ಬುಧವಾರ, ಸೆಪ್ಟೆಂಬರ್ 21, 2011

ಕಂಬಾರರೊಡನೆ ಮಾತುಕತೆ

ಜಾನಪದವನ್ನು ನವ್ಯದೊಡನೆ ಮೇಳೈಸಿ ವಿಶಿಷ್ಟ ಪಾಕವನ್ನು ತಯಾರಿಸಿರುವ ಡಾ. ಚಂದ್ರಶೇಖರ ಕಂಬಾರರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇದರಿಂದ ಕನ್ನಡದ ಹೆಮ್ಮೆ ಮತ್ತೊಮ್ಮೆ ವಿಜೃಂಭಿಸಿದೆ.

ಇದು ಸಂಪೂರ್ಣವಾಗಿ ಅನಿರೀಕ್ಷಿತವಲ್ಲ. ಏಕೆಂದರೆ ಜ್ಞಾನಪೀಠದ ಎತ್ತರದಲ್ಲಿ ಅವರು ಎಂದಿನಿಂದಲೋ ವಿಹರಿಸುತ್ತಿದ್ದವರು. ಕಳೆದ ಎರಡು ವರ್ಷಗಳಿಂದ ಅವರ ಹೆಸರು ಚಲಾವಣೆಯಲ್ಲಿತ್ತು. ಇದೀಗ ಪ್ರಶಸ್ತಿ ಅವರನ್ನು ಅರಸಿ ಬಂದಿದೆ.

ಪ್ರಶಸ್ತಿ ಘೋಷಣೆಯಾದ ಸಂದರ್ಭದಲ್ಲಿ `ಕರ್ಮವೀರ'ದ ಪರವಾಗಿ ಅವರನ್ನು ಅಭಿನಂದಿಸಲು ಅವರ ಮನೆಗೆ ಹೋದೆ. ಬಹಳ ಆತ್ಮೀಯತೆಯಿಂದ ಕಂಬಾರರು ಮಾತನಾಡಿದರು. ಪತ್ರಿಕೆಯೊಡನೆ ತಮಗಿರುವ ಗಾಢ ಸಂಬಂಧವನ್ನು ನೆನೆಯುತ್ತ, ನಾಡು, ನುಡಿ, ಶಿಕ್ಷಣ, ಜಾನಪದ ಎಲ್ಲವನ್ನೂ ಚಚರ್ಿಸಿದರು. ತಮ್ಮ ವೈಯಕ್ತಿಕ ಖುಷಿ, ಚಿಂತನೆಗಳನ್ನು ಹಂಚಿಕೊಂಡರು.

ಒಟ್ಟಿನಲ್ಲಿ ಕನ್ನಡ ಸಾಹಿತ್ಯಕ್ಕಿದು ಹಬ್ಬದ ಸಮಯ. ಡಾ. ಎಸ್. ಎಲ್. ಭೈರಪ್ಪನವರು ಪ್ರತಿಷ್ಠಿತ `ಸರಸ್ವತಿ ಸಮ್ಮಾನ್' ಪ್ರಶಸ್ತಿಯನ್ನು ಪಡೆದ ಬೆನ್ನಲ್ಲೇ ಡಾ. ಚಂದ್ರಶೇಖರ ಕಂಬಾರರು ಪ್ರತಿಷ್ಠಿತ `ಜ್ಞಾನಪೀಠ' ಪ್ರಶಸ್ತಿಗೆ ಆಯ್ಕೆಯಾಗಿರುವುದು ಕನ್ನಡಕ್ಕೆ ವಿಶೇಷ ಮೆರುಗು ತಂದುಕೊಟ್ಟಿದೆ. ಇವೆರಡೂ ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳು. ಎರಡೂ ಖಾಸಗಿ ಟ್ರಸ್ಟಿನ ಪ್ರಶಸ್ತಿಗಳು. ಸರಿಸುಮಾರು ಒಂದೇ ಮೊತ್ತದ ಪುರಸ್ಕಾರ ಧನವನ್ನು ಎರಡೂ ಹೊಂದಿವೆ. ಭೈರಪ್ಪನವರ ಮೂಲಕ ಮೊದಲಬಾರಿಗೆ ಕನ್ನಡಕ್ಕೆ `ಸರಸ್ವತಿ ಸಮ್ಮಾನ್' ದೊರಕಿದರೆ, ಕಂಬಾರರ ಮೂಲಕ ಕನ್ನಡಕ್ಕೆ ಎಂಟನೇ `ಜ್ಞಾನಪೀಠ'ದ ಅಗ್ರಪೀಠ ಸಿಕ್ಕಿದೆ.

ರಾಜಕೀಯ ಲಾಬಿ ನಡೆಸುವ ಜನರ ನಡುವೆ ಯೋಗ್ಯರಿಗೂ ಆಗಾಗ್ಗೆ ಪ್ರಶಸ್ತಿಗಳು ಲಭಿಸುವುದುಂಟು. ಈ ಸಾಲಿಗೆ ಭೈರಪ್ಪ, ಕಂಬಾರರು ಸೇರುತ್ತಾರೆ. ಆದರೂ ಭೈರಪ್ಪನವರಿಗೆ ಜ್ಞಾನಪೀಠ ಏಕೆ ಇನ್ನೂ ಸಿಗುತ್ತಿಲ್ಲ ಎಂಬ ಅಭಿಪ್ರಾಯ ಈಗ ಮತ್ತೊಮ್ಮೆ ಸಾಹಿತ್ಯ ವಲಯದಲ್ಲಿ ಭುಗಿಲೆದ್ದಿದೆ. ಪ್ರಶಸ್ತಿಗಳಿಗೂ ವಿವಾದಗಳಿಗೂ ಹಳೆಯ ನಂಟು. ಜ್ಞಾನಪೀಠ ಪಡೆದವರ ಪಟ್ಟಿಯ ಜೊತಗೆ ಸರಸ್ವತಿ ಸಮ್ಮಾನ್ ಪಡೆದವರ ಇನ್ನೊಂದು ಪಟ್ಟಿಯನ್ನು ಇಟ್ಟುಕೊಂಡರೆ ಇಂತಹ ವಿವಾದಗಳು ಬಹುಶಃ ತಣ್ಣಗಾಗಬಹುದು.

ಒಟ್ಟಿನಲ್ಲಿ ಪ್ರಶಸ್ತಿಗಳನ್ನು ಪಡೆಯಲು ಅದೃಷ್ಟವೂ ಬೇಕು. ಮಹಾತ್ಮ ಗಾಂಧಿಯವರಿಗೇ ನೊಬೆಲ್ ಶಾಂತಿ ಪುರಸ್ಕಾರ ಸಿಗಲಿಲ್ಲ ಎಂಬುದು ಗಮನಾರ್ಹ. ಡಿ. ವಿ. ಗುಂಡಪ್ಪ, ಗೋಪಾಲಕೃಷ್ಣ ಅಡಿಗ - ಮುಂತಾದ ಅರ್ಹ ಹಿರಿಯರಿಗೆ ಜ್ಞಾನಪೀಠದ ಅದೃಷ್ಟ ಇಲ್ಲದೇ ಹೋಗಿದ್ದೂ ಗಮನಾರ್ಹ. ಯಾರ್ಯಾರಿಗೋ `ಭಾರತರತ್ನ' ನೀಡಿದ ನಂತರ ಸದರ್ಾರ್ ಪಟೇಲರ ಹೆಸರನ್ನು ಘೋಷಿಸಲಾಯಿತು.

ಕನ್ನಡದಲ್ಲಿ ಇನ್ನೂ ಹಲವಾರು ಮಂದಿಗೆ ಜ್ಞಾನಪೀಠ ಸಿಗಬೇಕಿದೆ ಎಂಬುದು ನಿಜ. ಹಾಗೆಯೇ ಇನ್ನೂ ಅನೇಕ ಕನ್ನಡ ಸಾಹಿತಿಗಳಿಗೆ ಸರಸ್ವತಿ ಸಮ್ಮಾನ್ ಸಹ ಸಿಗಲಿ ಎಂದು ಹಾರೈಸೋಣ.
 

ಇದಕ್ಕೆಲ್ಲಿದೆ ಪರಿಹಾರ?

ರಾಷ್ಟ್ರೀಯ ಸುರಕ್ಷೆಯ ವಿಷಯಕ್ಕೆ ಬಂದಾಗ ಶಿವರಾಜ್ ಪಾಟೀಲ್ ಅವರಿಗಿಂತಲೂ ತಾನು ಭಿನ್ನ ಎಂದು ಪಿ. ಚಿದಂಬರಂ ಯಾವ ರೀತಿಯಲ್ಲೂ ಸಾಬೀತು ಮಾಡಿಲ್ಲ. 26/11 ಸಮಯದಲ್ಲಿ ಪಾಟೀಲ್ ಬಟ್ಟೆ ಬದಲಿಸುವುದರಲ್ಲಿ, ಮುಖಕ್ಕೆ ಪೌಡರ್ ಹಾಕಿಕೊಳ್ಳುವುದರಲ್ಲಿ ಸಮಯ ಕಳೆಯುತ್ತಿದ್ದರೆ, ಇತರ ದಾಳಿಗಳ ಸಮಯದಲ್ಲಿ ಚಿದಂಬರಂ ತಮ್ಮ ಹಳೆಯ ವಿಚಿತ್ರ ಹೇಳಿಕೆಗಳನ್ನೇ ಬದಲಿಸಿ ನೀಡುತ್ತ ಕಾಲ ಕಳೆಯುತ್ತಿದ್ದಾರೆ.

ದೆಹಲಿ ಹೈಕೋಟರ್ಿನಲ್ಲಿ, ಒಂದೇ ಸ್ಥಳದಲ್ಲಿ, ಕೆಲವೇ ತಿಂಗಳುಗಳ ಅಂತರದಲ್ಲಿ, ಎರಡು ಬಾರಿ ಸ್ಫೋಟವಾಗಿದೆ ಎಂದರೆ ಏನರ್ಥ? ಇದಕ್ಕೆ ಚಿದು ನೀಡಿರುವ ಸ್ಪಷ್ಟೀಕರಣ: `ಭಯೋತ್ಪಾದಕರು ರಹಸ್ಯವಾಗಿ ಕಾಯರ್ಾಚರಣೆ ಮಾಡುತ್ತಾರೆ' ಎಂದು! ಇದು ಯಾರಿಗೂ ಗೊತ್ತಿಲ್ಲದ ಮಹಾ ರಹಸ್ಯ! ಇದನ್ನು ಪಲುಕಲು ಒಬ್ಬ ಗೃಹಮಂತ್ರಿ ನಮಗೆ ಬೇಕಾ?

9/11 ನಂತರ ಅಮೆರಿಕದ ಆಂತರಿಕ ಸುರಕ್ಷೆಯನ್ನು ಹೇಗೆ ಭದ್ರಪಡಿಸಲಾಗಿದೆ ಎಂಬುದು ಗಮನಾರ್ಹ. ಅಮೆರಿಕದ ಎಫ್ಬಿಐ (ಫೆಡೆರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ರಾಷ್ಟ್ರೀಯ ಕಾನೂನು ಜಾರಿ ಹಾಗೂ ತನಿಖಾ ಸಂಸ್ಥೆ. 9/11 ಜಿಹಾದಿ ಭಯೋತ್ಪಾದಕ ದಾಳಿಯ ನಂತರ ಅದರ ಪಾತ್ರ ಸಂಪೂರ್ಣವಾಗಿ ಬದಲಾಯಿತು. ಅಪರಾಧಗಳ ತನಿಖೆ ನಡೆಸುವ `ಪ್ರತಿಕ್ರಿಯಾತ್ಮಕ' ಸ್ವರೂಪದಿಂದ ಅಪರಾಧಗಳನ್ನು ತಡೆಯುವ `ಸಕ್ರಿಯಾತ್ಮಕ' ಸ್ವರೂಪವನ್ನು ಅದಕ್ಕೆ ನೀಡಲಾಯಿತು. ಅದಕ್ಕಾಗಿ ಎಫ್ಬಿಐ ಅನೇಕ ಆಂತರಿಕ ಸುಧಾರಣೆಗಳಿಗೆ ಒಳಪಟ್ಟಿತು. ಗುಪ್ತಚಾರ ಸಂಸ್ಥೆಗಳೊಡನೆ ಒಟ್ಟಿಗೆ ಕೆಲಸ ಮಾಡುವ ಹಾಗೆ ಅದನ್ನು ಸಂಯೋಜಿಸಲಾಯಿತು.

ಭಾರತದ ಗುಪ್ತಚಾರ ಏಜೆನ್ಸಿಗಳ ನಡುವೆ ಚೂರೂ ಹೊಂದಾಣಿಕೆಯಿಲ್ಲ. ತನಿಖಾ ಸಂಸ್ಥೆಗಳಿಗೂ ಗುಪ್ತಚಾರ ಸಂಸ್ಥೆಗಳಿಗೂ ಸರಿಯಾದ ಬಾಂಧವ್ಯವಿಲ್ಲ. ಎನ್ಎಸ್ಎ (ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್) ಸ್ಥಾನವೂ ರಾಜಕೀಯ ನೇಮಕಾತಿಗೆ ಒಳಪಟ್ಟಿದೆ. ಎನ್ಐಎ (ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ) ಸರಿಯಾದ ಸ್ವಾಯತ್ತ ಸ್ವರೂಪವನ್ನು ಇನ್ನೂ ಪಡೆದುಕೊಂಡಿಲ್ಲ. ಅದೂ ಸಿಬಿಐ ತರಹ ರಾಜಕೀಯದ ನೆರಳಿನಲ್ಲೇ ಇದೆ. ಭಯೋತ್ಪಾದನಾ ನಿಗ್ರಹಕ್ಕಾಗಿ ಪ್ರತಿದೇಶದಲ್ಲೂ ವಿಶೇಷ ಕಾನೂನು ಇರಬೇಕು ಎಂಬುದು ಅಂತಾರಾಷ್ಟ್ರೀಯ ಸರ್ವಸಮ್ಮತಿ. ವಿಸ್ವಸಂಸ್ಥೆಯ ಭದ್ರತಾ ಮಂಡಳಿ ಈ ಕುರಿತು 9/11 ನಂತರ ನಿರ್ಣಯ ಅಂಗೀಕರಿಸಿತ್ತು (1373). ಭಾರತವೂ ಅದಕ್ಕೆ ಬದ್ಧವಾಗಿದೆ. ಆದರೂ ನಮ್ಮಲ್ಲಿ ಭಯೋತ್ಪಾದನಾ ನಿಗ್ರಹ ವಿಶೇಷ ಕಾನೂನು ಇಲ್ಲ. ಎನ್ಡಿಎ ಕಾಲದ ಪೋಟಾ ಕಾಯ್ದೆಯನ್ನು ರದ್ದುಮಾಡಲಾಗಿದೆ.

`ಭಯೋತ್ಪ್ಪಾದನಾ ಕಾಯ್ದೆ ಇದ್ದಮಾತ್ರಕ್ಕೆ ಭಯೋತ್ಪಾದಕ ಕೃತ್ಯಗಳನ್ನು ತಡೆಯಲು ಸಾಧ್ಯವೆ?', `ಜನಲೋಕಪಾಲ್ ಕಾಯ್ದೆ ಬಂದುಬಿಟ್ಟರೆ ಭ್ರಷ್ಟಾಚಾರ ಹೋಗಿಬಿಡುತ್ತಾ?' - ಮುಂತಾದ ಅಸಂಬದ್ಧ ವಾದಸರಣಿ ನಮ್ಮ ನಾಯಕಮಣಿಗಳದು. ಈ ದೃಷ್ಟಿಯಿಂದ ನೋಡಿದರೆ ಯಾವ ಕಾಯ್ದೆಯೂ ಇರಬಾರದು. ಐಪಿಸಿ ಅಪರಾಧಗಳನ್ನು ತಡೆದುಬಿಟ್ಟಿದೆಯೆ?

ಕಾಯ್ದೆಗಳಿಂದ ಅಪರಾಧಗಳ ತಡೆ ಆಗುತ್ತದೋ ಇಲ್ಲವೋ ಎನ್ನುವುದು ಬೇರೆ ಮಾತು. ಆದರೆ ಅಪರಾಧಿಗಳ ಶಿಕ್ಷೆಗೆ ಅವು ಅತ್ಯಾವಶ್ಯಕ. ಸೂಕ್ತ ಭಯೋತ್ಪಾದನಾ ನಿಗ್ರಹ ಕಾಯ್ದೆಗಳಿಲ್ಲದಿರುವರಿಂದ ಶಿಕ್ಷಾ ಪ್ರಮಾಣ (ಕನ್ವಿಕ್ಷನ್ ರೇಟ್) ಕಡಮೆಯಾಗಿದೆ. ಹೇಗೋ ಐಪಿಸಿ ಮೂಲಕವೇ ಉಗ್ರರ ಅಪರಾಧ ಸಾಬೀತಾಗಿ ಅವರಿಗೆ ಶಿಕ್ಷೆಯಾದರೂ ರಾಜಕೀಯ ಮುಖಂಡರೇ ಉಗ್ರರ ಪರವಾಗಿ ನಿಲ್ಲುವುದನ್ನು ಕಾಣುತ್ತೇವೆ. ಇದು ನಮ್ಮ ದೇಶದ ಪರಿಸ್ಥಿತಿ. ಅಮೆರಿಕದಲ್ಲಿ ಭಯೋತ್ಪಾದಕರ ಪರವಾಗಿ ಮಾತನಾಡಿ ಯಾವ ರಾಜಕಾರಣಿಯೂ ಉಳಿದುಕೊಳ್ಳಲಾರ. ಇಲ್ಲಿ ಭಯೋತ್ಪಾದಕರನ್ನೇ ಹೀರೋಗಳ ಹಾಗೆ ಬಿಂಬಿಸುವ ಮುಖಂಡರು ತುಂಬಿ ತುಳುಕುತ್ತಿದ್ದಾರೆ. ಜನಲೋಕಪಾಲ್ ಮಸೂದೆಯನ್ನು ವಿಶ್ಲೇಷಿಸುವ ಸ್ಥಾಯಿ ಸಮಿತಿಯಲ್ಲೂ ಇಂತಿಂತಹ ಜಾತಿಯವರು ಇರಲೇಬೇಕು ಎಂದು ಒತ್ತಾಯ ಹಾಕುವ ಮಹಾತ್ಮರಿದ್ದಾರೆ!

ಜಾತಿ, ಲಿಂಗ, ಭಾಷೆ, ಸಮುದಾಯ. ಕೋಮು - ಇವುಗಳನ್ನು ಆಧರಿಸಿದ ಹೀನ ರಾಜಕೀಯ ಎಲ್ಲೆಲ್ಲೂ ವಿಜೃಂಭಿಸುತ್ತಿದೆ. ಭ್ರಷ್ಟಾಚಾರ, ನಾಚಿಕೆಬಿಟ್ಟು ಹಣಕ್ಕಾಗಿ ಜೊಲ್ಲು ಸುರಿಸುವ ಹಾಗೂ ರಕ್ತ ಚೆಲ್ಲಾಡುವ ಪ್ರವೃತ್ತಿ - ಇವೆಲ್ಲ ಎದ್ದುಕಾಣುತ್ತಿವೆ. ಹೀನ ಮನಸ್ಸಿನ ಜನರು ಪ್ರಮುಖ ಸ್ಥಾನಗಳಲ್ಲಿ ಕಂಡುಬರುತ್ತಿದ್ದಾರೆ. ಜೈಲಿನಲ್ಲಿ ಶಾಶ್ವತವಾಗಿ ಇರಬೇಕಾದವರು ದೇಶವನ್ನು ಮುನ್ನಡೆಸಲು (!?) ಬಯಸುತ್ತಾರೆ.

ಇಂತಹವರೆಲ್ಲ ಇರುವಾಗ ದೇಶದ ನಾಶಕ್ಕೆ ಬಾಹ್ಯ ಶತ್ರುಗಳೇಕೆ ಬೇಕು?

ಇವರೇ ಸಾಕು.
 

ನ್ಯಾಯಪ್ರಕ್ರಿಯೆಗೆ ಅಡ್ಡಗಾಲು

ಈ ದೇಶದಲ್ಲಿ ಭಾರಿ ಕೊಲೆಗಡುಕರಿಗೆ, ಭಯೋತ್ಪಾದಕರಿಗೆ ಅಪರಿಮಿತ ಅನುಕಂಪ ತೋರಿಸುವ ಮುಖಂಡರು ಇರುವುದು ನಿಜಕ್ಕೂ ಆಶ್ಚರ್ಯಕಾರಿ. ಕಾನೂನು ವ್ಯವಸ್ಥೆ. ಕೋಟರ್ು, ವಿಚಾರಣೆ, ಶಿಕ್ಷೆ ಇವೆಲ್ಲ `ಸಾಮಾನ್ಯ' ಜನರಿಗೆ ಮಾತ್ರ ಮೀಸಲೇನೋ ಎನಿಸುತ್ತದೆ.

ಘೋರ ಅಪರಾಧ ಮಾಡಿ ಬಂದಿತರಾದ ಉಗ್ರರನ್ನು ಮುಗ್ದರೆಂದು ಬಿಂಬಿಸುವ ಪ್ರಯತ್ನಗಳು ಭಾರತದಲ್ಲಿ ರಾಜಾರೋಷವಾಗಿಯೇ ನಡೆಯುತ್ತಿರುವುದು ನಾಚಿಕೆಗೇಡಿನ ವಿಷಯ. ಕೆಲವು ರಾಜಕಾರಣಿಗಳು, ಮಾಧ್ಯಮದ ಒಂದು ವರ್ಗದವರು ತಮ್ಮದೇ ಆದ `ಗುಡ್ ಟೆರರಿಸ್ಟ್' ಪಟ್ಟಿಯನ್ನು ಹೊಂದಿರುವ ಹಾಗೆ ಕಾಣುತ್ತದೆ.

ಐದು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ದಿ. ರಾಜೀವ್ ಗಾಂಧಿ ಹತ್ಯೆಯ ವಿಷಯವನ್ನು ರಾಜಕೀಯ ರಾಢಿ ಆವರಿಸಿದೆ. ಆರೋಪಿಗಳ ಅಪರಾಧ ಸಾಬೀತಾಗಿ ಸುಪ್ರೀಮ್ ಕೋಟರ್್ ಗಲ್ಲು ಶಿಕ್ಷೆ ವಿಧಿಸಿದ್ದರೂ ಉಗ್ರರನ್ನು ಶಿಕ್ಷಿಸಲು ನಮ್ಮ ರಾಜಕೀಯ ಮುಖಂಡರು ತಯಾರಿಲ್ಲ. ಮೊದಲಿಗೆ, ನಳಿನಿಗೆ ಕ್ಷಮಾದಾನ ಕೊಡಿಸಲು ಸ್ವಯಂ ಸೋನಿಯಾ ಗಾಂಧಿಯವರೇ ಬಹಳ ಶ್ರಮಪಟ್ಟು ಯಶಸ್ವಿಯಾದರು. `ನಳಿನಿಗೆ ಮಗುವಿಗೆ' ಎಂಬುದು ಕ್ಷಮಾದಾನಕ್ಕೆ ಅವರು ಕೊಟ್ಟ ಕಾರಣ! ಮುರುಗನ್ ಮತ್ತಿತರ ಆರೋಪಿಗಳಿಗೂ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿಗಳನ್ನು ಅವರು ಕೋರಿದ್ದರು.

ಈಚೆಗೆ ಅವರುಗಳಿಗೆ ಕ್ಷಮಾದಾನವನ್ನು ನಿರಾಕರಿಸಲಾಯಿತು. ನಂತರ ಗಲ್ಲು ಶಿಕ್ಷೆ ಜಾರಿಮಾಡುವ ದಿನಾಂಕವೂ ನಿಗದಿಯಾಯಿತು. ಇದ್ದಕ್ಕಿದ್ದ ಹಾಗೆ ಮರುಗನ್ ಪರ ಅಲೆಯೆದ್ದಿತು! ಮದ್ರಾಸ್ ಹೈಕೋಟರ್ು ಗಲ್ಲುಶಿಕ್ಷೆ ಜಾರಿಗೆ 8 ವಾರಗಳ ತಾತ್ಕಾಲಿಕ ತಡೆಯಾಜ್ಞೆ ನೀಡಿತು! ಮುರುಗನ್ ಮತ್ತಿತರ ಪುರುಷ ಅಪರಾಧಿಗಳ ಗಲ್ಲು ರದ್ಧತಿಯನ್ನು ಕೋರಿ ತಮಿಳುನಾಡು ವಿಧಾನಸಭೆಯಲ್ಲಿ ಅವಿರೋಧ ನಿರ್ಣಯವನ್ನು ಅಂಗೀಕರಿಸಲಾಯಿತು!

ಈಗ ಅಫ್ಜಲ್ ಗುರು ಪರವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಧಾನಸಭೆಯಲ್ಲಿ ನಿರ್ಣಯವನ್ನು ಅನುಮೋದಿಸುವ ಪ್ರಯತ್ನಗಳು ನಡೆಯುತ್ತಿವೆ! ತಮ್ಮ ತಮ್ಮ ರಾಜ್ಯದ ಮಹಾ ಪಾತಕಿಗಳ ಪರವಾಗಿ ಆಯಾ ರಾಜ್ಯದ ರಾಜಕಾರಣಿಗಳು ವಕಾಲತ್ತು ಹಾಕುತ್ತಿದ್ದಾರೆ! ಇಷ್ಟಕ್ಕೂ ರಾಜೀವ್ ಗಾಂಧಿ ಹತ್ಯೆಗೂ ತಮಿಳುನಾಡು ವಿಧಾನಸಭೆಗೂ ಯಾವ ಕಾನೂನಾತ್ಮಕ ಸಂಬಂಧವಿದೆ? ದೇಶದ ಸಾಂವಿಧಾನಿಕ ನ್ಯಾಯಪ್ರಕ್ರಿಯೆಯಲ್ಲಿ ರಾಜಕೀಯ ಮುಖಂಡರು ಅನಾವಶ್ಯಕವಾಗಿ ಮೂಗು ತೂರಿಸುವುದು ಏಕೆ? ಇದನ್ನೆಲ್ಲ ದೇಶದ ಯಾವ ಪ್ರಭಾವಿ ಧ್ವನಿಯೂ ಪ್ರಶ್ನಿಸುತ್ತಿಲ್ಲ.

ರಾಜೀವ್ ಗಾಂಧಿ ದೇಶದ ಪ್ರಧಾನಿಯಾಗಿದ್ದವರು. ಅವರು ದೇಶಕ್ಕೇ ಸಂಬಂಧಿಸಿದ ವ್ಯಕ್ತಿ. ಕೇವಲ ಒಂದು ಕುಟುಂಬದ ವ್ಯಕ್ತಿ ಮಾತ್ರವೇ ಅಲ್ಲ ಎನ್ನುವುದನ್ನು ಮರೆಯಬಾರದು. ರಾಜೀವ್ ಜೊತೆಗೆ 18 ಮಂದಿ ಸಾಮಾನ್ಯರು ಹತ್ಯೆಯಾದರು. ಅವರ ಕುಟುಂಬದವರಾರೂ ಉಗ್ರರ ಪರವಾಗಿ ನಿಂತಿಲ್ಲ ಎನ್ನುವುದು ಗಮನಾರ್ಹ.

ಅಫ್ಜಲ್ ಗುರು, ಎಲ್ಟಿಟಿಇ ಉಗ್ರರು, ಅಜ್ಮಲ್ ಕಸಬ್, ನಕ್ಸಲೀಯರು - ಇವರೆಲ್ಲರಿಗೂ ಸಹಾನುಭೂತಿ ತೋರಿಸುವ ಪ್ರಭಾವಿ ಜನರು ನಮ್ಮ ದೇಶದಲ್ಲಿ ಇದ್ದಾರೆ. ಆದರೆ ಸಣ್ಣಪುಟ್ಟ ಅಪರಾಧಗಳ ಆರೋಪ ಹೊತ್ತು ಹತ್ತಾರು ವರ್ಷಗಳಿಂದ ವಿಚಾರಣಾಧೀನ ಕೈದಿಗಳಾಗಿ ಜೈಲುಗಳಲ್ಲಿ ಕೊಳೆಯುತ್ತಿರುವ ಸಾಮಾನ್ಯರನ್ನು ಕೇಳುವವರೇ ಇಲ್ಲ. ಅವರ್ಯಾರಿಗೂ ಮಗು, ಮಕ್ಕಳು, ಕುಟುಂಬಗಳು ಇಲ್ಲವೆ? ಅವರ ಪರವಾಗಿ ಈ ರಾಜಕಾರಣಿಗಳು ಏಕೆ ಮಾತನಾಡುವುದಿಲ್ಲ?

ರಾಜಕಾರಣಿಗಳ ವಕಾಲತ್ತನ್ನು ಮತ್ತು ಅಪರಾಧಿಗಳ-ಬಲಿಪಶುಗಳ ಕುಟುಂಬದವರು ಹೇಳಿದ್ದನ್ನು ಕೇಳಿಕೊಂಡು ನ್ಯಾಯದಾನ ಮಾಡುವ ಹಾಗಿದ್ದರೆ ದೇಶದಲ್ಲಿ ಸಂವಿಧಾನ ವ್ಯವಸ್ಥೆ, ಕೋಟರ್ು, ಕಾನೂನು ಕಟ್ಟಳೆಗಳಾದರೂ ಏಕಿರಬೇಕು?
 

ಜನತೆ - ಜನಪ್ರತಿನಿಧಿ

ಅಣ್ಣಾ ಹಜಾರೆ ಆಂದೋಲನದ ಕಾವು ಹೆಚ್ಚಾದ ಸಮಯದಲ್ಲಿ ಜನರ ಹಾಗೂ `ಜನಪ್ರತಿನಿಧಿಗಳ' ನಡುವಿನ ಕಂದಕ ಸ್ಪಷ್ಟವಾಗಿಯೇ ಕಂಡಿತು. ಅದನ್ನು ತಕ್ಷಣ ಸರಿಪಡಿಸದಿದ್ದರೆ ನಮ್ಮ ಪ್ರಜಾತಂತ್ರದ ಬುನಾದಿಯಲ್ಲೇ ಬಿರುಕು ಮೂಡುತ್ತದೆ.

ಆಂದೋಲನದ ಉದ್ದಕ್ಕೂ ಘರ್ಷಣೆಗೆ, ಮಥನಕ್ಕೆ ಕಾರಣವಾದ ಪದಗುಚ್ಛ `ಸಂಸತ್ತಿನ ಪರಮಾಧಿಕಾರ'. ಕಾನೂನುಗಳನ್ನು ರೂಪಿಸುವ ಅಧಿಕಾರ ಶಾಸನಸಭೆಗಳದು ಮಾತ್ರ ಎಂಬುದು ಇದರ ಅರ್ಥ. ಅದು ನಿಜ. ಆದರೆ ಈ ಸಭೆಗಳು ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬಾರದು ಎಂದು ಸಂವಿಧಾನದಲ್ಲಿ ಎಲ್ಲಿ ಹೇಳಿದೆ?

ವಾಸ್ತವವಾಗಿ ಜನರೇ (ಮತದಾರರು) ಸಂಸತ್ತಿನ ಸೃಷ್ಟಿಕರ್ತರು. ಕೋಟ್ಯಂತರ ಜನರು ಒಟ್ಟಾಗಿ ಕೂತು ಶಾಸನ ರೂಪಿಸುವುದು ಸಾಧ್ಯವಿಲ್ಲದ್ದರಿಂದ ಜನಪ್ರತಿನಿಧಿಗಳನ್ನು ಆರಿಸುವ ಪರಿಪಾಠ ಪ್ರಜಾತಂತ್ರದಲ್ಲಿ ಬಂದಿದೆ. ಹಾಗೆಂದ ಮಾತ್ರಕ್ಕೆ `ಜನರು ಇಲ್ಲಿ ಅಪ್ರಸ್ತುತ' ಎಂದು ಭಾವಿಸಬಾರದು. ಯಾವುದೇ ಜನಪ್ರತಿನಿಧಿ ತಾನೇ ಜನರಿಗಿಂತ ಹೆಚ್ಚು ಎಂದು ಭಾವಿಸುವುದು ಆದರ್ಶ ವ್ಯವಸ್ಥೆಯಲ್ಲ.

ನಮ್ಮ ಪ್ರಸಕ್ತ ವ್ಯವಸ್ಥೆ ಹೇಗಿದೆ? ಆಳುವ ಪಕ್ಷದ ನಾಯಕರು ಮನಸ್ಸು ಮಾಡಿದರೆ ಯಾವುದೇ ಶಾಸನಸಭೆಯ ಸದಸ್ಯರಲ್ಲದವರನ್ನು ಕರೆತಂದು ಆರು ತಿಂಗಳ ಕಾಲ ಮಂತ್ರಿಯಾಗಿಸಬಹುದು. ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಸ್ಥಾನಗಳನ್ನೂ ನೀಡಬಹುದು.  ಅವರು ತಮ್ಮ ಈ ಅಧಿನಾಯಕರು ಹೇಳಿದಂತೆ ಕೇಳಿದರೆ ಸಾಕು, ಅದೇ ಅವರ ಪರಮ `ಅರ್ಹತೆ'! ಈ ಕ್ರಮ ಜನರ ಅಭಿಪ್ರಾಯಕ್ಕೆ ಮಾನ್ಯತೆ ಕೊಡುತ್ತದೆಯೆ? ಜನರ ಹಕ್ಕಿಗೆ ಮನ್ನಣೆ ನೀಡುತ್ತದೆಯೆ? ಜನರ ಹಂಗೇ ಇಲ್ಲದೇ ಅಧಿಕಾರ ಹಿಡಿಯಬಹುದಾದ ಈ ಕ್ರಮ ಪ್ರಜಾತಂತ್ರದ ಮೂಲತತ್ತ್ವಗಳಿಗೆ ಬದ್ಧವಾಗಿದೆಯೆ? ಇದರಿಂದ ಸಂಸತ್ತಿನ/ವಿಧಾನಸಭೆಯ ಪಾರಮ್ಯಕ್ಕೆ ಯಾವ ಬೆಲೆ ಸಿಕ್ಕಂತಾಯಿತು?

ವಾಸ್ತವವಾಗಿ, `ಸಂಸತ್ತಿನ ಪಾರಮ್ಯ' ಎಂಬುದು ಸಂಪೂರ್ಣ ಪರಿಕಲ್ಪನೆಯಲ್ಲ. ಯಾವುದೇ ಸಾರ್ವಭೌಮ ದೇಶದ ಸಂಸತ್ತೇ ಆದರೂ ಅಂತಾರಾಷ್ಟ್ರೀಯ (ದ್ವಿಪಕ್ಷೀಯ, ಬಹುಪಕ್ಷೀಯ) ಒಪ್ಪಂದಗಳಿಗೆ ಬದ್ಧವಾಗಿರಲೇಬೇಕಾಗುತ್ತದೆ. ವಿಶ್ವಸಂಸ್ಥೆಯ ನಿರ್ಣಯಗಳನ್ನು ಅನುಮೋದಿಸಲೇಬೇಕಾಗುತ್ತದೆ. ಅದಕ್ಕೆ ತಕ್ಕ ಕಾನುನುಗಳನ್ನು ರೂಪಿಸಬೇಕಾಗುತ್ತದೆ. ಯೂನಿವರ್ಸಲ್ ಡಿಕ್ಲರೇಷನ್ ಆಫ್ ಹ್ಯೂಮನ್ ರೈಟ್ಸ್, ಸಿಟಿಬಿಟಿ, ಎನ್ಪಿಟಿ, ಕ್ಯೋಟೋ ಪ್ರೋಟೋಕಾಲ್, ಗ್ಯಾಟ್, ಸೆಕ್ಯೂರಿಟಿ ಕೌಂಸಿಲ್ ರೆಸಲ್ಯೂಷನ್ಸ್ - ಇವೆಲ್ಲ ಜಾಗತಿಕ ಮಟ್ಟದಲ್ಲಿ ಎಲ್ಲ ಸದಸ್ಯರಾಷ್ಟ್ರಗಳಿಗೂ, ಅಂಕಿತ ಹಾಕಿದ ದೇಶಗಳಿಗೂ ಅನ್ವಯವಾಗುತ್ತವೆ.
(ವಿಶ್ವಸಂಸ್ಥೆಯ ಸುರಕ್ಷಾ ಮಂಡಳಿಯ ನಿರ್ಣಯ 1373 ಅನ್ವಯ ವಿಶೇಷ ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ನು ರೂಪಿಸಬೇಕು. ಈ ಅಂತಾರಾಷ್ಟ್ರೀಯ ನಿರ್ಣಯಕ್ಕೆ ಭಾರತ ಬದ್ಧವಾಗಿದೆ. ಆದರೂ ಅದನ್ನು ಸರಿಯಾಗಿ ಪಾಲಿಸಿಲ್ಲ).

ಹಾಗೆ ನೋಡಿದರೆ ಸಂಸತ್ತಿನ ಪಾರಮ್ಯಕ್ಕೆ ಧಕ್ಕೆ ತಂದಿರುವುದು ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿ. ನಮ್ಮ ಸಂವಿಧಾನದಲ್ಲಿ ಈ ರೀತಿಯ ಮಂಡಳಿಗಳ ಪರಿಕಲ್ಪನೆಯೇ ಇಲ್ಲ. `ಇಂತಿಂತಹ ಕಾನೂನುಗಳನ್ನು ಮಾಡಿ' ಎಂದು ಸಂಸತ್ತಿಗೆ ಹೇಳುತ್ತ ಹೋಗುವ ಒಂದು ಶಾಶ್ವತ ಮಂಡಳಿ ಏಕೆ ಬೇಕು? ಹೀಗಿರುವಾಗ `ನಮಗೆ ಪ್ರಬಲವಾದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಬೇಕು' ಎಂದು ಕೋಟ್ಯಂತರ ಜನರು ಬಯಸಿದ್ದು ಸಂಸತ್ತಿನ ಪಾರಮ್ಯಕ್ಕೆ ಚ್ಯುತಿ ತರುತ್ತದೆಯೆ?

ತಮ್ಮ ಸ್ವಹಿತಾಕ್ತಿಗೆ ಧಕ್ಕೆ ಬರಬಹುದು ಎಂಬ ಭಾವನೆಯಿಂದ ಕೆಲವು ಸಂಸದರು ಕೆಲವೊಂದು ಪ್ರಬಲ ಕಾನೂನುಗಳನ್ನು ವಿರೋಧಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂತಹ ವಿಶೇಷ ಸಮಯದಲ್ಲಿ ಜನರು ಒಟ್ಟಾಗಿ ತಮ್ಮ ಅಭಿಪ್ರಾಯವನ್ನು ಪ್ರಕಟ ಮಾಡಿದ್ದು ತಪ್ಪಲ್ಲ. ಉಳಿದಂತೆ, ಸಂಸತ್ತಿನ ಪಾರಮ್ಯವನ್ನು ಜನರೂ ಒಪ್ಪಬೇಕು. ತಮಗೆ ಬೇಕಾದ ಹಾಗೆ ಕಾನೂನುಗಳನ್ನು ಬರೆಸಿಕೊಳ್ಳಲು ಕೆಲವು ಎನ್ಜಿಓಗಳು ಹಪಹಪಿಸುತ್ತಿರುವುದೂ ಕಟುವಾಸ್ತವವೇ. ಈ ಕುರಿತು ಜನರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ನಮ್ಮ ಸಂಸತ್ತು, ನಮ್ಮ ಪ್ರತಿನಿಧಿಗಳು, ನಮ್ಮದೇ ಜನರ ಮಾತುಗಳನ್ನು ಪ್ರಾಮಾಣಿಕವಾಗಿ ಆಲಿಸುವುದರಲ್ಲಿ ತಪ್ಪಿಲ್ಲ. ಹಾಗೆ ಮಾಡುವುದರಿಂದ ಯಾರ ಕಿರೀಟವೂ ಕಳಚಿ ಬೀಳುವುದಿಲ್ಲ. ಬದಲಾಗಿ ನಮ್ಮ ಪ್ರಜಾತಂತ್ರ ವಿಶ್ವಕ್ಕೇ ಮಾದರಿಯಾಗುತ್ತದೆ. ಜನರಲ್ಲೂ ತಮ್ಮ ಪ್ರತಿನಿಧಿಗಳ ಬಗ್ಗೆ ಗೌರವ ಮೂಡುತ್ತದೆ. ಸಂಸತ್ತಿನ ಅಭಿಪ್ರಾಯವೇ ಜನರ ಅಭಿಪ್ರಾಯ ಎಂದು ಭಾವಿಸುವುದರ ಬದಲು ಬಹುಜನತೆಯ ಅಭಿಪ್ರಾಯವೇ ಸಂಸತ್ತಿನ ಅಭಿಪ್ರಾಯ ಎನ್ನುವಂತಾಗುವುದೇ ನಿಜವಾದ ಪ್ರಜಾತಂತ್ರ. 
 

ರಾಜಕಾರಣಿಗಳೆಂದರೆ ವಾಕರಿಕೆ

ಆಗಸ್ಟ್ ಮೊದಲ ವಾರಾಂತ್ಯ ಬ್ರಿಟನ್ ಪಾಲಿಗೆ ಕರಾಳವಾಯಿತು. ಟೋಟೆನ್ಹ್ಯಾಮ್ನ ಯಾರೋ ಸ್ಥಳೀಯ `ವಾಂಟೆಡ್' ವ್ಯಕ್ತಿ ಪೊಲೀಸರ ಗುಂಡಿಗೆ ಬಲಿಯಾದ. ಆ ಘಟನೆ ಪ್ರತಿಭಟನೆಗೆ ನಾಂದಿಯಾಯಿತು. ನಂತರ ಹಠಾತ್ತಾಗಿ ಗ್ಯಾಂಗ್ ಯುವಕರ ದಂಗೆ ಭುಗಿಲೆದ್ದಿತು. ನಂತರ ಮೂಲ ಘಟನೆಗೆ ಸಂಬಂಧವೇ ಇಲ್ಲದೆ ಲಂಡನ್, ಬಮರ್ಿಂಗ್ಹ್ಯಾಮ್, ಬ್ರಿಸ್ಟಲ್, ಲಿವರ್ಪೂಲ್ ಮುಂತಾದ ಮಹಾನಗರಗಳು ಹತ್ತಿ ಉರಿಯತೊಡಗಿದವು. 10 ವರ್ಷದ ಬಾಲಕರೂ ದಂಗೆಗೆ ಧುಮುಕಿದರು! ಅಂಗಡಿ ಮುಂಗಟ್ಟುಗಳ ಲೂಟಿ ಆರಂಭವಾಯಿತು. ಮಹಿಳೆಯರೂ ಅಂಗಡಿಗಳಿಗೆ ನುಗ್ಗಿ ಸಿಕ್ಕಿದ್ದನ್ನು ದೋಚತೊಡಗಿದರು. ದೊಂಬಿ ಮಾನಸಿಕತೆ ತನ್ನ ಪೈಶಾಚಿಕ ಸ್ವರೂಪದಲ್ಲಿ ವಿಜೃಂಭಿಸಿ ಅರಾಜಕತೆಯನ್ನು ಸೃಷ್ಟಿಸಿತು.

ಬ್ರಿಟನ್ ದಂಗೆಗಳಿಗೆ ನಿಜವಾದ ಕಾರಣ ಏನು? ಆಥರ್ಿಕ ಅಸಮಾನತೆ, ಸಾಮಾಜಿಕ ಬೆಸುಗೆಯ ಕೊರತೆ - ಎಂದೆಲ್ಲ ಏನೇನೋ ವಿಶ್ಲೇಷಣೆಗಳು ಬರುತ್ತಿವೆ. ಆದರೆ ಒಂದಂತೂ ಸ್ಪಷ್ಟ. ಅದು ರಾಜಕಾರಣಿಗಳ ಮೇಲೆ ಜನರಿಗಿರುವ ಕೋಪ, ಹತಾಶೆ. ದಂಗೆಗಳಲ್ಲಿ ಭಾಗವಹಿಸಿದ್ದ ಜನರೆಲ್ಲ ರಾಜಕಾರಣಿಗಳ ಮೇಲಿನ ತಮ್ಮ ಕೋಪವನ್ನು ಬಹಿರಂಗವಾಗಿ ಮಾಧ್ಯಮದವರ ಮುಂದೆ ತೋಡಿಕೊಂಡಿದ್ದು ಗಮನಾರ್ಹ. `ನನ್ನ ತೆರಿಗೆ ಹಣವನ್ನು ಹಿಂದಕ್ಕೆ ಪಡೆಯುತ್ತಿದ್ದೇನೆ' ಎಂದು ಯಾವುದೋ ಅಂಗಡಿಯನ್ನು ಕೊಳ್ಳೆ ಹೊಡೆಯುತ್ತಿದ್ದ ಮಹಿಳೆಯೊಬ್ಬಳು ನೀಡಿದ ಹೇಳಿಕೆ ಪರಿಸ್ಥಿತಿಯ ಸೂಚಕ.

ಈಗ ಸಮಸ್ತ ಜನರ ದ್ವೇಷ, ಅಸಹ್ಯ ಹಾಗೂ ತಿರಸ್ಕಾರಕ್ಕೆ ಒಳಗಾಗಿರುವ, ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವ ಯಾವುದಾದರೂ ಒಂದು ವರ್ಗ, ಸಮುದಾಯವಿದ್ದರೆ, ಅದು ರಾಜಕಾರಣಿಗಳದು. ಹಣದ ಮೌಲ್ಯಕ್ಕಿಂತಲೂ ವೇಗವಾಗಿ ರಾಜಕಾರಣಿಗಳ ವ್ಯಕ್ತಿತ್ವದ ಮೌಲ್ಯ ಕುಸಿಯುತ್ತಿರುವುದು ಈಗ ಜಾಗತಿಕ ಮಟ್ಟದ ವಿದ್ಯಮಾನ. ಒಂದೊಂದು ದೇಶದಲ್ಲಿ ಒಂದೊಂದು ಪ್ರಧಾನ ಕಾರಣಕ್ಕಾಗಿ ರಾಜಕಾರಣಿಗಳ ವಿಷಯದಲ್ಲಿ ಹೇಸಿಗೆ ಹುಟ್ಟುತ್ತಿದೆ. ಭಾರತದಲ್ಲಿ ಭ್ರಷ್ಟಾಚಾರ, ಅಮೆರಿಕದಲ್ಲಿ ಆಥರ್ಿಕ ನಿರ್ವಹಣೆಯ ವೈಫಲ್ಯ, ಬ್ರಿಟನ್ನಿನಲ್ಲಿ ಅವ್ಯವಸ್ಥೆಯ ವಿರುದ್ಧದ ಒಳಗುದಿ - ಹೀಗೆ.

ಭಾರತದಲ್ಲಿ ನಿತ್ಯವೂ ಭ್ರಷ್ಟಾಚಾರ ವಿಜೃಂಭಿಸುತ್ತಿದೆ. 2ಜಿ-3ಜಿ ಹಗರಣ, ಕಾಮನ್ವೆಲ್ತ್ ಹಗರಣ, ಭೂಸ್ವಾಧೀನ ಹಗರಣ, ಸ್ವಿಸ್ ಬ್ಯಾಂಕ್-ಟ್ಯಾಕ್ಸ್ ಹೆವೆನ್ ಹಗರಣ, ಸಂಸದರ ಖರೀದಿಯ `ವೋಟಿಗಾಗಿ-ನೋಟು' ಹಗರಣ, ಆದರ್ಶ ಸೊಸೈಟಿ ಹಗರಣ, ಗಣಿ ಹಗರಣ, ರಿಯಲ್ ಎಸ್ಟೇಟ್ ಹಗರಣ, ಖರೀದಿ ಕಿಕ್ಬ್ಯಾಕ್ ಹಗರಣ, ಮಂತ್ರಿಗಳು ಹಾಗೂ ಮಾಜಿ ನ್ಯಾಯಾಧೀಶರೂ ಸೇರಿದಂತೆ ಅನೇಕ ಉನ್ನತ ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣಗಳು - ಒಂದೇ ಎರಡೆ? ಹಳೆಯ ಭ್ರಷ್ಟಾಚಾರದ ವಿಷಯ ಹಾಗಿರಲಿ, ಕಳೆದ ಐದು ವರ್ಷಗಳಲ್ಲಿ ಒಟ್ಟು ಎಷ್ಟು ಹಗರಣಗಳು ಬೆಳಕಿಗೆ ಬಂದಿವೆ ಎಂಬುದರ ಯಾದಿ ತಯಾರಿಸುವುದೇ ಕಷ್ಟದ ಕೆಲಸ.

ಈಚೆಗಷ್ಟೇ ಸಂಸತ್ತಿನಲ್ಲಿ ಮಂಡನೆಯಾಗಿರುವ ಲೋಕಪಾಲ್ ಮಸೂದೆಗೆ ಜನರ ಮಟ್ಟದಲ್ಲಿ ಕವಡೆಯ ಕಿಮ್ಮತ್ತೂ ಕಂಡುಬರುತ್ತಿಲ್ಲ. ಸಿಬಿಐ ಸೇರಿದಂತೆ ಹಗರಣಗಳ ತನಿಖೆಗೆ ಹೊರಟಿರುವ ಸಕರ್ಾರಿ ತನಿಖಾ ಸಂಸ್ಥೆಗಳು, ತಮ್ಮ ಕೆಲಸವನ್ನು ಸರಿಯಾಗಿ ಮಾಡದೇ ಇರುವ ಕಾರಣಕ್ಕಾಗಿ ಪದೆ ಪದೇ ಕೋಟರ್ಿನಿಂದ ಛೀಮಾರಿ ಹಾಕಿಸಿಕೊಂಡು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ತಮ್ಮ ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವವರನ್ನು ಬಗ್ಗುಬಡಿಯಲು ರಾಜಕಾರಣಿಗಳು ನಡೆಸಿರುವ ಬಹಿರಂಗ ಕಸರತ್ತುಗಳು ಜನರಲ್ಲಿ ತೀವ್ರ ಅಸಹ್ಯ ಹುಟ್ಟಿಸಿದೆ.

ಲಂಡನ್ ದಂಗೆಗಳು ಯಾವುದೇ ಸಮಸ್ಯೆಗೆ ಪರಿಹಾರ ಕೊಡಲಾರವು. ದಂಗೆ ನಡೆಸುವುದು, ಗ್ಯಾಂಗುಗಳನ್ನು ಸಂಘಟಿಸುವುದು - ಇವೆಲ್ಲ ಅನಾಗರಿಕ, ಅಮಾನವೀಯ ಹಾಗೂ ಅರಾಜಕ ಕ್ರಮಗಳು. ಸಾರ್ವಜನಿಕ ಅಪರಾಧಗಳು. ಆದರೂ ಯಾವುದೋ ಆಂತರಿಕ ಅವ್ಯವಸ್ಥೆಯ ರೋಗದ ಹೊರಲಕ್ಷಣದ ರೂಪದಲ್ಲಿ ದಂಗೆಯು ತೋರಿಕೊಳ್ಳುವ ಅಪಾಯವಿದೆ. ಅದನ್ನು ಯಾರೂ ನಿರ್ಲಕ್ಷಿಸುವ ಹಾಗಿಲ್ಲ. ಇದು ಭಾರತಕ್ಕೂ ಎಚ್ಚರಿಕೆಯ ಗಂಟೆಯಾಗಬೇಕು.
 

ಯಡಿಯೂರಪ್ಪ ಪತನಕ್ಕೆ ಕಾರಣವೇನು?

ಬಿ. ಎಸ್. ಯಡಿಯೂರಪ್ಪನವರ ಆಡಳಿತ 38 ತಿಂಗಳಿಗೇ ಪತನವಾಗಿದ್ದರ ಮಥಿತಾರ್ಥವೇನು? ಇದು ಒಂದು ಗ್ರಂಥಕ್ಕಾಗುವಷ್ಟು ಸಂಕೀರ್ಣ ವಿಷಯ. ಅಭಿವೃದ್ಧಿಯ ಕಿರೀಟಕ್ಕಾಗಿ ಹರಸಾಹಸ ಪಡುವಾಗಲೇ ಹಗರಣಗಳ ಉರುಳು ಅವರಿಗೆ ಸುತ್ತಿಕೊಂಡಿದ್ದು ವಿಪಯರ್ಾಸ.

ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಮಯದಲ್ಲಿ, ಹಾಗೂ ಅನಂತರ ಹಲವು ಬಾರಿ, `ಗುಜರಾತ್ ಮಾದರಿಯ ಆಡಳಿತ ನೀಡುತ್ತೇನೆ' ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಅದು ಪೂರ್ಣವಾಗಿ ಸಾಧ್ಯವಾಗಲಿಲ್ಲ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯ ರೀತಿಯಲ್ಲೇ ಯಡಿಯೂರಪ್ಪನವರು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಿದ್ದು ವಾಸ್ತವ. ಆದರೆ ಈ ಹೋಲಿಕೆ ಅಲ್ಲಿಗೇ ನಿಂತಿದ್ದೂ ವಾಸ್ತವ. ಮೋದಿಗಿಲ್ಲದ ಸಮಸ್ಯೆಗಳು ಯಡಿಯೂರಪ್ಪನವರನ್ನು ಮುತ್ತಿಕೊಂಡವು. ವೈಯಕ್ತಿಕ ಮಟ್ಟದ ಆರೋಪಗಳು ಬರದಂತೆ ಅವರು ಎಚ್ಚರವಹಿಸಬೇಕಿತ್ತು.

ಯಾವುದೇ ನಿದರ್ಿಷ್ಟ ಆರೋಪದ ಸತ್ಯಾಸತ್ಯತೆ ಎಷ್ಟಿದೆ ಎಂಬುದು ಬೇರೆಯದೇ ವಿಷಯ. ಇದಕ್ಕೆ ಲೋಕಾಯುಕ್ತ ವರದಿಯೂ ಸೇರುತ್ತದೆ. ಇಂತಹ ವಿಷಯಗಳು ನ್ಯಾಯಾಲಯಗಳ ಕಕ್ಷೆಗೆ ಬರುತ್ತವೆ. ಅಲ್ಲಿನ ತೀಮರ್ಾನಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ.

ಯಾವುದೇ ದೊಡ್ಡ ಕಳಂಕ ಸುತ್ತಿಕೊಳ್ಳದಂತೆ ನೋಡಿಕೊಳ್ಳುವುದು ಆಯಾ ನಾಯಕರ ಕೈಯಲ್ಲೇ ಇದೆ. ನರೇಂದ್ರ ಮೋದಿಗೂ ಆಂತರಿಕ ಹಾಗೂ ಬಾಹ್ಯ ಶತ್ರುಗಳಿದ್ದಾರೆ. ಆದರೂ ಭ್ರಷ್ಟಾಚಾರ ಹಗರಣಗಳು ಅವರ ಕತ್ತಿಗೆ ಸುತ್ತಿಕೊಂಡಿಲ್ಲ. ಹಗರಣಗಳಿಲ್ಲದ, ಅಭಿವೃದ್ಧಿಯೇ ಮಂತ್ರವಾಗಿರುವ ಆಡಳಿತವನ್ನು ಈವರೆಗೆ ನೀಡಲು ಸಾದ್ಯವಾಗಿರುವುದೇ ಅವರ ಯಶಸ್ಸಿನ ಗುಟ್ಟು. ಅದರಿಂದಲೇ ಅವರಿಗೆ ಜಾತಿಯ ಬಣ್ಣವಿಲ್ಲದ, ವರ್ಗಗಳ ಹಂಗಿಲ್ಲದ ಜನಬೆಂಬಲ ಲಭಿಸಿದೆ. ಕಟ್ಟುನಿಟ್ಟಿನ, ಕಳಂಕರಹಿತ ಆಡಳಿತದಿಂದಲೇ ಪಕ್ಷದ ಒಳಗಿನ ಹಾಗೂ ಹೊರಗಿನ ವಿರೋಧಿಗಳನ್ನು ನಿರ್ವಹಿಸುವುದು ಅವರಿಗೆ ಸಾಧ್ಯವಾಗಿದೆ.

ಎಲ್ಲರಿಗೂ ತಿಳಿದಿರುವ ಹಾಗೆ ಇಂದು ರಚನಾತ್ಮಕ ವಿರೋಧಪಕ್ಷಗಳ ವ್ಯವಸ್ಥೆ ಕಾಣಸಿಗುವುದು ಬರೀ ಪಠ್ಯಪುಸ್ತಕಗಳಲ್ಲಿ ಮಾತ್ರ. ಯಾವುದೇ ಆಡಳಿತವಾದರೂ ವಿಧ್ವಂಸಕ ವಿರೋಧಪಕ್ಷಗಳ ನಡುವೆಯೇ ಕೆಲಸ ಮಾಡಬೇಕಾಗಿರುವುದು ಈ ಕಾಲದ ಕರ್ಮ. ಏಕಪಕ್ಷದ ಆಡಳಿವಿದ್ದರೂ ಭಿನ್ನಮತದ ಕಾಟ ಯಾರಿಗೂ ತಪ್ಪಿದ್ದಲ್ಲ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಆಳುವ ಪಕ್ಷಗಳು ಬೇರೆಬೇರೆಯಾಗಿದ್ದರೆ ರಾಜ್ಯ ಸಕರ್ಾರದ ಪಾಲಿಗೆ ರಾಜ್ಯಪಾಲರೂ ವಿರೋಧ ಪಕ್ಷದ ನಾಯಕರಂತೆಯೇ ಆಗಬಹುದು. ಇವೆಲ್ಲದರ ಮಧ್ಯೆ ಕೆಲಸ ಮಾಡಿ, ಉತ್ತಮ ಫಲಿತಾಂಶ ತೋರಿಸಬೇಕಾದರೆ ಅಪರಿಮಿತ ತಾಳ್ಮೆ ಬೇಕಾಗುತ್ತದೆ. ವೈಯಕ್ತಿಕ ನಯಗಾರಿಕೆಯೂ ಬೇಕು. ಸಮ್ಮಿಶ್ರ ಸಕರ್ಾರವನ್ನು ತೂಗಿಸಿಕೊಂಡು ನಡೆಸಲು ಅಗತ್ಯವಾದ ಕಸರತ್ತು ಭಿನ್ನಮತೀಯರು ತುಂಬಿಕೊಂಡಿರುವ ಏಕಪಕ್ಷದ ಸಕರ್ಾರವನ್ನು ನಡೆಸುವಾಗಲೂ  ಅಗತ್ಯವಾಗುತ್ತದೆ.

ಯಡಿಯೂರಪ್ಪನವರನ್ನು ಮೇಲಿನ ಎಲ್ಲ ಅಂಶಗಳೂ ಋಣಾತ್ಮಕ ಸ್ವರೂಪದಲ್ಲಿ ಕಾಡಿದ್ದು ಗಮನಾರ್ಹ ಸಂಗತಿ. 

ಸತ್ವ`ಹೀನ' ಪತ್ರಿಕೋದ್ಯಮ

26 ಲಕ್ಷ ಪ್ರಸಾರ ಸಂಖ್ಯೆಯನ್ನು ಹೊಂದಿದ್ದ, ರ್ಯೂಪಟರ್್ ಮಡರ್ೋಕ್ ಒಡೆತನದ, `ನ್ಯೂಸ್ ಆಫ್ ದಿ ವಲ್ಡರ್್' ಬ್ರಿಟಿಷ್ ಟ್ಯಾಬ್ಲಾಯ್ಡ್ ಫೋನ್ ಹ್ಯಾಕಿಂಗ್ ಹಗರಣದಿಂದಾಗಿ ಇತಿಹಾಸದ ಕಸದಬುಟ್ಟಿಯನ್ನು ಸೇರಿದೆ. ಬೃಹತ್ ಗಾತ್ರ ಹಾಗೂ ಬೇಟೆಗಾರ ಮನೋಭಾವಗಳಲ್ಲಿ ತಿಮಿಂಗಿಲ ಹಾಗೂ ಶಾಕರ್್ಗಳೆರಡನ್ನೂ ಹೋಲುವ ಮಡರ್ೋಕ್ ಮಾಧ್ಯಮ ಸಾಮ್ರಾಜ್ಯ ಆಂತರಿಕ ಸ್ಪೋಟಕ್ಕೆ ತುತ್ತಾಗಿದೆ.

ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ಅತಿರೇಕಗಳೇ ಈ ಸ್ಫೋಟಕ್ಕೆ ಕಾರಣ. ವಾಸ್ತವವಾಗಿ `ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ' ಎಂಬ ಋಣಾತ್ಮಕ ಅರ್ಥ ಹೊಂದಿರುವ, ಹೀನ ಆಚರಣೆಗೆ ಚಾಲನೆ ನೀಡಿದ್ದು ಬ್ರಿಟಿಷ್ ಪತ್ರಿಕಾ ರಂಗವೇ. `ಟ್ಯಾಬ್ಲಾಯ್ಡ್ಗಳನ್ನು ನಿಯಂತ್ರಿಸಬೇಕು' ಎಂಬ ಕೂಗು ಇದೀಗ ಬ್ರಿಟನ್ನಿನಲ್ಲಿಯೇ ಪ್ರಬಲವಾಗುತ್ತಿದೆ. ಇದು ಇತಿಹಾಸಪಥದ ವೈಚಿತ್ರ್ಯ, ವೈಶಿಷ್ಟ್ಯ.

ಸುಸ್ಥಿರ ನಿಯಮಗಳ ಅನುಸಾರವಾಗಿ ನಡೆಯುತ್ತಿರುವುದು ಜಗತ್ತಿನ ಧರ್ಮ. ಕ್ರಮಬದ್ಧ, ಸುಸಂಗತ ಭೌತಿಕ ನಿಯಮಗಳಿಲ್ಲದ ಯಾವುದೂ ಬ್ರಹ್ಮಾಂಡದಲ್ಲಿ ಊಜರ್ಿತವಾಗುವುದಿಲ್ಲ. ವಿಜ್ಞಾನ ತಿಳಿದವರಿಗೆಲ್ಲ ಇದು ಗೊತ್ತು. ಪತ್ರಿಕೋದ್ಯಮವೇನೂ ಇದಕ್ಕೆ ಹೊರತಲ್ಲ.

ಸಾರ್ವಜನಿಕ ಹಿತದ ಉದ್ದೇಶವಿಲ್ಲದ, ವೈಯಕ್ತಿಕ ನೆಲೆಯ ಇಣುಕುಕಿಂಡಿ ಪತ್ರಿಕೋದ್ಯಮ ಕೆಲಕಾಲ ಕೆಲವರಿಗೆ ರುಚಿಸಬಹುದು. ಮಾರುವವರಿಗೆ ಹಣವನ್ನೂ ಕೊಳ್ಳುವವರಿಗೆ ರೋಮಾಂಚನವನ್ನೂ ನೀಡಬಹುದು. ಆದರೆ ಅದರದೇ ಆಂತರಿಕ ಅತಿರೇಕಗಳಿಂದಾಗಿ ಅದರ ಕುಸಿತ ಅನಿವಾರ್ಯವಾಗುತ್ತದೆ.

ಸೆಕ್ಸ್, ಡ್ರಗ್ಸ್, ಜನರ ಖಾಸಗಿ ಬದುಕಿನ ಇಣುಕು ನೋಟ, ಸುದ್ದಿಯ ಕೃತಕ ಸೃಷ್ಟಿ ಎಲ್ಲೆ ಮೀರಿದ ರೋಚಕತೆ, ರಾಜಕೀಯ ಹಾಗೂ ಅಪರಾಧಿ ಜಗತ್ತಿನ ಬಾಂಧವ್ಯ,  ಬ್ಲಾಕ್ಮೇಲ್, ರೋಲ್ಕಾಲ್  - ಇತ್ಯಾದಿ ಅತಿರೇಕಗಳು `ಟ್ಯಾಬ್ಲಾಯ್ಡ್ ಕಲ್ಚರ್' ಎನಿಸಿಕೊಂಡಿವೆ. `ಟ್ಯಾಬ್ಲಾಯ್ಡ್' ಎಂಬುದು ಕೇವಲ ಗಾತ್ರ ಸೂಚಕ ಪದವಾಗಿ ಉಳಿದಿಲ್ಲ. ಹೀನ ಪತ್ರಿಕೋದ್ಯಮದ ಒಂದು ಅನ್ವರ್ಥನಾಮ ಅದು. ತನ್ನ ಬಣ್ಣಿಸುವ, ಇದಿರ ಹಳಿಯುವ ಸ್ವರೂಪ ಅದರದು. ಆಲ್ಫ್ರೆಡ್ ಹಾಮ್ಸರ್್ವಥರ್್ (1865-1922) ಎಂಬ ಬ್ರಿಟಿಷ್ ಪತ್ರಿಕೋದ್ಯಮಿ ಅದರ ದೊಡ್ಡ ರೂವಾರಿ. ಬಹುರಾಷ್ಟ್ರೀಯ ಮಾಧ್ಯಮ ದೊರೆ ರ್ಯೂಪಟರ್್ ಮಡರ್ೋಕ್ ಈಗಿನ ಕಾಲದ ಅದರ ದೊಡ್ಡ ಫಲಾನುಭವಿ.

`ಜಂಕ್ಫೂಡ್' ತಿನ್ನಲು ರುಚಿಕರ. ಆದರೆ ಸತ್ವಹೀನ. ಪೋಷಕಾಂಶವಿಲ್ಲದ ಇಂಧನಶಕ್ತಿಯ ಪರಿಣಾಮ ಅನಾರೋಗ್ಯ. ಅದು ಕೆಲವರಿಗೆ ಪ್ರಿಯವಾಗಿರಬಹುದು. ಆದರೆ ಖಂಡಿತ ಹಿತಕರವಲ್ಲ. ಪ್ರಿಯವಾದುದೆಲ್ಲ ಹಿತವನ್ನು ಸಾಧಿಸುತ್ತದೆ ಎಂದೇನಿಲ್ಲ.

ವಾಸ್ತವವಾಗಿ, ಖಾಸಗಿ ಬದುಕಿನ ಕುರಿತು ಪ್ರಬಲವಾದ ಕಾನೂನುಗಳನ್ನು ಹೊಂದಿರುವ ಪಶ್ಚಿಮದ ಜಗತ್ತು ಟ್ಯಾಬ್ಲಾಯ್ಡ್ ಅತಿರೇಕಗಳನ್ನು ಇಷ್ಟುಕಾಲ ಸಹಿಸಿಕೊಂಡಿದ್ದೇ ಸೋಜಿಗದ ಸಂಗತಿ. ಖಾಸಗಿ ಬದುಕಿನ ಅನಾವರಣವನ್ನೇ `ಪತ್ರಿಕೋದ್ಯಮ' ಎನ್ನುವ ವ್ಯಾಖ್ಯೆ ಸರ್ವಕಾಲದಲ್ಲೂ ಪ್ರಶ್ನಾರ್ಹ. ಅಂತಹ ಪರಿಕಲ್ಪನೆಯನ್ನು ಪ್ರಶ್ನಿಸುವ ಪ್ರಕ್ರಿಯೆ ಈಗ ಆರಂಭವಾಗಿದೆ. ಇದು ಸ್ವಾಗತಾರ್ಹ. ಭಾರತದಲ್ಲೂ ಇಂತಹ ಪ್ರಕ್ರಿಯೆ ಚುರುಕಾಗಬೇಕು.

ಜನರು ಇನ್ನೆಷ್ಟು ದಿನ ಸಹಿಸಬೇಕು?

ಮುಂಬೈ ಜವೇರಿ ಬಜಾರ್ ತರಹದ ಸರಣಿ ಬಾಂಬ್ ಸ್ಫೋಟ ನಡೆದಿದ್ದರೆ ಅಮೆರಿಕದ ಬರಾಕ್ ಒಬಾಮಾ, ಬ್ರಿಟನ್ನಿನ ಡೇವಿಡ್ ಕ್ಯಾಮರೂನ್, ರಷ್ಯಾದ ವ್ಲಾದಿಮೀರ್ ಪುಟಿನ್ - ಇವರೆಲ್ಲರ ಸಕರ್ಾರಗಳು ಹೇಗೆ ವತರ್ಿಸುತ್ತಿದ್ದವು ಎಂಬುದು ಸರ್ವವಿದಿತ. 9/11 ನಂತರ ಅಮೆರಿಕದಲ್ಲಿ ಈವರೆಗೂ ಮತ್ತೊಂದು ದಾಳಿ ನಡೆದಿಲ್ಲ ಎಂಬುದು ಕೇವಲ ಆಕಸ್ಮಿಕವಲ್ಲ.

1993ರ ಸರಣಿ ಸ್ಫೋಟದ ನಂತರ ಈಗಿನ 13/7 ದಾಳಿಯವರೆಗೆ ಮುಂಬೈ ನಗರದಲ್ಲಿ 14 ಭಯೋತ್ಪಾದಕ ದಾಳಿಗಳು ನಡೆದಿವೆ. ಒಟ್ಟು 443 ಮಂದಿ ಬಲಿಯಾಗಿದ್ದಾರೆ. 2383 ಮಂದಿ ಗಾಯಾಳುಗಳಾಗಿದ್ದಾರೆ.

ಆದರೆ, `ಶೇ. 99 ದಾಳಿಗಳನ್ನು ಯಶಸ್ವಿಯಾಗಿ ತಡೆಯಲಾಗಿದೆ. ಇದು ಕೇವಲ ಶೇ. 1ರ ಅಡಿ ಬರುವ ದಾಳಿ. ಇಂತಹುದನ್ನು ಏನೂ ಮಾಡಲಾಗದು' ಎಂಬುದು ರಾಹುಲ್ ಗಾಂಧಿಯ ನುಡಿಮುತ್ತು. `ಹಠಾತ್ತಾಗಿ ಅಚ್ಚರಿ ಹುಟ್ಟಿಸುವ ರೀತಿ ದಾಳಿ ಮಾಡುವುದೇ ಭಯೋತ್ಪಾದಕರಿಗೆ ಇರುವ ಅನುಕೂಲತೆ' ಎಂಬುದು ಸ್ವಯಂ ಪ್ರಧಾನಿಯ ಹೇಳಿಕೆ! ಇದೇ ಪ್ರಧಾನಿ 26/11 ದಾಳಿಯ ನಂತರ, `ಇನ್ನೆಂದೂ ಇಂತಹ ದಾಳಿ ಮರುಕಳಿಸದ ಹಾಗೆ ಮಾಡುತ್ತೇವೆ ನೋಡುತ್ತಿರಿ' ಎಂದಿದ್ದರು.

ಜನ ನೋಡುತ್ತಲೇ ಇದ್ದಾರೆ. ಒಳಗೆ ನೋವಿದ್ದರೂ ಹೊರ-ಆಕ್ರೋಶಕ್ಕೆ ತ್ರಾಣವಿಲ್ಲದವರಾಗಿದ್ದಾರೆ. ಇಂದು ಬೀದಿಗಿಳಿದು `ಸ್ಲಟ್ ವಾಕ್' ಮಾಡಲು ಸಮೃದ್ಧವಾಗಿ ಜನರು ಸಿಗುತ್ತಾರೆ. ಆದರೆ, ಭ್ರಷ್ಟಾಚಾರ, ಭಯೋತ್ಪಾದನೆಯ ವಿಷಯದಲ್ಲಿ ಎಂತಹುದೋ ಮಂಕುಮೌನ ಆವರಿಸಿಕೊಂಡಿದೆ.

ಇದೀಗ ಬಿಡುಗಡೆಯಾಗಿರುವ ತಮ್ಮ ಹೊಸ ಪುಸ್ತಕ `ಡಸ್ ಹಿ ನೋ ಎ ಮದರ್ಸ್ ಹಾಟರ್್?'ನಲ್ಲಿ ಅರುಣ್ ಶೌರಿ, ವೈಯಕ್ತಿಕ ನೆಲೆಯ ನೋವು-ಸಂಕಟಗಳಿಗೆ ಏನು ಕಾರಣ ಎಂದು ವಿಶ್ಲೇಷಿಸಿದ್ದಾರೆ. ಪಾಪ ಸಿದ್ಧಾಂತ - ಕರ್ಮ ಸಿದ್ಧಾಂತ ಸೇರಿದಂತೆ ಎಲ್ಲ ಮತಧರ್ಮಗಳನ್ನು ಜಾಲಾಡಿದ್ದಾರೆ. ಹಾಗೇ ರಾಷ್ಟ್ರವನ್ನು ಸಮಷ್ಟಿ ನೆಲೆಯಲ್ಲಿ ಭ್ರಷ್ಟರು, ಭಯೋತ್ಪಾದಕರು ಸಂಕಟ, ನರಳಾಟಗಳಿಗೆ ಸಿಲುಕಿಸಿರಲು ಏನು ಕಾರಣ? ಸಮಾಜವು ಸಮಷ್ಟಿ ನೆಲೆಯಲ್ಲಿ ಯಾವ ಪಾಪವನ್ನು ಮಾಡಿತ್ತು - ಎಂಬುದನ್ನೆಲ್ಲ ಜಾಲಾಡುವವರಾರು?

ಭಯೋತ್ಪಾದಕರ ಹಾವಳಿಯಿಂದ ಮಾತ್ರವೇ ಅಲ್ಲದೇ, ಆಳುವ ರಾಜಕಾರಣಿಗಳ ನಿಷ್ಕ್ರಿಯತೆ ಹಾಗೂ ಭ್ರಷ್ಟಾಚಾರದಿಂದಲೂ ದೇಶವನ್ನು ಉಳಿಸು ದೇವರೇ ಎಂದು ಜನರು ಪ್ರಾಥರ್ಿಸಬೇಕಾದ ಕಾಲ ಇದು. `ಪರಿಹಾರ' ಆಗಬೇಕಿದ್ದ ಸಕರ್ಾರ, ತಾನೇ ಒಂದು `ಸಮಸ್ಯೆ' ಆಗುತ್ತಿರುವುದು ಈ ಹೊತ್ತಿನ ವಾಸ್ತವ.
 

ಸಂತಶಕ್ತಿಯ ಕಾಲಘಟ್ಟ

ಬಾಬಾ ರಾಮ್ದೇವ್ ಸತ್ಯಾಗ್ರಹವು ಸಮಾಜದಲ್ಲಿ ಸಾಧುಸಂತರ ಪಾತ್ರದ ಬಗ್ಗೆ ಚಚರ್ೆಯನ್ನು ಹುಟ್ಟುಹಾಕಿದೆ. `ಸ್ವಘೋಷಿತ' ಸಂತರ ಸಾಮಾಜಿಕ, ರಾಜಕೀಯ ಕ್ರಿಯಾಶೀಲತೆಯ ಬಗ್ಗೆ ಆಳುವ ಪಕ್ಷಗಳ ರಾಜಕಾರಣಿಗಳು ಪ್ರಶ್ನೆಗಳೆನ್ನತ್ತಿದ್ದಾರೆ.

ಸಂತರ ಸಾಮಾಜಿಕ ಕ್ರಿಯಾಶೀಲತೆ ಹೊಸ ಬೆಳವಣಿಗೆಯಲ್ಲ. ಅವದೂತರಾಗಿದ್ದರೂ ಲೋಕಸಂಗ್ರಹದ ದೃಷ್ಟಿಯಿಂದ ಕರ್ಮದಲ್ಲಿ ತೊಡಗಬೇಕು ಎಂಬುದು ಭಗವದ್ಗೀತೆಯ ಸಂದೇಶ. ಸಂತರಿಗೆ ಕರ್ಮ ತ್ಯಾಗಕ್ಕಿಂತಲೂ ಕರ್ಮಫಲದ ತ್ಯಾಗವೇ ಸಂತರ ಹೆಗ್ಗುರುತು.

ಯಾವ ಪ್ರಾಚೀನ ಸಂಪ್ರದಾಯದೊಂದಿಗೂ ಗುರುತಿಸಿಕೊಳ್ಳದ ಹೊಸ ಸಂತಸಮೂಹ ಸ್ವಾಮಿ ದಯಾನಂದರ ಕಾಲದಲ್ಲಿ ತಳವೂರಿತು. ಸ್ವಾಮಿ ವಿವೇಕಾನಂದರ ಕಾಲದಲ್ಲಿ ಪ್ರಬಲವಾದ ದನಿಯನ್ನು ಪಡೆದುಕೊಂಡಿತು. ಶ್ರೀ ಅರಬಿಂದೋ ಕಾಲದಲ್ಲಿ ಜಾಗತೀಕರಣದ ಸೌಧವನ್ನು ನಿಮರ್ಿಸಿತು. ನಂತರ ಮಹೇಶ್ ಯೋಗಿ, ಶ್ರೀ ಪ್ರಭುಪಾದ ಮುಂತಾದವರು ವಿದೇಶಗಳನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಹೊಸ ಪರಂಪರೆಯ ಈ ಹೊಸ ಗುರುಗಳು ಸಾರ್ವತ್ರಿಕ ಹಿತದ ಗುರಿ ಇಟ್ಟುಕೊಂಡಿದ್ದವರು. ಭಾಷೆ, ಪಂಥ, ಒಳಪಂಥಗಳ ಪರಿಧಿಯನ್ನೆಲ್ಲ ಅವರು ದಾಟಿದ್ದರು.

ತಮ್ಮ ಕಾಲದ ಸಾಮಾಜಿಕ ಅಗತ್ಯಗಳನ್ನು ಸಾಂಪ್ರದಾಯಿಕ ಮಠಗಳು ಗುರುತಿಸಿಸದೇ ಇದ್ದ ಅವಧಿ ಅದು. ಈಗ ಸಾಂಪ್ರದಾಯಿಕ ಮಠಗಳೂ ಸಕ್ರಿಯವಾಗಿವೆ. ಹೊಸ ರೀತಿಯ ಮಠಗಳೂ ತಲೆಯೆತ್ತುತ್ತಿವೆ. ಆದರೂ ಅವುಗಳಲ್ಲಿ `ಯೂನಿವರ್ಸಲ್ ಅಪೀಲ್' ಎನ್ನುವುದು ಇನ್ನೂ ಇಲ್ಲ. ಅವುಗಳನ್ನು ಪೂರ್ಣವಾಗಿ ಧಾಮರ್ಿಕ, ಆಧ್ಯಾತ್ಮಿಕ ಎನ್ನುವ ಹಾಗೂ ಇಲ್ಲ, ಇತ್ತ ಸಮಾಜಮುಖಿ ಎನ್ನುವಂತೆಯೂ ಇಲ್ಲ. ಅಂತಹ ಸ್ಥಿತಿಯಲ್ಲಿದ್ದು ರಾಜಕೀಯ ಹೋರಾಟಗಳಿಂದ, ಸಾಮಾಜಿಕ ಆಂದೋಲನಗಳಿಂದ ಹಾಗೂ ಅಭಿವೃದ್ಧಿ ಯೋಜನೆಗಳಿಂದ ಒಂದಿಷ್ಟು ಅಂತರದಲ್ಲೇ ಉಳಿದುಕೊಂಡು ತಟಸ್ಥವಾಗಿವೆ ಎನ್ನಬಹುದು. ಆಧುನಿಕ ಮ್ಯಾನೇಜ್ಮೆಂಟ್ ಪರಿಭಾಷೆಯ `ಬಿಗ್ ಥಿಂಕಿಂಗ್' ಅನ್ನು ಸಾಮಾಜಿಕ, ಧಾಮರ್ಿಕ ರಂಗದಲ್ಲಿ ತರುವುದು ಅವುಗಳಿಂದ ಅಷ್ಟಾಗಿ ಸಾಧ್ಯವಾಗಿಲ್ಲ.

ರಾಜಕೀಯದಂತೆ ಧಾಮರ್ಿಕ ಜಗತ್ತಿನಲ್ಲೂ ಪರಂಪರೆಗಿಂತಲೂ ವೈಯಕ್ತಿಕ ವರ್ಚಸ್ಸಿನ ಪಾಲೇ ಹೆಚ್ಚಿನದು. ಹೀಗಾಗಿ ಈಗ ಜನರ ಗಮನ ಹೆಚ್ಚಾಗಿ ಪಬ್ಲಿಕ್ ರಿಲೇಷನ್ಸ್, ಮಾಕರ್ೆಟಿಂಗ್ ಚೆನ್ನಾಗಿ ತಿಳಿದಿರುವ, ಅವುಗಳನ್ನು ರಣತಾಂತ್ರಿಕ ನಿಖರತೆಯೊಂದಿಗೆ ಪ್ರಯೋಗಿಸುವ ಸಾಮಥ್ರ್ಯವುಳ್ಳ, ಆಧುನಿಕ ಸಂತರೆಡೆಗೆ ತಿರುಗುತ್ತಿರುವುದು ಸುಳ್ಳಲ್ಲ. ಇದರಿಂದ ಜನರಿಗೆ ಎಷ್ಟು ಅಧ್ಯಾತ್ಮ ಸಿದ್ಧಿಸುತ್ತದೆ ಎಂಬುದು ಬೇರೆ ಮಾತು. ನವಗುರುಗಳ ಪ್ರಭಾವವಂತೂ ಹೆಚ್ಚುತ್ತಿದೆ.

ಆಧುನಿಕ ಗುರುಗಳ, ಸಂತರ ಪರಂಪರೆ ಬಹಳ ವೇಗವಾಗಿ ಬೆಳೆಯುತ್ತಿದೆ. ಈ ಪೈಕಿ ಕೆಲವು ಗಟ್ಟಿ ವ್ಯಕ್ತಿತ್ವದ ಸಂತರೂ ಇದ್ದಾರೆ. ಅವರು ತಮ್ಮ ವೈಯಕ್ತಿಕ ವರ್ಚಸ್ಸನ್ನು, ಪ್ರಭಾವವಲಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ತಮ್ಮ ಸುತ್ತಲಿನ ಸಮಾಜದ ಅಭಿವೃದ್ಧಿಯತ್ತಲೂ ಗಮನ ನೀಡಿದ್ದಾರೆ. ದೇಶವಿದೇಶಗಳ ಆಗುಹೋಗುಗಳಲ್ಲಿ ಪಾತ್ರವಹಿಸಲೂ ಸಿದ್ಧರಿದ್ದಾರೆ. ಜನಪರ ಕಾಳಜಿಯನ್ನೂ ವ್ಯಕ್ತಪಡಿಸುತ್ತಾರೆ. ಕೆಲವರು ಗಿಮಿಕ್ಗಳನ್ನೂ ಮಾಡುತ್ತಾರೆ. ಜನರನ್ನು (ಹಣವನ್ನು?) ಆಕಷರ್ಿಸುವಲ್ಲಿ ಅವರವರಲ್ಲೇ ಪರಸ್ಪರ ಪೈಪೋಟಿ ನಡೆಯುತ್ತಿದೆ ಎನ್ನುವ ಮಾತೂ ಇದೆ. ಇಂತಹವರ ಮಧ್ಯೆ ಪೂರ್ಣ ಜೊಳ್ಳು, ಪೊಳ್ಳುಗಳೂ ಸಹ ಸಂತರ ವೇಷ ಧರಿಸಿಕೊಂಡಿವೆ.

ಅದೇನೇ ಇರಲಿ, ಸಂತಶಕ್ತಿ ಸರ್ವರಂಗಗಳಲ್ಲೂ ಪ್ರಜ್ವಲಿಸಲು ಆರಂಭಿಸಿರುವ ಈ ಕಾಲಘಟ್ಟ ಇದು.