ಬೆಳಗಾವಿಯಲ್ಲಿ ಇದೇ (2011) ಮಾರ್ಚ್ 11, 12 ಮತ್ತು 13 ರಂದು ನಡೆದ ಎರಡನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಿದ್ದು ನನಗೆ ಸ್ಮರಣೀಯ ಅನುಭವ ನೀಡಿತು. ಸಮ್ಮೇಳನದ ವೈಭವ, ಜನಸಾಗರ, ಆಚಾರ-ವಿಚಾರಗಳ ರಸಪಾಕ ಇವೆಲ್ಲ ಸ್ಮರಣೀಯವಾಗಿದ್ದವು. ನಾನು ಮಾಧ್ಯಮದ ಪ್ರತಿನಿಧಿಯಾಗಿದ್ದರಿಂದ ಊಟ, ವಸತಿ, ಉಪಚಾರಗಳಿಗೆ ಕೊರತೆ ಇರಲಿಲ್ಲ.
ಬೆಳಗಾವಿ ಸಂಪೂರ್ಣ ಕನ್ನಡಮಯವಾಗಿತ್ತು. ಕನ್ನಡದ ಸಂಭ್ರಮಾಚರಣೆ ಸರ್ವತ್ರ ಎದ್ದುಕಾಣುತ್ತಿತ್ತು. ಕನ್ನಡ ಪುಸ್ತಕಗಳ ಪ್ರದರ್ಶನ ಅದ್ದೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಆಯೋಜಿಸಲ್ಪಟ್ಟಿತ್ತು. ಬೆಂಗಳೂರಿನ ಎಲ್ಲ ಸಿನೆಮಾ ಹಾಲ್ಗಳ ಮುಂದೆ ನುಗ್ಗಾಡುವ ಅಷ್ಟೂ ಜನರನ್ನೂ ಒಟ್ಟಾಗಿ ಹಿಡಿದುತಂದು ಒಂದೆಡೆ ಸೇರಿಸಿದರೂ ಬೆಳಗಾವಿಯ ಪುಸ್ತಕ ಪ್ರದರ್ಶನದ ಜನಸಾಗರದಲ್ಲಿ ಅರ್ಧವೂ ಆಗುವುದಿಲ್ಲ! ಜನರಲ್ಲಿ ಪುಸ್ತಕ ಪ್ರೀತಿ ಕಡಿಮೆಯಾಗುತ್ತಿದೆ ಅಂದವರಾರು?!
ಸಮ್ಮೇಳನದ ಆಯೋಜಕರ ಕಾಳಜಿ ಎಲ್ಲೆಡೆ ಕಾಣುತ್ತಿತ್ತು. ಈ ಸಮ್ಮೇಳನದ ಆಯೋಜನೆಯಲ್ಲಿ ಗಂಭೀರವಾಗಿ ಚಿಂತಿಸಬೇಕಾದ ಲೋಪಗಳು ಇರಲಿಲ್ಲ. ಇದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಸಾಧನೆಗಳ ಪಟ್ಟಿಗೆ ಸೇರುವುದರಲ್ಲಿ ಅನುಮಾನವಿಲ್ಲ.
ಆದರೆ ಒಟ್ಟಾರೆ ಸಮ್ಮೇಳನದ ಕಾರ್ಯಯೋಜನೆ ಹಾಗೂ ಮೂಲ ಪರಿಕಲ್ಪನೆಯಲ್ಲಿ ದೋಷವಿತ್ತು. ಸಮ್ಮೆಳನದ ಗೋಷ್ಠಿಗಳನ್ನು ಪರಿಶೀಲಿಸಿದಾಗ ಎಡಪಂಥೀಯ ವಿಚಾರಧಾರೆಯವರೇ ಹೆಚ್ಚಾಗಿ ತುಂಬಿಕೊಂಡಿದ್ದುದು ಮೇಲ್ನೋಟಕ್ಕೇ ತಿಳಿಯುವಂತಿತ್ತು. ಆಧುನಿಕ ವಿಚಾರಧಾರೆಯವರು, ರಾಷ್ಟ್ರೀಯ ವಿಚಾರಧಾರೆಯವರು, ಯಾವ ವಿಚಾರಧಾರೆಗೂ ಒಳಪಡದವರು ಸಾಕಷ್ಟು ಪ್ರಾತಿನಿಧ್ಯ ಪಡೆದಿರಲಿಲ್ಲ. ಸಮ್ಮೇಳನದಲ್ಲಿ ಇನ್ನಷ್ಟು ವೈಚಾರಿಕ ಸಮಗ್ರತೆ ಬೇಕಿತ್ತು ಎನಿಸುತ್ತದೆ.
ವೈಚಾರಿಕ ಸಮಗ್ರತೆ ಹಾಗೂ ವಿಚಾರ ವೈವಿಧ್ಯತೆ ಬೆಳಗಾವಿಯಲ್ಲಿ ಸೊರಗಿತ್ತು. ಡಾ. ಸಿ. ಎನ್. ಆರ್. ರಾವ್, ಡಾ. ಯು. ಆರ್. ರಾವ್, ಡಾ. ಎಸ್. ಆರ್. ರಾವ್, ಡಾ. ಎಸ್. ಎಲ್. ಭೈರಪ್ಪ, ಡಾ. ಎಂ. ಚಿದಾನಂದ ಮೂರ್ತಿ, ಡಾ. ನವರತ್ನ ಎಸ್. ರಾಜಾರಾಮ್, ಡಾ. ಕೆ. ಎಸ್. ನಾರಾಯಣಾಚಾರ್ಯ, ಡಾ. ಸೂರ್ಯನಾಥ ಕಾಮತ್, ಡಾ. ಶತಾವಧಾನಿ ಆರ್. ಗಣೇಶ್, ನಂದನ್ ನೀಲೇಕಣಿ, ಡಾ. ಶ್ರೀನಿವಾಸ್ ಕುಲಕರ್ಣಿ, ಗುರುರಾಜ್ ದೇಶಪಾಂಡೆ, ಡಾ. ದೇವಿ ಶೆಟ್ಟಿ, ಮುಂತಾದ ಖ್ಯಾತ ಚಿಂತಕರ ಅನುಪಸ್ಥಿತಿ ಪ್ರಧಾನವಾಗಿ ಕಾಣುತ್ತಿತ್ತು. ಈ ಪೈಕಿ ಹಲವರನ್ನು ಭಾಷಣಕ್ಕೆ, ಗೋಷ್ಠಿಗಳಿಗೆ ಕರೆಯುವುದಿರಲಿ, ಅವರಲ್ಲೇಕರಿಗೆ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನೂ ಕಳುಹಿಸಿರಲಿಲ್ಲ ಎನ್ನುವುದು ವಾಸ್ತವ ಸಂಗತಿ.
ತುಂಬಾ ಪ್ರಮುಖರಾದ ಈ ಚಿಂತಕರನ್ನು ಹೇಗೆ ಮರೆಯಲಾಯಿತು ಎಂಬುದು ಸಹಜವಾದ ಪ್ರಶ್ನೆ. ಈ ಪೈಕಿ ಹಲವರು ಅಂತಾರಾಷ್ಟ್ರೀಯ ಮಾನ್ಯತೆ ಇರುವವರು. ಮೇಲಾಗಿ ಇವರೆಲ್ಲ ಕನ್ನಡಿಗರು. ಅವರನ್ನು ಕೈಬಿಟ್ಟಿರುವುದು ಕೇವಲ ಆಕಸ್ಮಿಕ ಎಂದುಕೊಳ್ಳುವುದು ಮುಗ್ಧತನವಾಗುತ್ತದೆ. ಪ್ರಧಾನ ವೇದಿಕೆಯ ತುಂಬ ಹೆಚ್ಚಾಗಿ ರಾರಾಜಿಸಿದವರು ಎಡಪಂಥೀಯ ಸಾಹಿತಿಗಳು ಹಾಗೂ ಚಲನಚಿತ್ರ ಕಲಾವಿದರು.
ಸಾಹಿತಿಗಳು ಎಂದರೆ ಸರ್ವಜ್ಞರು ಎಂಬ ಭ್ರಮೆ ನಮಗಿನ್ನೂ ಹೋಗಿಲ್ಲ. ಸಾಹಿತ್ಯದ ಮೂಲಕ ಜೀವನದ ದೃಷ್ಟಿ ಸಿಗುತ್ತದೆ ಎಂಬುದು ಇನ್ನೊಂದು ದೊಡ್ಡ ಭ್ರಮೆ. ಸಾಹಿತ್ಯದ ಮೂಲಕ ಆಯಾ ಸಾಹಿತಿಯ ದೃಷ್ಟಿ ಮಾತ್ರ ಸಿಗುತ್ತದೆ ಎಂಬುದು ವಾಸ್ತವ. ಹಾಗೆಂದು ಸಾಹಿತ್ಯಕ್ಕೆ ಮಹತ್ವವೇ ಇಲ್ಲ ಎನ್ನಲಾಗದು. ವ್ಯಾಪಕವಾಗಿ ಸಾಹಿತ್ಯವನ್ನು ಓದಿ ತಿಳಿಯುವುದರಿಂದ ಜೀವನದ ಹಲವು ಮಗ್ಗುಲುಗಳ ಪರಿಚಯವಾಗುತ್ತದೆ. ವಿವಿಧ ದೃಷ್ಟಿಗಳ ಪರಿಚಯವಾಗುತ್ತದೆ. ಹಾಗೆಂದು ಸಾಹಿತ್ಯ ಓದದೇ ಅಥವಾ ಬರೆಯದೇ ಇರುವವರಿಗೆ ಜೀವದ ದೃಷ್ಟಿಯೇ ಇಲ್ಲ ಎಂದುಕೊಳ್ಳುವುದು ಮುಗ್ಧತನವಷ್ಟೇ ಅಲ್ಲ, ಮೂರ್ಖತನವೂ ಸಹ.
ಈ ಮೂರ್ಖತನದಿಂದಾಗಿಯೇ ತಂತ್ರಜ್ಞಾನದ ಬಗ್ಗೆ, ಆರ್ಥಿಕತೆಯ ಬಗ್ಗೆ - ಹೀಗೆ ಎಲ್ಲದರ ಬಗ್ಗೆಯೂ ಸಾಹಿತಿಯ ಅಭಿಪ್ರಾಯವನ್ನು ಮಾತ್ರ ಕೇಳುವ, ಆತ ಹೇಳಿದ್ದನ್ನೇ ಪರಮಸತ್ಯವೆಂದು ಬಿಂಬಿಸುವ ಪರಿಪಾಠ ಮಾಧ್ಯಮಗಳಲ್ಲಿ, ಸರ್ಕಾರದ ಮಟ್ಟದಲ್ಲಿ ಹೆಚ್ಚಾಗುತ್ತಿದೆ.
ಕನ್ನಡ ಸಾಹಿತ್ಯ ಸಮ್ಮೇಳನಗಳು, ಮತ್ತು ಈಗ ವಿಶ್ವ ಕನ್ನಡ ಸಮ್ಮೆಳನ, ಮೂಲತಃ ಸಂಭ್ರಮದ ಆಚರಣೆಯ ಹಾಗೂ ವಿಚಾರ ವಿನಿಮಯದ ಮಿಶ್ರಣ. ಭಾರತದ ಜನಮಾನಸದಲ್ಲಿ ಆಚರಣೆಗೆ ಮಹತ್ವದ ಸ್ಥಾನವಿದೆ. ಹಾಗೆಯೇ ವಿಚಾರಕ್ಕೂ ಮಹತ್ವದ ಸ್ಥಾನವಿದೆ. ಇವೆರಡರ ಸಂಗಮ ಸ್ಥಳದಲ್ಲಿ ಈ ಮಿಶ್ರಣದ ಹದ ರುಚಿಯಾಗಿ, ಶುಚಿಯಾಗಿ ಇರಬೇಕು. ಅದು ಪೌಷ್ಟಿಕವೂ ಆಗಿರಬೇಕು. ಈ ಮಿಶ್ರಣ ರಸಾಯನವಾಗಿರಬೇಕು. ಕಲಬೆರಕೆಯಾಗಿರಬಾರದು. ಇಂದಿನ ಸಂದರ್ಭದಲ್ಲಿ ವಿಚಾರವಿನಿಮಯಕ್ಕೇ ಒಂದು ಜಾಗತಿಕ ಮಟ್ಟದ, ಪೂರ್ಣ ಪ್ರಮಾಣದ ಸಮ್ಮೇಳನದ ಅಗತ್ಯ ಖಂಡಿತ ಇದೆ.
`ವರ್ಲ್ಡ್ ಎಕನಾಮಿಕ್ ಫೋರಮ್' ಸ್ವಿಟ್ಜರ್ಲ್ಯಾಂಡಿನ ಒಂದು ಖಾಸಗಿ ಸಂಸ್ಥೆ. ಡೇವೋಸಿನಲ್ಲಿ ಅದು ನಡೆಸುವ ವಾರ್ಷಿಕ ಸಮ್ಮೇಳನ ವಿಶ್ವಪ್ರಸಿದ್ಧ. ನಮ್ಮ ಸಾಹಿತ್ಯ ಸಮ್ಮೇಳನದ ಹಾಗೆ ಅದು ಹಲವು ದಿನಗಳ ಸಮ್ಮೇಳನ ನಡೆಸುತ್ತದೆ. ಅದರದು ಇನ್ನೂ ದೊಡ್ಡ ವ್ಯಾಪ್ತಿ. ಅದು ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಮಾವೇಶ ನಡೆಸುತ್ತದೆ. ಜಗತ್ತಿನ ಅನೇಕ ದೇಶಗಳ ಮಂತ್ರಿಗಳು, ಸರ್ಕಾರಿ ಪ್ರಮುಖರು, ಆರ್ಥಿಕ ತಜ್ಞರು, ಉದ್ಯಮಿಗಳು, ಪತ್ರಕರ್ತರು, ಚಿಂತಕರು ಸಮಾವೇಶಗೊಂಡು ಚರ್ಚೆ ನಡೆಸುತ್ತಾರೆ. ರಸಮಂಜರಿಯ, ಹಾಡು-ಕುಣಿತಗಳ ಗೊಡವೆಯಿಲ್ಲದೆ ಗಂಭೀರ ಚಿಂತನೆ ನಡೆಯುತ್ತದೆ. ಪ್ರಸ್ತುತ ವಿಶ್ವ ಕನ್ನಡ ಸಮ್ಮೇಳನ ಅಂತಹ ಪಾತ್ರವನ್ನು ವಹಿಸೀತೆಂಬ ನಿರೀಕ್ಷೆ ಇತ್ತು.
ಆದರೂ ಗಡಿನಾಡಾದ ಬೆಳಗಾವಿಯಲ್ಲಿ ಸಂಭ್ರಮಾಚರಣೆಗೆ ವಿಶೇಷ ಅರ್ಥವಿತ್ತು. ಅದನ್ನು ಪೂರ್ಣವಾಗಿ ಕಡೆಗಣಿಸುವ ಹಾಗಿಲ್ಲ. ಆಚರಣೆಯ ವೈಭವ ನಾಡಿನ ಜನರಿಗೆ ಹೊಸ ಆತ್ಮವಿಶ್ವಾಸವನ್ನು ತಂದುಕೊಡಲು ನೆರವಾಗುತ್ತದೆ. ಅವರ ಸಂಕಲ್ಪ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ಇದು ಒಳ್ಳೆಯ ಬೆಳವಣಿಗೆಯೇ.
ಆದರೆ ಜನರಲ್ಲಿನ ಉದ್ದೀಪ್ತ ಸಂಕಲ್ಪಶಕ್ತಿ ಬತ್ತುವ ಮೊದಲು ಆಡಳಿತಗಾರರು ಹಾಗೂ ಜನರು ಹೆಚ್ಚು ವಿಚಾರಶೀಲರಾಗಬೇಕು. ಕಳೆದ 55 ವರ್ಷಗಳಲ್ಲಿ ಕರ್ನಾಟಕ ಯಾವ ಹಾದಿಯಲ್ಲಿ ನಡೆದುಬಂದಿದೆ ಎಂಬುದರ ಸಮಗ್ರ ವಿಮರ್ಶೆಯಾಗಬೇಕು. ಮುಂದಿನ ಗುರಿಯ ಹಾಗೂ ದಾರಿಯ ಬಗ್ಗೆ ಸ್ಪಷ್ಟತೆಯನ್ನು ಮೂಡಿಸಿಕೊಳ್ಳಬೇಕು.
ಬೆಳಗಾವಿ ಈ ರೀತಿಯ ವಿಚಾರ-ಮಥನದ ನಿಟ್ಟಿನಲ್ಲಿ ಪುಟ್ಟ ಹೆಜ್ಜೆಯನ್ನು ಮಾತ್ರ ಇಟ್ಟಿದೆ. ಪ್ರಸ್ತುತ ವಿಶ್ವ ಕನ್ನಡ ಸಮ್ಮೇಳನದ ವಿಚಾರ ಗೋಷ್ಠಿಯಲ್ಲಿ ಎಲ್ಲ ಬಗೆಯ ವೈಚಾರಿಕ ನಂಬಿಕೆಗಳಿರುವ ಚಿಂತಕರನ್ನು ಸೇರಿಸಿಕೊಂಡಿದ್ದರೆ ಗಂಭೀರ ವಿಚಾರ ವಿನಿಮಯ ನಡೆಯುತ್ತಿತ್ತು. ಒಂದೇ ವಿಚಾರದವರೇ ಪ್ರಧಾನವಾಗಿ ತುಂಬಿಹೋದರೆ ಏನನ್ನು ಚಿರ್ಚಿಸುತ್ತೀರಿ? ಆಗ ಚರ್ಚೆಯಾಗುವುದಿಲ್ಲ, ಪ್ರಚಾರ ಆಂದೋಲನವಾಗುತ್ತದೆ, ಅಷ್ಟೇ.
ಬೆಳಗಾವಿಯಲ್ಲಿ ನಿಜವಾಗಿ ಸಂಭ್ರಮಪಟ್ಟವರು `ಸಾಮಾನ್ಯ ಜನರು'. ವಿಶ್ವದಲ್ಲಿ ಕನ್ನಡದ, ಕರ್ನಾಟಕದ ಸ್ಥಾನಮಾನಗಳು ಹೇಗಿವೆ ಎಂಬ ಚರ್ಚೆ ಹಾಗಿರಲಿ, ಬೆಳಗಾವಿ ಹಾಗೂ ಸುತ್ತಮುತ್ತಲಿನ ಜನರ ಪಾಲಿಗೆ ಬೆಳಗಾವಿಯೇ ವಿಶ್ವವಾಗಿತ್ತು. ಅದೇ ಕನ್ನಡವಾಗಿತ್ತು. ಕರ್ನಾಟಕವೂ ಆಗಿತ್ತು!
ಈ ವಿಶ್ವ ಕನ್ನಡ ಸಮ್ಮೇಳನಕ್ಕೆ ಜನತೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಕಂಡುಬಂದಿದ್ದು ಇತಿಹಾಸದಲ್ಲಿ ದಾಖಲಾಗುವ ಅಂಶ. ಇಂತಹ ಐತಿಹಾಸಿಕ ಕ್ಷಣಗಳಿಗೆ ಪ್ರತ್ಯಕ್ಷ ಸಾಕ್ಷಿಯಾದವರಿಗೆ ಧನ್ಯತೆಯ ಅನುಭವ.
ಬುದ್ಧಿಜೀವಿಗಳಲ್ಲಿ ಇಲ್ಲದ ಬದ್ಧತೆ ಜನತೆಯಲ್ಲಿರುವುದು ಬೆಳಗಾವಿಯಲ್ಲಿ ಮತ್ತೊಮ್ಮೆ ರುಜುವಾತಾಗಿದೆ. ಅದರಲ್ಲೂ ಯುವಜನರಲ್ಲಿ ಕಂಡುಬಂದ ಉತ್ಸಾಹ ಪ್ರಚಂಡವಾದದ್ದು. ಸಿರಿಗನ್ನಡ ಕವಿಗೋಷ್ಠಿಯಿರಲಿ, ಜಾಗತೀಕರಣ ಕುರಿತ ವಿಚಾರಗೋಷ್ಠಿಯಿರಲಿ ಅಥವಾ ಮಾಧ್ಯಮವನ್ನು ಕುರಿತ ಚರ್ಚೆಯಿರಲಿ, ಎಲ್ಲೆಲ್ಲೂ ಬರೀ ಜನರು, ಯುವಜನರು.
ಆದರೆ ಸಮ್ಮೇಳನದ ಆಚಾರ-ವಿಚಾರಗಳಲ್ಲಿ ಯುವಜನರಿಗೆ ಹೆಚ್ಚು ಪ್ರಧಾನ ಪಾತ್ರ ಇರಲಿಲ್ಲ. ಅಲ್ಲೆಲ್ಲ ಮಿಂಚಿದವರು ವಯೋವೃದ್ಧ ಸಾಹಿತಿ-ಲೇಖಕರು ಮಾತ್ರ.
ಹೆಂಗಸರು, ಮಕ್ಕಳು, ಪುರುಷರು, ವೃದ್ಧರು, ಬಡವರು, ಬಲ್ಲಿದರು - ಹೀಗೆ ಸಮಸ್ತ ಜನತೆ ತೋರಿದ ಅತೀವ ಸಡಗರ ಅನನ್ಯ. ಜಿಲ್ಲಾ ಕ್ರೀಡಾಂಗಣ ತುಂಬಿ ತುಳುಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕವಿಗೋಷ್ಠಿ, ವಿಚಾರಗೋಷ್ಠಿ, ಜಾನಪದ ನೃತ್ಯಗಳು, ಸಂಗೀತ ಕಚೇರಿ, ಗಾಯನ, ಭಾಷಣ - ಹೀಗೆ ಯಾವುದೇ ಕಾರ್ಯಕ್ರಮವಿದ್ದರೂ, ಎಲ್ಲವೂ ಮುಗಿಯುವವರೆಗೂ, ಜನರು ತಾವು ಕುಳಿತ ಸ್ಥಳವನ್ನು ಬಿಟ್ಟು ಏಳದೇ ಇದ್ದುದು ನನಗಂತೂ ಬಹಳ ಅದ್ಭುತ ದೃಶ್ಯವಾಗಿ ಕಾಣಿಸಿತು.
ಗೋಷ್ಠಿಗಳ ಬಗ್ಗೆ ಒಂದು ಮಾತು. ಏಕಕಾಲದಲ್ಲಿ ವಿವಿಧ ವಿಚಾರ ಸಂಕಿರಣಗಳು ನಡೆಯುತ್ತಿದ್ದುದರಿಂದ ಎಲ್ಲವನ್ನು ನೋಡಲಾಗಲಿಲ್ಲ. ಆದರೆ ನೋಡಿದ ಕೆಲವು ಗೋಷ್ಠಿಗಳು ಕಳಪೆ ಮಟ್ಟದಲ್ಲಿದ್ದವು. ಪ್ರಚಾರ ಆಂದೋಲನಕಾರರಾಗಬೇಕಾದವರು ವಿದ್ವಾಂಸರೆಂದು ಸೋಗು ಹಾಕಿಕೊಂಡು ಬಂದರೆ ಏನಾಗುತ್ತದೆ ಎಂಬುದಕ್ಕೆ ಕೆಲವು ವಿಚಾರ ಗೋಷ್ಠಿಗಳು ನಿದರ್ಶನವಾಗಿದ್ದವು. ಕಿರುಚುವುದೇ ವಿದ್ವತ್ತಿನ ಲಕ್ಷಣ ಎಂಬಂತೆ ಕೆಲವರು ಭಾವಿಸಿದ್ದುದು ಸ್ಪಷ್ಟವಾಗಿತ್ತು.
ಒಂದು ಉದಾಹರಣೆ. ಇನ್ಫೋಸಿಸ್ ಕಂಪೆನಿಯ ಮೋಹನ್ದಾಸ್ ಪೈ ಅಧ್ಯಕ್ಷತೆಯಲ್ಲಿ ನಡೆದ ಜಾಗತೀಕರಣ ಕುರಿತ ವಿಚಾರಗೋಷ್ಠಿ ಬಹಳ ಸಪ್ಪೆ ಎನಿಸಿತು. ಇದಕ್ಕೆ ಪೈ ಅವರು ಕಾರಣ ಎಂದುಕೊಳ್ಳುವ ಹಾಗಿಲ್ಲ. ಈ ಸಂಕಿರಣದಲ್ಲಿ ಮಾತನಾಡಿದ ಅನೇಕ ಭಾಷಣಕಾರರು ಕೊಟ್ಟಿದ್ದ ವಿಷಯದ ಬಗ್ಗೆ ಮಾತನಾಡುವಷ್ಟು ಅಧ್ಯಯನ ಸಿದ್ಧತೆ ಮಾಡಿಕೊಂಡಿರಲಿಲ್ಲ ಎನ್ನಬಹುದು. ಅನೇಕರು ವಿಷಯಾಂತರ ಮಾಡಿದ್ದು ಸಾಮಾನ್ಯವಾಗಿತ್ತು. ಬೌದ್ಧಿಕ ಮಟ್ಟದ ಚರ್ಚೆಗಿಂತಲೂ ಆವೇಶವೇ ಪ್ರಧಾನವಾಗಿದ್ದ ಈ ಸಂಕಿರಣದಲ್ಲಿ `ರಸ್ತೆ ಸರಿಯಿಲ್ಲ, ಕುಡಿಯುವ ನೀರಿಲ್ಲ, ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ, ಬಡವರ ಮಕ್ಕಳಿಗೆ ಶಾಲೆಗಳಲ್ಲಿ ಸೀಟು ಸಿಗುತ್ತಿಲ್ಲ' - ಇತ್ಯಾದಿ ಸ್ಥಳೀಯ ಸಮಸ್ಯೆಗಳ ಉಲ್ಲೇಖವೇ ಪ್ರಧಾನವಾಗಿತ್ತು. ಈ ಸಮಸ್ಯೆಗಳಿಗೂ ಜಾಗತೀಕರಣಕ್ಕೂ ಇರುವ ಸಂಬಂಧವನ್ನು ತೋರಿಸಲು ಬಹುತೇಕ ಭಾಷಣಕಾರರು ವಿಫಲರಾದರು. ಅಂತಾರಾಷ್ಟ್ರೀಯ ಮಟ್ಟದ ಜನ ಸಂಪರ್ಕ, ಸಾಂಸ್ಕೃತಿಕ ಸಂಪರ್ಕ, ವ್ಯಾಪಾರ- ವ್ಯವಹಾರಗಳು ಏರ್ಪಡುತ್ತಿರುವ ಕಾಲದಲ್ಲಿ, ಅವುಗಳ ಪ್ರಯೋಜನ ಅಥವಾ ದುಷ್ಟರಿಣಾಮ ಇತ್ಯಾದಿ ಅಂಶಗಳ ಬಗ್ಗೆ ಸೂಕ್ತ ಉದಾಹರಣೆ, ದಾಖಲೆ ಹಾಗೂ ಅಂಕಿಅಂಶಗಳ ಸಮೇತ ವಿಷಯ ಮಂಡನೆ ಮಾಡಿದ್ದು ಕಾಣಲಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ