಗಳು ಪಾಲ್ಗೊಂಡಿದ್ದು ಈಗಾಗಲೇ ಸುದ್ದಿಯಾಗಿದೆ. ಈ ಪೈಕಿ ಕುಪ್ರಸಿದ್ಧವಾದದ್ದು ಅಮೆರಿಕದ `ಕಾಶ್ಮೀರಿ ಅಮೆರಿಕನ್ ಕೌಂಸಿಲ್' (ಕೆಎಸಿ). ಅದರ ರೂವಾರಿ ಸಯ್ಯದ್ ಗುಲಾಮ್ ನಬಿ ಫೈ ಅಮೆರಿಕದಲ್ಲಿ ಪಾಕಿಸ್ತಾನದ ಪರ, ಭಾರತದ ವಿರುದ್ಧ ನಡೆಸುತ್ತಿದ್ದ ಐಷಾರಾಮಿ ಸೆಮಿನಾರುಗಳು ಬಹಳ ಬೇಗ ಅಮೆರಿಕದ FBI  ಗಮನವನ್ನು ಸೆಳೆದದ್ದು ಗಮನಿಸಬೇಕಾದ ಅಂಶ. ಆತ ವಾಸ್ತವವಾಗಿ ಐಎಸ್ಐ ಏಜೆಂಟ್ ಎಂಬುದನ್ನು FBI  ಬಹಳ ಬೇಗ ಬಯಲುಮಾಡಿತು. ಈಗ ಆತನ ಮೇಲೆ ಕ್ರಿಮಿನಲ್ ಆರೋಪವನ್ನು ಹೊರಿಸಲಾಗಿದೆ.

ಅಷ್ಟೇನೂ ಪ್ರಚಾರವಿಲ್ಲದ ಸಣ್ಣ ಸಂಸ್ಥೆಯಾದ ಕೆಎಸಿ, ತನ್ನ ಸೆಮಿನಾರುಗಳಿಗೆ ಲಕ್ಷಗಟ್ಟಲೆ ಹಣ ಖರ್ಚು  ಮಾಡುವ ಅಗತ್ಯವಾದರೂ ಏನಿತ್ತು? ಈ ಸೆಮಿನಾರುಗಳನ್ನು ಕೇಳಲು ಬರುತ್ತಿದ್ದವರು ಕೇವಲ ಬೆರಳೆಣಿಯಷ್ಟು ಮಂದಿ. ಮಾಧ್ಯಮಗಳಲ್ಲೂ ಈ ಸೆಮಿನಾರಿನ ಭಾಷಣಗಳು ವರದಿಯಾಗುತ್ತಿರಲಿಲ್ಲ. ಹೀಗಿರುವಾಗ ನಾಲ್ಕಾರು ಜನರ ಮುಂದೆ ಅರಚಾಡಲು ಬುದ್ಧಿಜೀವಿಗಳನ್ನು ವಿಮಾನದಲ್ಲಿ ಕರೆಸಿ, ಪಂಚತಾರಾ ಹೋಟೆಲುಗಳಲ್ಲಿ ಇರಿಸಿ, ಮೋಜು ಮಾಡಿಸುವ ಅಗತ್ಯವಾದರೂ ಏನಿತ್ತು? - ಇವೆಲ್ಲ ಎಫ್ಬಿಐ ತನಿಖಾ ವ್ಯಾಪ್ತಿಗೆ ಬಂದ ವಿಷಯಗಳು.

ಈಗ ಹೇಳಿ, ಇಂಹುದೊಂದು ತನಿಖೆಯನ್ನು ಭಾರತ ಸರ್ಕಾರ ಎಂದಾದರೂ ಮಾಡಿದೆಯೆ? ನಮ್ಮಲ್ಲಿಯೂ ಭಾರತವಿರೋಧಿ ಸೆಮಿನಾರುಗಳು, ಬರಹಗಳು ಸಮೃಧ್ಧವಾಗಿವೆ. ಅವುಗಳನ್ನು ಸದೆಬಡಿಯಲು ಸೂಕ್ತ ಕಾನೂನುಗಳು ಇವೆ. ಆದರೆ ಅವುಗಳನ್ನು ಸರಿಯಾದ ರೀತಿ ಬಳಸುತ್ತಿಲ್ಲ. ಜೊತೆಗೆ, ನಮ್ಮ ಕೆಲವು ಪ್ರಭಾವಶಾಲಿ ಮಾಧ್ಯಮಗಳು ಭಾರತವಿರೋಧಿ `ಮಾನವತವಾದಿ'ಗಳ ದನಿಗೇ ಇನ್ನಿಲ್ಲದ ಸ್ಥಳವನ್ನು ನೀಡುತ್ತಿವೆ. ಭಾರತದ ಸಂವಿಧಾನ, ಕಾನೂನುಗಳಿಗೆ ಅರುಂಧತಿ ರಾಯ್ ಪ್ರಭೇದಗಳು ಕವಡೆಯ ಬೆಲೆಯನ್ನೂ ನೀಡುವುದಿಲ್ಲ, `ಭಾರತ' ಎಂಬುದನ್ನೇ ಅವರು ಒಪ್ಪುವುದಿಲ್ಲ ಎಂಬುದು ಗೊತ್ತಿದ್ದರೂ ಅವರುಗಳಿಗೆ ಗೌರವಾನ್ವಿತ ಸ್ಥಾನವನ್ನು ನೀಡುವಲ್ಲಿ ನಾವು ಹಿಂದೆ ಬಿದ್ದಿಲ್ಲ.

ನಮ್ಮ ಅನೇಕ ಬುದ್ಧಿಜೀವಿಗಳು ಭಾರತದೊಳಗಿನ, ಪಾಕಿಸ್ತಾನ ಪ್ರಚೋದಿತ, ಕಾಶ್ಮೀರಿ ಪ್ರತ್ಯೇಕತಾವಾದದ ಪರವಾಗಿ ಹೇಳಿಕೆ ನೀಡುವುದು, ಲೇಖನಗಳನ್ನು ಬರೆಯುವುದು, ಸೆಮಿನಾರುಗಳಲ್ಲಿ ಮೈಮೇಲೆ ಬಂದವರಂತೆ ಮಾತನಾಡುವುದು ಹೊಸದೇನಲ್ಲ. ಮಾವೋವಾದಿಗಳ ಪರವಾಗಿ ವರ್ತಿಸುವುದು ರಹಸ್ಯವೇನಲ್ಲ. ಹಿಂದೆ ಸೋವಿಯತ್ ಗೂಢಚಾರ ಸಂಸ್ಥೆ ಕೆಜಿಬಿ ಪರವಾಗಿ ಭಾರತದಲ್ಲಿ ಅನೇಕ ಬುದ್ದೀಜೀವಿಗಳು, ಮುಖಂಡರು ಕೆಲಸ ಮಾಡುತ್ತಿದ್ದರು ಎಂಬುದನ್ನು `ಮಿತ್ರೋಕಿನ್ ಆಕ್ರೈವ್ಸ್' ಪುಸ್ತಕ ವಿವರವಾಗಿ ಬಯಲಿಗೆಳೆದಿತ್ತು. ಭಾರತದ ಅನೇಕರು ಕೆಜಿಬಿಯಿಂದ ಹಣ ಪಡೆಯುತ್ತಿದ್ದರು, ಭಾರತದ ಪ್ರಭಾವಶಾಲಿ ಪತ್ರಿಕೆಗಳಲ್ಲಿ ಕೆಜಿಬಿಯು ಸೋವಿಯತ್ ರಣನೀತಿಯ ಪರವಾದ ಸಾವಿರಾರು ಲೇಖನಗಳನ್ನು ಪ್ರಕಟ ಮಾಡಿಸಿತ್ತು ಎಂಬುದು ಸೋವಿಯತ್ ಪತನದ ನಂತರ ಬಯಲಾದ ರಹಸ್ಯ ದಾಖಲೆಗಳಿಂದ ತಿಳಿಯುತ್ತದೆ.

ಮೊದಲು ಕೆಜಿಬಿ, ಈಗ ಐಎಸ್ಐ. ಈಗ ಪಾಕಿಸ್ತಾನ ಮೂಲದಿಂದ ಯಾರು ಎಷ್ಟು ಹಣ ಪಡೆಯುತ್ತಿದ್ದಾರೆ ಎಂಬುದು ತಿಳಿದಿಲ್ಲ. ಒಟ್ಟಿನಲ್ಲಿ ವಿದೇಶಿ ಶಕ್ತಿಗಳು ಭಾರತದಲ್ಲಿ ಸಾರ್ವಜನಿಕ ಅಭಿಪ್ರಾಯ ರೂಪಿಸುವ ನಿಟ್ಟಿನಲ್ಲಿ ಕೆಲವು ಜನರನ್ನು, ಬುದ್ಧಿಜೀವಿಗಳನ್ನು, ಮಾಧ್ಯಮದವರನ್ನು ಹಾಗೂ ಮುಖಂಡರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಮಾತ್ರ ಮುಂದುವರಿದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನಗಳು ಮುಂದುವರಿಯುತ್ತಿವೆ. ಈ ಕುರಿತು ತನಿಖೆಯಾಗಬೇಕು.

ಭಾರತವಿರೋಧಿಗಳ ವಿರುದ್ಧ ಅಮೆರಿಕ ಕ್ರಮ ತೆಗೆದುಕೊಂಡರೂ ಭಾರತ ಸರ್ಕಾರವೇಕೆ ಸುಮ್ಮನಿದೆ? ಅಂಗನಾ ಚಟರ್ಜಿ  ಎಂಬ ಅನಿವಾಸಿ ಪ್ರೊಫೆಸರಳನ್ನು ಈಗ ಅಮೆರಿಕದಲ್ಲಿ ತನಿಖೆಗೆ ಒಳಪಡಿಸಲಾಗುತ್ತಿದೆ.  ಆದರೆ ಭಾರತದಲ್ಲಿ, ಬಿನಾಯಕ್ ಸೇನ್ ಪ್ರಕರಣದ ನಂತರ, `Unlawful Activities Prevention Act' ಅನ್ನೇ ಅಳಿಸಿಹಾಕಬೇಕು ಎಂಬ ಆಂದೋಲನವನ್ನು ಆರಂಭಿಸಲಾಗಿದೆ!

ಐಎಸ್ಐ ಬುದ್ಧಿಜೀವಿಗಳ ಪಡೆ ಭಾರತದಲ್ಲಿದೆ ಎಂಬ ಅನುಮಾನಗಳ ಹಿನ್ನೆಲೆಯಲ್ಲಿ ತನಿಖೆ ಅತ್ಯಗತ್ಯ. ಆದರೆ ಅದನ್ನು ಮಾಡುವವರು ಯಾರು?

ಮುನ್ನೂರು ರಾಮಾಯಣಗಳ ತಕರಾರು: ಅಧ್ಯಯನ ಇರಲಿ, ವೈಚಾರಿಕ ದೀಕ್ಷೆ ಬೇಡ

ದೆಹಲಿ ವಿಶ್ವವಿದ್ಯಾಲಯದ ಅಕ್ಯಾಡೆಮಿಕ್ ಕೌಂಸಿಲ್  ಎ. ಕೆ. ರಾಮಾನುಜಂರ `ತ್ರೀ ಹಂಡ್ರೆಡ್ ರಾಮಾಯಣಾಸ್' ಪ್ರಬಂಧವನ್ನು ತಿರಸ್ಕರಿಸಿದ್ದು, ಅಕ್ಯಾಡೆಮಿಕ್ ವಲಯಗಳಲ್ಲಿ ಹೊಸ ರಣಕಹಳೆ ಮೊಳಗುವಂತೆ ಮಾಡಿದೆ. ಎಡ ಚಿಂತಕರು ಪ್ರಬಂಧದ ಪರವಾಗಿ ಸಹಿಸಂಗ್ರಹ ಅಭಿಯಾನ, ಸೆಮಿನಾರುಗಳು, ಸರದಿಯ ಮೇಲೆ ಮಾಧ್ಯಮ ಬರವಣಿಗೆ, ಹೇಳಿಕೆ ನೀಡಿಕೆ - ಇತ್ಯಾದಿಗಳನ್ನು ಜೋರಾಗಿ ಆಯೋಜಿಸುತ್ತಿದ್ದಾರೆ.

ಸುಮಾರು 30 ಪುಟಗಳ ಈ ಪ್ರಬಂಧವನ್ನು ನಾನು ಓದಿದ್ದೇನೆ. ವಿವಿಧ ಕವಿಗಳು, ವಿವಿಧ ದೇಶೀಯರು, ಮತೀಯರು, ತಂಬೂರೀ ದಾಸರು ವಾಲ್ಮೀಕಿಯ ರಾಮಾಯಣವನ್ನು ತಮ್ಮ ಕಲ್ಪನೆಯ ಅನುಸಾರ ಬದಲಿಸಿರುವುದು ನಿಜ. ಅದು ಸಾವಿರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಉತ್ತರ ಭಾರತದ ಕೆಲವು ಕಡೆಗಳಲ್ಲಿ ವಾಲ್ಮೀಕಿಯ ರಾಮಾಯಣಕ್ಕಿಂತಲೂ ತುಲಸೀದಾಸರ `ರಾಮಚರಿತಮಾನಸ'ವೇ ಹೆಚ್ಚು ಜನಪ್ರಿಯ. ಹಾಗೆಯೇ ತಮಿಳಿನ ಕಂಬ ರಾಮಾಯಣ ಇತ್ಯಾದಿ. ಈ ರಾಮಾಯಣ ಸಾಹಿತ್ಯಗಳು ರಾಮಾಯಣದ ಕೀರ್ತಿ, ಪ್ರಸಿದ್ಧಿ, ಪ್ರಭಾವಗಳ ದ್ಯೋತಕ. ಇವು ರಾಮಾನುಜಂ ಅವರ ಸ್ವಂತ ಸೃಷ್ಟಿಯಲ್ಲ. ಯಾರು ಓದಲಿ, ಬಿಡಲಿ, ಅವುಗಳು ಅಸ್ತಿತ್ವದಲ್ಲಿ ಇರುವುದಂತೂ ನಿಜ. ಅವುಗಳನ್ನು ರಾಮಾನುಜಂ ವ್ಯಾಖ್ಯಾನಿಸಿದ್ದಾರೆ. ಅದನ್ನು ಓದುವುದಿಲ್ಲ ಎನ್ನುವುದು ಅಧ್ಯಯನಶೀಲತೆಯಲ್ಲ.

ನಿಜ, ಹಿಂದು ಸಂಸ್ಕೃತಿ ಯಾವುದೇ ಒಂದು ಗ್ರಂಥವನ್ನು ಆಧರಿಸಿಲ್ಲ. ಅದರಲ್ಲೂ ರಾಮಾಯಣ, ಮಹಾಭಾರತಗಳು ಇತಿಹಾಸ ಗ್ರಂಥಗಳೆಂದು ಮಾನ್ಯವಾಗಿದ್ದರೂ ಅವು `ಗಾಸ್ಪೆಲ್'ಗಳ ತರಹ ಅಲ್ಲ. ಥಾಯ್ ರಾಮಾಯಣದಿಂದ ಕುವೆಂಪು ತನಕ ಎಲ್ಲ ರಾಮಾಯಣಗಳಿಗೂ ವಾಲ್ಮೀಕಿಯ ರಾಮಾಯಣ ಹಳೆಯದು, ಹಾಗೂ ಮೂಲವಾದದ್ದು. ಇದನ್ನು ಮರೆಯಬಾರದು. ಮೂಲ ಲೇಖಕರ ಹಕ್ಕನ್ನು ಮರೆಯಬರದು. ವಾಲ್ಮಿಕಿಯ ಬಗ್ಗೆ ತಕ್ಕಮಟ್ಟಿಗೆ ಒಪ್ಪಿಕೊಂಡೇ ರಾಮಾನುಜಂ ಬರೆದಿದ್ದಾರೆ. ಆದರೆ ತಮ್ಮ  ವಾದದಲ್ಲಿ ದೃಢವಾಗಿ ಒಪ್ಪಿಲ್ಲ.

`ಗಾಸ್ಪೆಲ್ ಟ್ರೂತ್' ಎಂಬ ಪರಿಕಲ್ಪನೆ ಭಾರತದ್ದಲ್ಲ. ಗಾಸ್ಪೆಲ್ ಟ್ರೂತ್ ಎನ್ನುವವರಲ್ಲೂ ಹಲವು, ಪರಸ್ಪರ ವೈರುಧ್ಯವುಳ್ಳ ಗಾಸ್ಪೆಲ್ಗಳಿವೆ. ಕೆಲವನ್ನು ಹತ್ತಿಕ್ಕಲಾಗಿದೆ. ಕೆಲವನ್ನು ಮಾತ್ರ ಸ್ವೀಕರಿಸಲಾಗಿದೆ. ಬೈಬಲ್ಲಿನ ಹೊಸ ಒಡಂಬಡಿಕೆಯಲ್ಲಿ  ಕೇವಲ ನಾಲ್ಕನ್ನು ಮಾತ್ರ ಒಪ್ಪಲಾಗಿದೆ (ಮಾರ್ಕ್, ಲ್ಯೂಕ್, ಡೇವಿಡ್, ಜಾನ್ - ಈ ನಾಲ್ಕರಲ್ಲೂ ಪರಸ್ಪರ ವಿರುದ್ಧಾರ್ಥಕ ಕಥನಗಳಿವೆ). ಬೈಬಲ್ಲಿನಲ್ಲಿ ಸೇರಲ್ಪಡದ ಅನೇಕ ಗಾಸ್ಪೆಲ್ಗಳಿವೆ. ಇವುಗಳ ಬಗ್ಗೆಯೂ ತಿಳಿವು ಅಗತ್ಯ. ಆಗ ನಿಜವಾದ ಅಧ್ಯಯನಶೀಲತೆಯಾಗುತ್ತದೆ.

ಆದರೆ ಇಲ್ಲಿ ಸಮಸ್ಯೆಯಿರುವುದು ನಮ್ಮ `ಪ್ರಗತಿಪರರು' (ಹಾಗೆಂದರೇನು ಎಂಬುದು ನನಗೆ ಇನ್ನೂ ಗೊತ್ತಿಲ್ಲ!) ತಳೆಯುವ ಸೆಲೆಕ್ಟಿವ್ ಧೋರಣೆಯಲ್ಲಿ. ಎ. ಕೆ. ರಾಮಾಜುಂ ಅವರ ಈ ಪ್ರಬಂಧವನ್ನು ಮುಂದಿಟ್ಟುಕೊಂಡು ಮಾರ್ಕ್ಸ್, ಮಾವೋ ಸಿದ್ಧಾಂತಗಳನ್ನು, ಈಗಿನ ತಮ್ಮ ರಣತಾಂತ್ರಿಕ ನಿಲುವುಗಳನ್ನು ಮಾತ್ರ ಪ್ರವರ್ಥಿಸುವುದು ಅನಪೇಕ್ಷಿತ. ಈ ಸೈದ್ಧಾಂತಿಕರು ನಾಸ್ಟಿಕ್ ಗಾಸ್ಪೆಲ್ಗಳ ಬಗ್ಗೆ ಕನಸಿನಲ್ಲೂ ಕನವರಿಸುವುದಿಲ್ಲ. ಡೆಡ್ ಸೀ ಸ್ಕ್ರಾಲ್ಗಳ ಬಗ್ಗೆ ಓದುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಿಲ್ಲ.

ಈಗ ಸಹಿ ಸಂಗ್ರಹ ಚಳವಳಿಗೆ ಧುಮುಕಿದವರ ಪೈಕಿ ಅನೇಕರು ಸಲ್ಮಾನ್ ರಷ್ದಿಯ `ಸಟಾನಿಕ್ ವರ್ಸಸ್' ನಿಷೇಧವನ್ನು ಬೆಂಬಲಿಸಿದವರು. ತಸ್ಲಿಮಾ ನಸ್ರೀನರ ಕೋಲ್ಕತಾ ಜೀವನವನ್ನು ಕಷ್ಟಮಯಗೊಳಿಸಿದವರು. ಅರುಣ್ ಶೌರಿ ಬೈಬಲ್ಲಿನ ಬಗ್ಗೆ ಮಂಡಿಸಿದ್ದ ವಿದ್ವತ್ಪೂರ್ಣ ಅಧ್ಯಯನವನ್ನು ಖಂಡಿಸಿದ ಕೆಲವರು ಈಗ ರಾಮಾನುಜಂ ಹಿಂದೆ ನಿಂತಿದ್ದಾರೆ. ಇದು ಅಧ್ಯಯನಶೀಲತೆಯ ಪರವಾದ ನಿಲುವೊ? ಅಥವಾ ಸೈದ್ಧಾಂತಿಕ ಆಗ್ರಹವೋ?

ಸೈದ್ಧಾಂತಿಕ ದೀಕ್ಷೆಯೇ ಶಿಕ್ಷಣವಲ್ಲ. ಇದು ಎಡ, ಬಲ, ಮಧ್ಯ - ಎಲ್ಲರಿಗೂ ಅನ್ವಯವಾಗುವ ಮಾತು. ವಿಶ್ವವಿದ್ಯಾಲಯಗಳನ್ನು, ಅಕ್ಯಾಡೆಮಿಗಳನ್ನು, ಕಮ್ಯೂನಿಸ್ಟ್ ಅಡ್ಡೆಗಳನ್ನಾಗಿ ಮಾಡಿಕೊಳ್ಳುವ ಕೆಲಸ ಬಹಳ ಹಿಂದೆಯೇ ಶುರುವಾಗಿರುವುದು ಗೊತ್ತೇ ಇದೆ. ತಾಲಿಬಾನ್ ದೇವ್ಬಂದ್ನಲ್ಲಿ ತಯಾರಾದ ಹಾಗೆ, ನೇಪಾಳದ ಮಾವೋ ಉಗ್ರರ ಹಿಂದಿನ ಸೈದ್ಧಾಂತಿಕ ರೂವಾರಿಗಳು ದೆಹಲಿಯ ಜವಹರ್ಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರೊಫೆಸರ್ಗಳು ಎಂಬುದು ಸರ್ವವಿದಿತ. ಕೆಲವು ಮಾವೋ ಮುಖಂಡರು ನೇರವಾಗಿ ಜೆಎನ್ಯು ಕ್ಯಾಂಪಸ್ಸಿನಲ್ಲೇ ತಯಾರಾದ ಉತ್ಪನ್ನಗಳು. ಎಡ ತೀವ್ರವಾದ, ಅಸಹನೆಗಳು ಹೆಚ್ಚಾದ ಪರಿಣಾಮವಾಗಿ ಈಗ ಬಲ ತೀವ್ರವಾದವೂ ಬೆಳೆದಿದೆ. ಸ್ವತಂತ್ರ ಅಧ್ಯಯನ, ಚಿಂತನೆಗಳಿಗೆ ಅವಕಾಶವೇ ಇಲ್ಲವಾಗುತ್ತಿದೆ. `ನಾನು ಹೇಳಿದಷ್ಟನ್ನು ಕಲಿತರೆ ಸಾಕು' ಎಂಬ ಧೋರಣೆ ಎರಡೂ ಕಡೆಗಳಲ್ಲಿ ಇದೆ. ಎರಡೂ ಕಡೆಯವರಿಗೆ ತಮ್ಮ ತಲೆ ಒಪ್ಪಿಸುವ ಯುವಕ, ಯುವತಿಯರು ಬೇಕು. ಈಗ ಬುದ್ಧಿವಂತರೆಲ್ಲ ಹ್ಯೂಮಾನಿಟೀಸ್ನತ್ತ ಬರದೇ ಇರುವುದು ಈ ಸೈದ್ಧಾಂತಿಕರಲ್ಲಿ ಭಾರಿ ನಿರಾಶೆ, ಹತಾಶೆ ಮೂಡಿಸಿದೆ.

`ದಿ ಕುರಾನಿಕ್ ಕಾಂಸೆಪ್ಟ್ ಆಫ್ ವಾರ್' ಎಂಬ ಪುಸ್ತಕವನ್ನು ಓದುವುದು ಪಾಕಿಸ್ತಾನದ ಸೈನಿಕ ಶಾಲೆಗಳಲ್ಲಿ ಕಡ್ಡಾಯವಾಗಿತ್ತು. ಜಿಯಾ ಉಲ್ ಹಕ್ ಬರೆಸಿದ್ದ ಈ ಪುಸ್ತಕದ ಲೇಖಕರು ಬ್ರಿಗೇಡಿಯರ್ ಎಸ್. ಕೆ. ಮಲಿಕ್ (ಅದನ್ನು ನಾನು ಓದಿದ್ದೇನೆ). ಈ ತರಹದ ವಿಚಾರಗಳನ್ನು ಆರಾಧಿಸಿದ್ದರ ಪರಿಣಾಮವಾಗಿಯೇ ಪಾಕ್ ಮಿಲಿಟರಿ ಜಿಹಾದಿ ಅಡ್ಡೆಯಾಯಿತು ಎಂಬುದನ್ನು ನಾವು ಮರೆಯಬಾರದು.

ಉನ್ನತ ಶಿಕ್ಷಣದಲ್ಲಿ ತಮಗೆ ಬೇಕಾದ ಪಠ್ಯಗಳನ್ನಿಟ್ಟು `ಇದನ್ನು ಕಡ್ಡಾಯವಾಗಿ ಓದಬೇಕು' ಎಂಬುದು ಬದಲಾಗಬೇಕು. ಇದರಿಂದ ತಮ್ಮ ಕಡೆಯವರ ಪಠ್ಯವೇ ಇರಲಿ, ಇತರರದು ಬೇಡ ಎಂಬ ರಾಜಕೀಯ ಕಡಮೆಯಾಗುತ್ತದೆ.
ವಿದ್ಯಾರ್ಥಿಗಳಲ್ಲಿ ಹಲವು ಬಗೆಯ ಗ್ರಂಥಗಳ ತೌಲನಿಕ ಅಧ್ಯಯನ ಬೆಳೆಯುವಂತೆ ಮಾಡಬೇಕು. ವಿಶ್ವವಿದ್ಯಾಲಯಗಳು ಮೂಲತಃ ಅಧ್ಯಯನ ಕೇಂದ್ರಗಳು. ವೈಚಾರಿಕ ದೀಕ್ಷಾ ಕೇಂದ್ರಗಳಲ್ಲ.

ಮುಂದಿನ ಪ್ರಧಾನಿ ಯಾರು?

ಭ್ರಷ್ಟಾಚಾರ ಕಳಂಕಿತ ಆಡಳಿತದ ಉಸ್ತುವಾರಿ ವಹಿಸಿರುವ, ನಾಯಕತ್ವದ ಗುಣವನ್ನು ಪ್ರದರ್ಶಿಸದ, ಪ್ರಸ್ತುತ ಪ್ರಧಾನಿ ಮನಮೋಹನ್ ಸಿಂಗ್ ದಿನದಿಂದ ದಿನಕ್ಕೆ ಅಪ್ರಸ್ತುತರಾಗುತ್ತಿದ್ದಾರೆ. ಅನೇಕ ವಿದೇಶಿ ಆಡಳಿತಗಳು ಹಾಗೂ ಮಾಧ್ಯಮಗಳು ಈಗಾಗಲೇ ಪ್ರಸ್ತುತ ಆಡಳಿತವನ್ನು ಕಡೆಗಣಿಸಿ, 2014ರ ಲೋಕಸಭಾ ಚುನಾವಣೆಯ ಬಗ್ಗೆ ಹೆಚ್ಚಾಗಿ ಗಮನ ಕೇಂದ್ರೀಕರಿಸತೊಡಗಿವೆ. ಮನಮೋಹನ್ ಸಿಂಗರ ಅಸಾಮರ್ಥ್ಯ ಢಾಳಾಗಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರಧಾನಿಯ ಬಗ್ಗೆ ಚರ್ಚೆಗಳು ಭಾರತದಲ್ಲೂ ಆರಂಭವಾಗಿವೆ.

ಈ ದಿಶೆಯಲ್ಲಿ ಮುಂಚೂಣಿಯಲ್ಲಿರುವುದು ಮೂರು ಹೆಸರುಗಳು: ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ, ಎಐಸಿಸಿ (ಕಾಂಗ್ರಸ್) ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್.

ಮೊದಲಿಗೆ, ಸೋನಿಯಾ ಗಾಂಧಿ ಪರಿವಾರದ ಏಕಸ್ವಾಮ್ಯ ಹೊಂದಿರುವ ಕಾಂಗ್ರೆಸ್ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರೆ, ನಂತರ ರಾಹುಲ್ ಗಾಂಧಿ ಬಯಸಿದರೆ, ಅವರು ಪ್ರಧಾನಿಯಾಗಬಹುದು. ಆದರೆ ಆ ಸ್ಥಾನಕ್ಕೆ ತಕ್ಕ ಅರ್ಹತೆ ಅವರಲ್ಲಿ ಎಷ್ಟಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಪ್ರಧಾನಿಯಾಗುವ ಅರ್ಹತೆಯುಳ್ಳ ಹಲವಾರು ಮುಖಂಡರು (ಉದಾ: ಪ್ರಣಬ್ ಮುಖರ್ಜಿ) ಕಾಂಗ್ರೆಸ್ಸಿನಲ್ಲಿ ಇದ್ದರೂ ರಾಹುಲ್-ಸೋನಿಯಾ ಇರಾದೆಯೇ ಅಂತಿಮವಾಗುತ್ತದೆ. ಯಾವ ಕಾಂಗ್ರಸ್ಸಿಗರೂ ಅದನ್ನು ಪ್ರಶ್ನಿಸುವ ಸ್ಥಿತಿಯಲ್ಲಿಲ್ಲ.

ಈ ಮಧ್ಯೆ, `ರಾಹುಲ್ ಪ್ರಧಾನಿಯಾಗಲು ಸಿದ್ಧರಾಗುತ್ತಿದ್ದಾರೆ' ಎಂದು ಅವರ ಹೊಗಳುಭಟ್ಟರು ಹೇಳಿಕೆಗಳನ್ನು ನೀಡಿಕೊಂಡು ತಿರುಗಾಡುತ್ತಿದ್ದಾರೆ. ಬೋರ್ಡ್ ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಾಗುವ ಹಾಗೆ ಪ್ರಧಾನಿ ಸ್ಥಾನಕ್ಕೆ `ಟ್ಯೂಷನ್' ಕೊಡಿಸಿ ಸಿದ್ಧಪಡಿಸಬಹುದು ಎಂಬುದೇ ವಿಚಿತ್ರ, ಬಾಲಿಶ ಕಲ್ಪನೆ. ಬೌದ್ಧಿಕ ಸಾಮಥ್ರ್ಯ, ಆಡಳಿತಾತ್ಮಕ ಅನುಭವ, ಸಂವಹನ ಕೌಶಲ್ಯ, ರಾಜನೀತಿ, ರಾಜತಂತ್ರ, ನಾಯಕತ್ವದ ಗುಣಗಳು, ಆಡಳಿತ ಕೌಶಲ್ಯ - ಇವೆಲ್ಲ ಮನೆಪಾಠದ ಮೂಲಕ ಕಲಿಯುವ ವಿಷಯಗಳಲ್ಲ. ಅನುಭವದ ಮೂಸೆಯಲ್ಲಿ ಪಳಗಿದ ಅನೇಕರ ಪೈಕಿ ಯಾರೋ ಒಬ್ಬಿಬ್ಬರು ಯಶಸ್ವಿಯಾಗುತ್ತಾರೆ ಅಷ್ಟೇ. ಹೀಗಿರುವಾಗ ಮಧ್ಯಮಹಂತದಿಂದ ಆರಂಭಿಸಿ ಯೋಗ್ಯತೆಯ ಅನುಸಾರ ಮೇಲೇರುವುದೇ ಸರಿಯಾದ ಕ್ರಮ.
ವಿತ್ತಮಂತ್ರಿಯಾಗಿ ಪಿ. ವಿ. ನರಸಿಂಹರಾವ್ ಹೇಳಿದಷ್ಟು ಮಾಡಿಕೊಂಡಿದ್ದ ಮನಮೋಹನ್ ಸಿಂಗರೇ  ಈಗ ಸೋನಿಯಾ ಹೇಳಿದಷ್ಟು ಮಾಡಿಕೊಂಡಿರುವ ಪ್ರಧಾನಿ ಎನಿಸಿಕೊಂಡಿರುವ ಉದಾಹರಣೆ ಇದೆ. ಹೀಗಿರುವಾಗ ಮನೆಪಾಠದವರಿಂದ ಏನು ಪ್ರಯೋಜನವಾಗುತ್ತದೆ? ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶಗಳು ಎಷ್ಟು ಎಂಬುದೂ ಇಲ್ಲಿ ಗಮನಾರ್ಹ.

ಇನ್ನು ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್. ಇಬ್ಬರೂ `ಯಶಸ್ವಿ' ಮುಖ್ಯಮಂತ್ರಿಗಳು ಎನಿಸಿಕೊಂಡಿದ್ದಾರೆ.  ಪ್ರಧಾನಿ ಸ್ಥಾನಕ್ಕೆ ಹಲವು ವಿಧಗಳಲ್ಲಿ ಅರ್ಹರು ಎನಸಿದ್ದಾರೆ. ಆದರೆ ಅವರು ಆ ಸ್ಥಾನ ಹಿಡಿಯುವ ಸಂಭಾವ್ಯತೆ ಎಷ್ಟಿದೆ ಎಂಬುದು ಗಮನಾರ್ಹ. NDA ಅಧಿಕಾರಕ್ಕೆ ಬಂದರೆ ಬಿಜೆಪಿ ಪ್ರಧಾನಿ ಸ್ಥಾನವನ್ನು ಕಿರಿಯ ಪಕ್ಷವಾದ ಜೆಡಿಯುಗೆ ಬಿಟ್ಟುಕೊಡುವ ಸಂಭವ ಇಲ್ಲ. ಹೀಗಾಗಿ ನಿತೀಶ್ ಗೆ  ಅವಕಾಶಗಳು ಕಡಮೆ. ಅವರು ಕಾಂಗ್ರೆಸ್ ಮೈತ್ರಿಕೂಟಕ್ಕೆ ಹೋದರೂ ಪ್ರಯೋಜನವಿಲ್ಲ. ಅದು ರಾಹುಲಮಯ. ತೃತೀಯ ರಂಗವಂತೂ ಹಲವಾರು ಪ್ರಧಾನಿ ಸ್ಥಾನದ ಆಕಾಂಕ್ಷಿಗಳಿಂದ ತುಂಬಿಹೋಗಿದೆ.  ಮಾಯಾವತಿ, ಮುಲಾಯಂ ಸಿಂಗ್, ಲಾಲೂ ಯಾದವ್, ದೇವೇಗೌಡ, ಎಡ ನಾಯಕರು - ಹೀಗೆ. ಅಲ್ಲದೇ, ಬರೀ ತೃತೀಯ ಶಕ್ತಿಗಳೇ ಸೇರಿ ಅಧಿಕಾರ ನಡೆಸಬೇಕಾದರೆ ಕಾಂಗ್ರೆಸ್ಸಿನ ಬೆಂಬಲ ಖಂಡಿತ ಬೇಕಾಗುತ್ತದೆ. ಅದರ ಸಂಭವನೀಯತೆ ಈಗಲೇ ತಿಳಿಯುವಂತಹುದಲ್ಲ.

ಪ್ರಧಾನಿ ಸ್ಥಾನಕ್ಕೆ ಯಶಸ್ವಿ ಮುಖ್ಯಮಂತ್ರಿಗಳ ಹೆಸರನ್ನು ಬಿಂಬಿಸುವುದು ಸಾಮಾನ್ಯ ಕ್ರಮ. ಹಿಂದೆ ರಾಮಕೃಷ್ಣ ಹೆಗಡೆ, ಚಂದ್ರಬಾಬು ನಾಯ್ಡು ಈ ರೀತಿ ಬಿಂಬಿತರಾಗಿದ್ದರು. ಒಂದು ಹಂತದಲ್ಲಿ ಎನ್. ಟಿ. ರಾಮರಾವ್ ಹಾಗೂ ಜಯಲಲಿತಾರನ್ನೂ ಬಿಂಬಿಸಲಾಗಿತ್ತು. ಆದರೆ ಅವರ್ಯಾರಿಗೂ ಅಗ್ರಪೀಠ ದಕ್ಕಲಿಲ್ಲ.

ಬಿಜೆಪಿ ಹಾಗೂ ಎನ್ಡಿಎ ಒಂದುವೇಳೆ ಚುನಾವಣೆಯಲ್ಲಿ ಗೆದ್ದರೆ, ಬಿಜೆಪಿಯ ಉಳಿದ ಮುಖಂಡರು ಹಾಗೂ ಎನ್ಡಿಎ ಮುಖಂಡರು ಒಪ್ಪಿದರೆ, ನರೇಂದ್ರ ಮೋದಿಗೆ ಅದೃಷ್ಟ ಒಲಿಯುತ್ತದೆ. ಇದೂ ಸುಲಭದ ಮಾತಲ್ಲ. ಕೇಂದ್ರದಲ್ಲಿ ಅಭಿವೃದ್ಧಿ ಮಂತ್ರದ `ಮೋದಿ ಎಫೆಕ್ಟ್' ಆಗಿಬಿಟ್ಟರೆ ತಮಗೆ ಗದ್ದುಗೆ ಬಹಳ ದೂರವಾಗಿಬಿಡುತ್ತದೆ ಎಂಬ ಒಳಭಯ ಎಲ್ಲ ಮುಖಂಡರಲ್ಲೂ ಇದೆ. ಎನ್ಡಿಎ ಒಳಗಿದ್ದುಕೊಂಡೇ ನಿತೀಶ್ ಕುಮಾರ್ ಮತ್ತು ಇತರರು ಮೋದಿಯ ಅವಕಾಶವನ್ನು ತಗ್ಗಿಸಬಹುದು.

ಹೀಗಾಗಿ 2014ರ ಚುನಾವಣೆ ತುಂಬ ಕುತೂಹಲಕಾರಿಯಾಗಿರುತ್ತದೆ ಎಂದಷ್ಟೇ ಈ ಹಂತದಲ್ಲಿ ಹೇಳಬಹುದು.