ಈಚೆಗೆ ಮ್ಯಾನ್-ಬುಕರ್ ಪ್ರಶಸ್ತಿ ಪಡೆದ, ಕನ್ನಡದ ಹುಡುಗ ಅರವಿಂದ್ ಅಡಿಗ ವಿರಚಿತ, `ವೈಟ್ ಟೈಗರ್' ಕಾದಂಬರಿಯಲ್ಲಿ ನನಗೆ `ಭಾರತ ನಿಂದನೆ'ಗಿಂತಲೂ ನಮ್ಮ ದೇಶದ ಕರಾಳ ವಾಸ್ತವಗಳು ಹೆಚ್ಚಾಗಿ ಕಂಡುಬಂದವು. ಹಾಗೆಂದು ಅಡಿಗನ ನೆಗೆಟಿವ್ ಅಪ್ರೋಚ್ ಇಷ್ಟವಾಯಿತೆಂದು ಹೇಳಲಾರೆ. ಆತ ಕಾದಂಬರಿಯ ಉದ್ದಕ್ಕೂ ದೇಶದ ನೆಗೆಟಿವ್ ಸಂಗತಿಗಳನ್ನು ಮಾತ್ರ ಎತ್ತಿ ಎತ್ತಿ ತೋರಿಸುತ್ತಾನೆ. ದೇಶದ ಪ್ರಜಾತಂತ್ರವನ್ನು ಲೇವಡಿ ಮಾಡುತ್ತಾನೆ. ಬಡವರು, ಶ್ರೀಮಂತರು ಎಂಬ ಬೈನರಿ ಸಿಸ್ಟಮ್ ನೆನಪಿಸುತ್ತಾನೆ. ಆದರೆ ದೇಶದ ಯಶಸ್ವಿ ಮಧ್ಯಮವರ್ಗವನ್ನು ಮರೆಯುತ್ತಾನೆ. ಇದು ಒಂದು ತರಹದ ವೈಚಾರಿಕ ಬದ್ಧತೆ ಆಗಿರಬಹುದು. ಸಿನಿಕತನವೂ ಆಗಿರಬಹುದು. ಅಥವಾ ಗಾಂಧೀಜಿ ಹೇಳಿದಂತೆ `ಡ್ರೈನ್-ಇನ್ಸ್ಪೆಕ್ಟರ್' ಸಿಂಡ್ರೋಮ್ ಸಹ ಆಗಿರಬಹುದು. ಆದರೆ ಒಂದು ಸಂಗತಿ ಹೇಳಲೇಬೇಕು. ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯ ವಿಷಯಗಳಲ್ಲಿ ಅರವಿಂದ್ ಸುಳ್ಳು ಹೇಳಿಲ್ಲ.
ಕಾದಂಬರಿಯ ಪ್ರಮುಖ ಪಾತ್ರ ಬಲರಾಮ್ ಹಲ್ವಾಯ್ ಎಂಬ ಡ್ರೈವರ್. ಅವನು ತನ್ನ ಯಜಮಾನನನ್ನೇ ಕೊಲೆ ಮಾಡಿ ಪೊಲೀಸರಿಗೆ ಸಿಗದೇ ತಪ್ಪಿಸಿಕೊಂಡಿರುವ ವ್ಯಕ್ತಿ. ಆದರೂ ನಮ್ಮ ಚುನಾವಣೆಗಳಲ್ಲಿ ಮಾತ್ರ `ಅವನ ಅಮೂಲ್ಯ ಮತ' ತಪ್ಪದೇ ಚಲಾವಣೆಯಾಗುತ್ತಲೇ ಇರುವ ಕೌತುಕಮಯ, ಕರಾಳ ವಾಸ್ತವ ನಮ್ಮ ದೇಶದ್ದು! ಬೇಕಾದರೆ ಪೊಲೀಸರು `ನನ್ನನ್ನು' ಮತಗಟ್ಟೆಯ ಬಳಿ ಸುಲಭವಾಗಿ ಹಿಡಿಯಬಹುದು ಎಂದು ಅವನು ವ್ಯಂಗ್ಯವಾಡುತ್ತಾನೆ!
ಯಾರಿಗೂ ತಿಳಿಯದ ಹೊಸ ಸಂಗತಿಯನ್ನೇನೂ ಅರವಿಂದ್ ಹೇಳಿಲ್ಲ. ಈ ವಾಸ್ತವ ನಮ್ಮೆಲ್ಲರಿಗೂ ಗೊತ್ತಿರುವುದೇ. ಮತಗಟ್ಟೆ ಅಕ್ರಮಗಳು, ತಮ್ಮ, `ಮತ' ಕರುಣಿಸುವ ಮೊದಲೇ ಮತದಾರರಿಗೆ `ಮದ' ಕರುಣಿಸುವ `ನಾಯಕರು' -ಇವೆಲ್ಲ ಯಾರಿಗೆ ಗೊತ್ತಿಲ್ಲ? ಇವೆಲ್ಲ ನಮ್ಮ ಪ್ರಜಾತಂತ್ರದ ದೋಷಗಳು. ಇನ್ನೂ ಸುಧಾರಣೆ ಕಾಣದ ದೋಷಗಳು.
`ಎಷ್ಟೇ ದೋಷವಿದ್ದರೂ ಭಾರತದಲ್ಲಿ ಪ್ರಜಾತಂತ್ರ ಭದ್ರವಾಗಿರುವುದೇ ಅದರ ಹೆಗ್ಗಳಿಕೆ. ಈ ದೇಶದ ಜನರ ಮೂಲಭೂತಗುಣವೇ ಸ್ವಾತಂತ್ರ್ಯ' ಎಂಬ ಮಾತನ್ನೂ ಆಡುತ್ತೇವೆ. ಇದು ಸತ್ಯ. ಆದರೆ ಅರ್ಧ ಸತ್ಯ! ನಮ್ಮಲ್ಲಿ `ಪ್ರಜಾ'-ತಂತ್ರ ಎಲ್ಲಿದೆ? ಎಷ್ಟಿದೆ?
`ಸೆಕ್ಯುಲರಿಸಂ'ಗೆ ಮತೀಯ ಮೂಲಭೂತವಾದ ಅಪಥ್ಯವಾದಂತೆ ಪ್ರಜಾತಂತ್ರಕ್ಕೆ ಅಪಥ್ಯವಾದದ್ದು ವಂಶಾಡಳಿತ. ಆದರೆ ಜಿಹಾದ್ ಹಾಗೂ ವಂಶಾಡಳಿತ ಎರಡೂ ನಮ್ಮ ನಡುವೆ ವಿಜೃಂಭಿಸುತ್ತಿರುವ ಶಕ್ತಿಗಳು. ಎರಡಕ್ಕೂ ರಾಜಮನ್ನಣೆ!
ಆದರೆ ಇಲ್ಲಿ ಒಂದು ವಿಷಯ ಸ್ಪಷ್ಟವಾಗಬೇಕು. ವಂಶಾಡಳಿತ ಬರೀ ಭಾರತದ ಪಿಡುಗಲ್ಲ. ಇದನ್ನೆಲ್ಲ ಅರವಿಂದ್ ಅಡಿಗ ತರಹದ ಲೇಖಕರು ಬರೆಯುತ್ತಾರೋ ಇಲ್ಲವೋ ಗೊತ್ತಿಲ್ಲ. ನಮ್ಮಲ್ಲಿ ಅನೇಕರು ಪಶ್ಚಿಮದಲ್ಲಿ ಈ ಪಿಡುಗು ಇಲ್ಲ ಎಂದೇ ಭಾವಿಸಿದ್ದಾರೆ. ತಮ್ಮ ಕುಟುಂಬ, ವಂಶಕ್ಕೆ ಸೇರಿದವರನ್ನು ರಾಜಕೀಯವಾಗಿ `ಮೇಲೆ ತರುವ' ಆಚರಣೆ ಎಲ್ಲ ದೇಶಗಳಲ್ಲೂ ಇದೆ. ಆಲ್ಬೇನಿಯಾದಿಂದ ಜಿಂಬಾಬ್ವೆ ತನಕ 130 ದೇಶಗಳ ಕುಟುಂಬದ ರಾಜಕೀಯದ ವಂಶವೀರರೆಲ್ಲರ ಪಟ್ಟಿ ನನ್ನಲ್ಲಿದೆ. ಆದರೆ ಕೆಲವೊಂದು ಪ್ರಮುಖ ದೇಶಗಳಲ್ಲಿ ಈ ಪ್ರಕ್ರಿಯೆ ಅನಿಯಂತ್ರಿತವಾಗಿ ನಡೆಯದಂತೆ ತಡೆಯುವ ಸಾಂವಿಧಾನಿಕ ಕಟ್ಟುಪಾಡುಗಳಿವೆ. ಉದಾಹರಣೆಗೆ, ಅಮೆರಿಕದಲ್ಲಿ ನೂರಾರು ಮಂದಿ ಕುಟುಂಬ ರಾಜಕೀಯದ ಪ್ರಯೋಜನ ಪಡೆದಿದ್ದಾರೆ. ಇಲ್ಲಿ ಅವರೆಲ್ಲರ ಹೆಸರು ದಾಖಲಿಸಲು ಐದಾರು ಪುಟಗಳಾದರೂ ಬೇಕು! ಆದರೂ ಅಲ್ಲಿ ರಾಜ್ಯವನ್ನು, ರಾಷ್ಟ್ರವನ್ನು ಆಳಲು ಜನರ ನೇರ ಅನುಮೋದನೆ ಬೇಕು. ಮತ್ತು, ಒಬ್ಬರಿಗೆ, ಒಂದು ಜನ್ಮದಲ್ಲಿ, ಎರಡೇ ಅಧಿಕಾರಾವಧಿಗಳು.
ನಮ್ಮ ವಂಶವೀರರ ಪಟ್ಟಿ ಬಹಳ ದೊಡ್ಡದು. ಸಂದಭರ್ೋಚಿತವಾಗಿ ಕೆಲವು ಹೆಸರುಗಳನ್ನು ನೆನಪಿಸಿಕೊಳ್ಳಬಹುದು. ಜವಹರ್ಲಾಲ್ ನೆಹರೂ, ಅವರ ಮಗಳು ಇಂದಿರಾ ಗಾಂಧಿ, ಆಕೆಯ ಪುತ್ರ ಸಂಜಯ್, ಆತನ ಪತ್ನಿ ಮನೇಕಾ, ಆಕೆಯ ಪುತ್ರ ವರುಣ್, ಇಂದಿರೆಯ ಹಿರಿಮಗ ರಾಜೀವ್, ಅವರ ಮಡದಿ ಸೋನಿಯಾ (ಆ್ಯಂಟೋನಿಯಾ), ಆಕೆಯ ಪುತ್ರ ರಾಹುಲ್, ತುದಿಗಾಲಲ್ಲಿ ಆತನ ತಂಗಿ ಪ್ರಿಯಾಂಕಾ, ಆಕೆಯ ಕಂದಮ್ಮಗಳು ರೈಯಾನ್, ಮಿರಯ್ಯಾ... ಶೇಕ್ ಅಬ್ದುಲ್ಲಾ, ಅವರ ಪುತ್ರ ಫಾರೂಖ್ ಅಬ್ದುಲ್ಲಾ, ಅವರ ಪುತ್ರ ಉಮರ್ ಅಬ್ದುಲ್ಲಾ... ದೇವೇಗೌಡ, ಅವರ ಪುತ್ರ ರೇವಣ್ಣ, ಅವರ ತಮ್ಮ ಕುಮಾರಸ್ವಾಮಿ, ಅವರ ಮಡದಿ ಅನಿತಾ...ಕರುಣಾನಿಧಿ, ಅವರ ಸೋದರಳಿಯ ಮುರಸೋಳಿ ಮಾರನ್, ಅವರ ಮಗ ದಯಾನಿಧಿ ಮಾರನ್, ಕರುಣಾ ಹಿರಿಮಗ ಅಳಗಿರಿ, ಅವರ ತಮ್ಮ ಸ್ಟಾಲಿನ್, ಅವರ ತಂಗಿ ಕನ್ನಿಮೋಳಿ... ಎಸ್.ಬಿ. ಚವಾಣ್, ಪುತ್ರ ಅಶೋಕ್ ಚವಾಣ್... ಬಿಹಾರದ ಲಾಲೂ, ಅವರ ಪತ್ಬಿ ರಾಬ್ಡಿ ದೇವಿ... ವಿಜಯರಾಜೇ ಸಿಂಧ್ಯಾ, ಪುತ್ರಿಯರಾದ ವಸುಂಧರಾ, ಯಶೋಧರಾ, ಪುತ್ರ ಮಾಧವರಾವ್ ಸಿಂದಿಯಾ, ಅವರ ಪುತ್ರ ಜ್ಯೋತಿರಾದಿತ್ಯ, ದುಷ್ಯಂತ್ ಸಿಂಗ್... ಮುಲಾಯಂ, ಅಖಿಲೇಶ್... ರಾಜೇಶ್, ಸಚಿನ್ ಪೈಲಟ್... ಬಿಜೂ ಪಟ್ನಾಯಕ್, ನವೀನ್... ಗುಂಡೂರಾವ್, ದಿನೇಶ್.. ಎನ್ಟಿಆರ್, ಪವಾರ್, ದೇವಿಲಾಲ್, ಚೌತಾಲಾ.... - ಈ ಪಟ್ಟಿ ಸಾಕು, ಸಾಕು ಬಿಡಿ.
ನಮ್ಮ ವಂಶವೀರರ ಪಟ್ಟಿಯೂ ಅವರ ಅಧಿಕಾರಾವಧಿಯೂ ಮಿತಿಯಿಲ್ಲದ್ದು! ನಮ್ಮಲ್ಲಿ ಒಬ್ಬರಿಗೆ ಇಷ್ಟೇ ಅವಧಿ ಎಂಬ ಯಾವುದೇ ಮಿತಿಯಿಲ್ಲ. ಮನಃಪೂತರ್ಿ ದೇಶದ, ರಾಜ್ಯದ ಮತ್ತು ಪಕ್ಷದ ಆಡಳಿತ ನಡೆಸಿ, ತಮ್ಮ ಮಕ್ಕಳಿಗೆ ಪಟ್ಟಕಟ್ಟಿ ಸಾಯಬಹುದು! ಇದು ನಮ್ಮ ಪ್ರಜಾತಂತ್ರ.
ಅರೆ, ವಂಶಕ್ಕೊಬ್ಬರು ಮಾತ್ರ ರಾಜಕೀಯದಲ್ಲಿರಬೇಕು ಎಂದರೆ ಹೇಗೆ? ರಾಜಕಾರಣ ಮಾಡುವ ಹಕ್ಕು ಪ್ರಜಾತಂತ್ರದಲ್ಲಿ ಎಲ್ಲರಿಗೂ ಇಲ್ಲವೆ? -ಎನಿಸಬಹುದು. ಆದರೆ ನಮ್ಮ ಜನತಂತ್ರದಲ್ಲಿ `ಜನರ' ಶಕ್ತಿ ಎಷ್ಟು? ಅವರಿಗಿರುವ ಅವಕಾಶಗಳು ಎಷ್ಟು? ಚುನಾವಣೆಯ ಕಾಲದಲ್ಲಿ ಒಂದಿಷ್ಟು `ಮದ' ಅಥವಾ `ಮುದ'! ಬಲರಾಮ್ ಹಲ್ವಾಯ್ ತರಹ `ತಪ್ಪದೇ' ಮತಹಾಕುವ ಭಾಗ್ಯ!
ಈಗ ಒಂದೊಂದು ರಾಜಕೀಯ ಪಕ್ಷವೂ ಒಂದೊಂದು ಕುಟುಂಬದ ಕೈಲಿ ಇದೆ. ಆ ಪಕ್ಷದ ಮುಖಂಡತ್ವ ಆ ವಂಶದ ಗುತ್ತಿಗೆ. ಪಕ್ಷ `ಚುನಾವಣೆ'ಯಲಿ ಗೆದ್ದರೆ ರಾಜಕೀಯ ಅಧಿಕಾರ ಆ ಕುಟುಂಬದವರಿಗೇ ಮೀಸಲು. ಇದು ಎಲ್ಲರಿಗೂ ಗೊತ್ತು. ಒಂದು ಪಕ್ಷಕ್ಕೆ ಒಬ್ಬನೇ ಶಾಶ್ವತ ದೊಣ್ಣೆನಾಯಕ. ಪರ್ಮನೆಂಟ್ ಫ್ರಾಫೆಟ್! ಉಳಿದವರೆಲ್ಲ ಬಾಲಬಡುಕರು ಅಥರ್ಾತ್ ಗು...ಲಾ...ಮ...ರು! ಅಥವಾ ಮಯರ್ಾದೆಯಿಂದ ಹೇಳುವುದಾದರೆ `ಸದಸ್ಯರು'.
ನಮ್ಮ ರಾಜಕೀಯ ಪಕ್ಷಗಳಲ್ಲಿ `ಎಲೆಕ್ಷನ್' ಇಲ್ಲ. ಅಲ್ಲಿರುವುದೆಲ್ಲ `ನಾಮಿನೇಷನ್' ವ್ಯವಸ್ಥೆ! ಅಧ್ಯಕ್ಷರಾದವರು ತಮ್ಮ ನಂತರ ಮುಂದಿನ ಪಕ್ಷಾಧ್ಯಕ್ಷರು ಯಾರು (ಸಾಮಾನ್ಯವಾಗಿ ಅವರ ಆಯ್ಕೆ ತಮ್ಮ ಕುಟುಂಬದವರದ್ದೇ ಆಗಿರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ) ಎಂದು ತೀಮರ್ಾನಿಸುತ್ತಾರೆ. ದೇವೇಗೌಡ ಜೆಡಿಎಸ್ ಪಕ್ಷದ `ರಾಷ್ಟ್ರೀಯ ಅಧ್ಯಕ್ಷ', ಅವರ ಪುತ್ರ ಕುಮಾರಸ್ವಾಮಿ `ರಾಜ್ಯದ ಅಧ್ಯಕ್ಷ'. ಆ ಪಕ್ಷದ ಮುಂದಿನ ರಾಷ್ಟ್ರೀಯ ಅಧ್ಯಕ್ಷರು ಯಾರು ಎಂಬುದು ಎಲ್ಲರಿಗೂ ಈಗಲೇ ಗೊತ್ತು! ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ, ಅವರ ಪುತ್ರ ರಾಹುಲ್ ಅದರ ಪ್ರಧಾನ ಕಾರ್ಯದಶರ್ಿ. ಈ ವ್ಯಕ್ತಿಯ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅನೇಕ ಯುವಕರನ್ನು ದೇಶದ ಅನೇಕ ಖಾಸಗಿ ಕಂಪೆನಿಗಳು ತಿರಸ್ಕರಿಸಿವೆ! ಆದರೂ ಈತನಿಗಾಗಿ ಈಗಿನಿಂದಲೇ ಪ್ರಧಾನಿ ಪಟ್ಟವನ್ನು ಕಾಯ್ದಿರಿಸಲಾಗಿದೆ!
ರಾಜಕೀಯ ಅಧಿಕಾರ ಇವರಿಗೆಲ್ಲ ಅಪ್ಪನ (ಅಥವಾ ಅಮ್ಮನ) ಆಸ್ತಿ. ಅದನ್ನು ಆಜೀವನ ಪರ್ಯಂತ ಅನುಭವಿಸುವುದು ಅವರ `ಹಕ್ಕು'. ಇದನ್ನೇ ಪ್ರಜಾತಂತ್ರ ಎನ್ನಬಹುದಾದರೆ, ಧಾರಾಳವಾಗಿ ಅಂದುಕೊಳ್ಳಿ! ನೀವು ನಿಮ್ಮ ಸಂಸದೀಯ `ಪ್ರತಿನಿಧಿ'ಗಳನ್ನು ಆರಿಸುತ್ತೀರಿ ಅಷ್ಟೇ. ನಿಮ್ಮ ಸಕರ್ಾರವನ್ನಲ್ಲ. ಸಕರ್ಾರಿ ಮುಖ್ಯಸ್ಥರನ್ನಲ್ಲ. ಇದನ್ನೇ `ಮಹಾ-ಚುನಾವಣೆ' ಎನ್ನಬಹುದಾದರೆ ಹಾಗೇ ಅಂದುಕೊಂಡು ಖುಷಿಪಟ್ಟುಕೊಳ್ಳಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ