ಸೋಮವಾರ, ಮಾರ್ಚ್ 23, 2009

ಬರಾಕ್ ಒಬಾಮಾ ಹಾಗೂ ಇದಿ ಅಮಿನ್: ನಿಮಗೆ ಯಾರು ಬೇಕು?

ಭಾರತದ ಮುಂದಿನ ಪ್ರಧಾನಿ ಯಾರು? ಲಾಲ್ ಕೃಷ್ಣ ಆಡ್ವಾಣಿ, ನರೇಂದ್ರ ಮೋದಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಪ್ರಣಬ್ ಮುಖಜರ್ಿ, ಜಯಲಲಿತಾ, ಮಾಯಾವತಿ - ಹೀಗೆ ಅನೇಕರು ಆಸೆ ಇಟ್ಟುಕೊಂಡಿದ್ದಾರೆ. ಇವರ ಪೈಕಿ ಯಾರಾದರೊಬ್ಬರು ಪ್ರಧಾನಿ ಸ್ಥಾನ ಪಡೆಯಬಹುದು. ಆದರೆ ಅವರನ್ನು ಆ ಸ್ಥಾನಕ್ಕೆ ಕಳುಹಿಸಬೇಕೆ, ಬೇಡವೆ, ಎಂದು ನಿರ್ಧರಿಸುವವರು ನಾವು ನೀವಲ್ಲ. ಬದಲಾಗಿ ನಮಗೆ ಗೊತ್ತಿಲ್ಲದ, ನಮಗೆ ನೇರವಾಗಿ ಸಂಬಂಧವೇ ಇಲ್ಲದ, ಭವಿಷ್ಯದ `ಯಾವುದೋ ರಾಜಕೀಯ ಪರಿಸ್ಥಿತಿ'ಗಳು ಈ ಅಂಶವನ್ನು ನಿರ್ಧರಿಸುತ್ತ ಹೋಗುತ್ತವೆ!

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ `ಭಾರತದ ಬರಾಕ್ ಒಬಾಮಾ ಯಾರು?' ಎಂಬ ಪ್ರಶ್ನೆ ಮಾಧ್ಯಮಗಳಲ್ಲಿ ಎದ್ದಿತ್ತು. ಈ ಪ್ರಶ್ನೆಗೆ ಉತ್ತರವಾಗಿ ಕೆಲವು ಜಾತಿವಾದಿಗಳು `ಮಾಯಾವತಿ' ಎಂದು ಕಿರುಚಿದರು. ಮತ್ತೆ ಕೆಲವು ರಾಷ್ಟ್ರೀಯವಾದಿಗಳು `ನರೆಂದ್ರ ಮೋದಿ' ಎಂದರು. `ಎಲ್.ಕೆ ಆಡ್ವಾಣಿಗಿರುವ ಅನುಭವ, ಖರಿಷ್ಮಾ ಹಾಗೂ ಬುದ್ಧಿವಂತಿಕೆ ಯಾರಿಗಿದೆ ಹೇಳಿ' ಎಂಬ ವಾದವೂ ಪ್ರಬಲವಾಯಿತು. ವಿವಿಧ ಪುಢಾರಿಗಳ ಬಾಲಬಡುಕರು ತಮ್ಮ ತಮ್ಮ ಮುಖಂಡರೇ ನಿಜವಾದ `ಜನನಾಯಕರು' ಎಂದು ಬಿಂಬಿಸಿದರು.

ನಿಜವಾಗಿ ಗಮನಿಸಬೇಕಾದ ಸಂಗತಿಯೇ ಬೇರೆ. ಜನರ ಸಮ್ಮತಿಯಿಂದ ಅಧಿಕಾರಕ್ಕೆ ಬರುವ ವ್ಯವಸ್ಥೆಯ ಸಂಕೇತವೇ `ಬರಾಕ್ ಒಬಾಮಾ'. ಅಂತಹ ವ್ಯವಸ್ಥೆ ಇದ್ದ ಕಡೆ ಕೂಲಿ ಮಾಡುವ ಹುಡುಗನೂ ಜನರ ಪ್ರೀತಿ ಗಳಿಸಿ ರಾಹುಲ್ ಗಾಂಧಿಗೆ ಸೆಡ್ಡು ಹೊಡೆಯಬಹುದು. ಆದರೆ ನಮ್ಮ ವಾಸ್ತವ ಏನು? 50 ವರ್ಷದಿಂದ ವಿವಿಧ ಜವಾಬಾರಿಗಳನ್ನು ನಿರ್ವಹಿಸದ ಕಾಂಗ್ರೆಸ್ `ನಾಯಕ'ರೆಲ್ಲ ರಾಹುಲ್ ಮುಂದೆ ನಿಂತು ನೆಲನೋಡಬೇಕು!

ಬರಾಕ್ ಒಬಾಮಾ ನಮ್ಮ ಮನಮೋಹನ್ ಸಿಂಗ್ ತರಹ `ನಾಮಿನೇಟೆಡ್' ಮುಖಂಡ ಅಲ್ಲ. ಆತ ರಾಜೀವ್ ಗಾಂಧಿ ತರಹ ಅಧಿಕಾರ ಸ್ಥಾನವನ್ನು ಪಿತ್ರಾಜರ್ಿತ (ಅಥವಾ ಮಾತ್ರಾಜರ್ಿತ) ಆಸ್ತಿಯ ಹಾಗೆ ಪಡೆಯಲಿಲ್ಲ. ಚುನಾವಣೆಯ ಟಿಕೆಟ್ಗಾಗಿ ಅವರಿವರ ಮುಂದೆ ಹಲ್ಲು ಗಿಂಜಲಿಲ್ಲ. ಗಣಿ-ಗಿಣಿ ಅಂತ ಏನೇನೋ ವ್ಯವಹಾರ ಮಾಡಲಿಲ್ಲ. ತನ್ನ ಪಕ್ಷದೊಳಗೆ ವಿವಿಧ ಅಧ್ಯಕ್ಷೀಯ ಅಭ್ಯಥರ್ಿಗಳೊಡನೆ ನಿಜವಾದ ಪ್ರಜಾತಾಂತ್ರಿಕ ಕ್ರಮದಲ್ಲಿ ಸ್ಪಧರ್ಿಸಿದವನು. ಜನರ ಮುಂದೆ ಹೋಗಿ, `ಪ್ರೈಮರಿ' ಚುನಾವಣೆ ಎದುರಿಸಿ, ಗೆದ್ದ ವ್ಯಕ್ತಿ ಆತ. ಆ ಗೆಲುವಿನ ಬಲದಿಂದಲೇ ಅವನು ಅಧ್ಯಕ್ಷೀಯ ಅಭ್ಯಥರ್ಿಯಾಗುವ ಅವಕಾಶವನ್ನು ಪಡೆದುಕೊಂಡ. ಅಧ್ಯಕ್ಷೀಯ ಸ್ಥಾನಕ್ಕೆ ಸ್ಪಧರ್ಿಸಿ ಜನರಿಂದ ಮತ ಪಡೆದು ಆರಿಸಿಬಂದು, ರಾಷ್ಟ್ರಪತಿಯಾದ ವ್ಯಕ್ತಿ. ಅವನಿಗೆ ಯಾವುದೇ ರಾಜಕೀಯ ದೊಣ್ಣೆನಾಯಕನ, ದೊಣ್ಣೆನಾಯಕಿಯ `ಆಶೀವರ್ಾದ' ಬೇಕಿಲ್ಲ. ಜನಬಲವಿದ್ದವನು ಯಾರ ಮುಂದೆಯೂ ಹಲ್ಲು ಗಿಂಜಬೇಕಿಲ್ಲ. ಅಂತಹ ಜನತಂತ್ರ ವ್ಯವಸ್ಥೆ ಅಮೆರಿಕದಲ್ಲಿದೆ. ಅಲ್ಲಿ ಜನರ ಅಭಿಪ್ರಾಯಕ್ಕೆ ಬೆಲೆಯಿದೆ. ಜನರಿಗೂ ಬೆಲೆಯಿದೆ.

ನಮ್ಮ ಸಂವಿಧಾನದಲ್ಲಿ ಅಮೆರಿಕಕ್ಕಿಂತಲೂ ಎಷ್ಟೋ ಒಳ್ಳೆಯ ಅಂಶಗಳು ಇವೆ, ನಿಜ. ಆದರೆ ಸಕರ್ಾರ ರೂಪಿಸುವ ವಿಷಯದಲ್ಲಿ ನಾವು ದೊಡ್ಡದಾಗಿ ಎಡವಿದ್ದೇವೆ. ಬ್ರಿಟಿಷರು `ನಮಗಾಗಿ' ರೂಪಿಸಿದ್ದ 1935ರ `ಗವರ್ನಮೆಂಟ್ ಇಂಡಿಯಾ ಆಕ್ಟ್'ನಿಂದ ಎರವಲು ಪಡೆದ ಆಡಳಿತ ಕ್ರಮ ನಮ್ಮದು. ನಮ್ಮ ಹೊಸ ಸಂವಿಧಾನದಲ್ಲಿ ಅಧಿಕಾರ ಇರುವ ಸ್ಥಾನಗಳಿಗೆ ಯಾರು ಬರಬೇಕೆಂದು ನಿರ್ಧರಿಸುವ ಅವಕಾಶವನ್ನು ಜನರಿಗೆ ನೀಡಲಾಗಿಲ್ಲ. ದೇಶದ ರಾಜಕೀಯ ಮುಖ್ಯಸ್ಥರನ್ನು ಜನರೇ ನೇರವಾಗಿ ಆರಿಸುವ ವ್ಯವಸ್ಥೆ ಇಲ್ಲೂ ಇದ್ದರೆ ಚೆನ್ನಾಗಿತ್ತು. ಆದರೆ ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಜನರಿಗೆ ಅಂತಹ ಅವಕಾಶ ಇನ್ನೂ ಸಿಕ್ಕಿಲ್ಲ. ನಮ್ಮ ಜನರಿಗೆ ಅಂತಹ ಯೋಗ್ಯತೆ ಇಲ್ಲ ಎಂದು ಭಾವಿಸಲಾಗಿದೆಯೆ?

ಇಲ್ಲಿ ಜನರ ಕೆಲಸ ಏನಿದ್ದರೂ ಬರೀ `ಪ್ರತಿನಿಧಿ'ಗಳನ್ನು ಆರಿಸುವುದು. ಅನಂತರ ಅವರು ನಡೆಸುವ ರಾಜಕೀಯ ದೊಂಬರಾಟ ನೋಡುತ್ತಾ ಸುಮ್ಮನೆ ಕೂರುವುದು! ಅಮೆರಿಕ ತರಹದ ವ್ಯವಸೆಕಿಲ್ಲಿಯೂ ಇದ್ದಿದ್ದರೆ ಇಲ್ಲಿ ದೇವೇಗೌಡ, ಗುಜ್ರಾಲ್ ಮುಂತಾದವರು ಸಿಂಹಾಸನಕ್ಕೆ ವಕ್ಕರಿಸಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಮನಮೋಹನ್ ಸಿಂಗ್ ಎಂಬ ಪಕ್ಕಾ ರಾಜ್ಯಸಭಾ ಮೆಟೀರಿಯಲ್ ಪೇಲವ ನಗೆ ನಗುತ್ತ ಜನಪಥ ಹಾಗೂ ನಾತರ್್ಬ್ಲಾಕ್ ಎಂದು ಗಿರಕಿ ಹೊಡೆದೂ ಹೊಡೆದೂ ಐದು ವರ್ಷ ತುಂಬಿಸುವುದು ಸಾಧ್ಯವಾಗುತ್ತಿರಲಿಲ್ಲ.

ಮೊದಲನೆಯದಾಗಿ ಸ್ವತಃ ಜವಹರ್ಲಾಲ್ ನೆಹರೂ ಪ್ರಧಾನಿಯಾಗುವುದೇ ಸಾಧ್ಯವಾಗುತ್ತಿರಲಿಲ್ಲ! ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್ನಲ್ಲಿದ್ದಾಗ ದೇಶದೊಳಗೆ ಹಾಗೂ ಪಕ್ಷದೊಳಗೆ ಅವರೇ ಅತ್ಯಂತ ಜನಪ್ರಿಯ ನಾಯಕ ಎನಿಸಿದ್ದರು. ಪಕ್ಷದಿಂದ ಅವರನ್ನು ಓಡಿಸಿದ ನಂತರ ಜನರ ನಡುವೆ ಅವರ ಕೀತರ್ಿ ಇನ್ನೂ ಬೆಳೆಯಿತು. ಕಾಂಗ್ರೆಸ್ ಒಳಗೆ ಸದರ್ಾರ್ ಪಟೇಲ್ ಪ್ರಶ್ನಾತೀತ ನಾಯಕರಾಗಿದ್ದರು. ಜನರ ನಡುವೆಯೂ ಅವರು ಬಹಳ ಜನಪ್ರಿಯರಾಗಿದ್ದರು. ಈಚಿನ ರಾಜೀವ್ ಗಾಂಧಿ ಹಾಗೂ ಇಂದಿನ ರಾಹುಲ್ ಗಾಂಧಿ ಹೇಗೋ ಹಾಗೆ ಅಂದು ಜವಹರ್ ಲಾಲ್ ಇದ್ದರು. ಮೇಲಿನಂದ ಅವರನ್ನು `ಇಂಪೋಸ್' ಮಾಡಲಾಗಿತ್ತು.

1947ರಲ್ಲಿ ದೇಶಕ್ಕೆ ಪ್ರಧಾನಿ ಯಾರಾಗಬೇಕು ಎಂಬ ಪ್ರಶ್ನೆ ಎದ್ದಾಗ ಅನೇಕರು `ಪಟೇಲರು ಆಗಲಿ' ಎಂದೇ ಅಭಿಪ್ರಾಯಪಟ್ಟಿದ್ದರು. ನೆಹರೂಗೆ ಇದ್ದ ಬೆಂಬಲ ನಗಣ್ಯವಾಗಿತ್ತು. ಅಮೆರಿಕದ ಹಾಗೆ `ಪ್ರೈಮರಿ' ಚುನಾವಣೆ ನಡೆದಿದ್ದರೆ ಅವರು ಸೋಲುತ್ತಿದ್ದರು. ಆದರೆ `ನೆಹರೂ ಪ್ರಧಾನಿಯಾಗಲಿ' ಎಂದು ಗಾಂದೀಜಿ ಪಟ್ಟು ಹಿಡಿದರು. ಪಟೇಲ್ ತಲೆ ಬಾಗಿದರು. ನೆಹರೂ ಪ್ರಧಾನಿಯಾದರು. ಆದರೆ, `ಈ ವಿಷಯ ಜನರಿಗೆ ಬಿಟ್ಟಿದ್ದು. ತಮ್ಮ ಪ್ರಧಾನಿಯನ್ನು ಆರಿಸುವ ಅಂತಿಮ ಹಕ್ಕು ಅವರದೇ ಹೊರತು ನಮ್ಮ-ನಿಮ್ಮದಲ್ಲ' ಎಂದು ಯಾವ ರಾಜಕೀಯದ ಮಹಾತ್ಮನೂ ಅಥವಾ ಯಾವ ಸಾಮಾಜಿಕ ಪುಣ್ಯಾತ್ಮನೂ ಪಟ್ಟು ಹಿಡಿಯಲಿಲ್ಲ!

ಇಂತಹವರೇ ಪ್ರಧಾನಿಯಾಗಲಿ ಎಂದು ಹೇಳುವ ಅಧಿಕಾರವನ್ನು ಗಾಂಧೀಜಿಗೆ ಕೊಟ್ಟವರು ಯಾರು? ಇದು ಜನತಂತ್ರ ವಿರೊಧಿ ಕ್ರಮ. ದೇಶಕ್ಕಾಗಿ ಎಷ್ಟು ಹೋರಾಡಿದರೂ ಎಷ್ಟು ತ್ಯಾಗ ಮಾಡಿದರೂ ದೇಶದ ಹಣೆಬರಹವನ್ನು ಮನಬಂದಂತೆ ಬರೆಯುವ ಹಕ್ಕು ಯಾರಿಗೂ ಬರಬಾರದು. ಅದು ಶುದ್ಧ ಪ್ರಜಾತಂತ್ರವಲ್ಲ. ಆದರೆ ಸ್ವತಂತ್ರ ಭಾರತದ ಮೊದಲ ತಲೆಮಾರಿನ ನಾಯಕರು ಈ ಕುರಿತು ಯೋಚಿಸಲೇ ಇಲ್ಲ.

ಏಕೆ ಹೀಗೆ? ನಮ್ಮ ಜನರಿಗೆ ಪ್ರಧಾನಿ ಅಥವಾ ಅಧ್ಯಕ್ಷರನ್ನು ಆರಿಸುವ ಯೋಗ್ಯತೆ ಇಲ್ಲವೆ? ವಾಸ್ತವ ಏನೆಂದರೆ, ಯಾವ ಅಧಿಕಾರಸ್ಥರನ್ನೂ ಆರಿಸುವ ಅವಕಾಶವನ್ನು ನಮ್ಮ ಜನರಿಗೆ ನೀಡಲಾಗಿಲ್ಲ!

ನೀವು ವಿವಿಧ ಮಟ್ಟಗಳ ಪಂಚಾಯಿತಿಯ ಸದಸ್ಯರನ್ನು ಮಾತ್ರ ಆರಿಸುತ್ತೀರಿ. ಅವುಗಳ ಅಧ್ಯಕ್ಷರನ್ನಲ್ಲ. ವಿಧಾನಸಭೆಯ ಶಾಸಕರನ್ನು ಆರಿಸುತ್ತೀರಿ. ಮುಖ್ಯಮಂತ್ರಿಯನ್ನಲ್ಲ! ಸಂವಿಧಾನದಲ್ಲಿ ಒಬ್ಬ ಶಾಸಕನಿಗೆ ಏನು ಅಧಿಕಾರ ಕೊಡಲಾಗಿದೆ? ವಿಧಾನಸಭೆಯಲ್ಲಿ ಕಾನೂನು ಮಸೂದೆಗಳಿಗೆ ಮತ ಹಾಕುವುದನ್ನು ಬಿಟ್ಟರೆ ಅಂತಹ ಘನಂದಾರಿ ಅಧಿಕಾರವೇನೂ ಇಲ್ಲ. ಆದ್ದರಿಂದಲೇ ಅವನು `ನಿಮ್ಮ ಆಯ್ಕೆ'! ನಿಜವಾದ ಆಡಳಿತಾತ್ಮಕ ಅಧಿಕಾರ ಇರುವ ಮುಖ್ಯಮಂತ್ರಿ `ನಿಮ್ಮ ಆಯ್ಕೆಯಲ'್ಲ! ಅವನು ಪಕ್ಷದ ಅಧ್ಯಕ್ಷರ ಆಯ್ಕೆ! ಅಥವಾ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎರಡೂ ಅವನೇ ಆಗಿರಬಹುದು. ಅಥವಾ ಕುಮಾರಸ್ವಾಮಿ ತರಹ ತನ್ನಿಂದ, ತನಗಾಗಿ, ತನಗೆ ತಾನೇ ಆರಿಸಿಕೊಂಡವನಾಗಬಹುದು! ಪ್ರಧಾನ ಮಂತ್ರಿ ವಿಷಯದಲ್ಲಿಯೂ ಅಷ್ಟೇ. ಜನರ ಅಭಿಪ್ರಾಯ ಕೇಳುವವರು ಯಾರು? ಕಾಂಗ್ರೆಸ್ ಸಂಸದರನ್ನು ನೀವು ಆರಿಸಿದರೆ ಅನಂತರದ ಕೆಲಸ ಸೋನಿಯಾದು.

`ಮನಮೋಹನ್ ಪ್ರಧಾನಿಯಾಗಲಿ' ಎಂದು ಆಕೆ ಅಪ್ಪಣೆ ಮಾಡಿದರೆ ಮುಗಿಯಿತು. ಮನಮೋಹನ್ ಪ್ರಧಾನಿ! ನಾಳೆ ರಾಹುಲ್ ತಲೆ ಮೇಲೆ ಆಕೆ ತನ್ನ ಕೈಯಿಟ್ಟರೆ ಆತನೇ ಪ್ರಧಾನಿ!

ಜಗತ್ತಿನ ಅತಿದೊಡ್ಡ ಪ್ರಜಾತಂತ್ರದ ಪಾಡು ಇದು!

ಇಲ್ಲಿ ಯಾರು ಬೇಕಾದರೂ ಅಧಿಕಾರ `ಹಿಡಿಯ'ಬಹುದು. ಯಾರಿಗೂ ಜನರ ಹಂಗು ಬೇಕಿಲ್ಲ. ಚುನಾವಣೆಯೂ ಬೇಕಿಲ್ಲ. ತನ್ನ ಜನ್ಮದಲ್ಲಿ ಯಾವ ಚುನಾವಣೆಯನ್ನೂ ಗೆಲ್ಲದ ವ್ಯಕ್ತಿ ನಮ್ಮ ಈಗಿನ ಪ್ರಧಾನಿ! ಚುನಾವಣೆ ಇಲ್ಲದೇ ನೇರವಾಗಿ ಆರು ತಿಂಗಳ ಕಾಲ ಯಾರು ಬೇಕಾದರೂ ಪ್ರಧಾನಿ ಅಥವಾ ಮುಖ್ಯಮಂತ್ರಿ ಆಗಲು ನಮ್ಮ ಸಂವಿಧಾನದಲ್ಲೇ ಅವಕಾಶವಿದೆ. ಜನರ ಹಂಗೇ ಇಲ್ಲದ ಪ್ರಜಾತಂತರ ಇದು! ಜನರ ಅಗತ್ಯವೇ ಇಲ್ಲದ ಜನತಂತ್ರ ಇದು! ಜನರ ಅನುಮೋದನೆ ಇಲ್ಲದೇ ರಾಜಕೀಯ ಅಧಿಕಾರ ಸ್ಥಾಪಿಸುವ ಅವಕಾಶವನ್ನು ಸ್ವತಃ ನಮ್ಮ ಸಂವಿಧಾನದಲ್ಲೇ ನೀಡಲಾಗಿದೆ! ಜಾರ್ಖಂಡ್ನಲ್ಲಿ ಶಿಬು ಸೋರೆನ್ ಮುಖ್ಯಮಂತ್ರಿ ಆದಂತೆ ಭ್ರಷ್ಟರು, ಕೊಲೆಗಾರರು ಯಾರು ಬೇಕಾದರೂ, ಚುನಾವಣೆಯ ಗಾಳಿ-ಗಂಧ ಯಾವುದೂ ಇಲ್ಲದೇ, ಇಲ್ಲಿ ಅಧಿಕಾರ ಹಿಡಿಬಹುದು. ಮುಖ್ಯಮಂತ್ರಿ ಆಗಬಹುದು. ಕೈಯಲ್ಲಿ ಆರು ಜನ ಎಂಪಿಗಳನ್ನು ಮತ್ತು ಕೋಟಿಗಟ್ಟಲೆ ಹಣವನ್ನು ಇಟ್ಟುಕೊಂಡು ಪ್ರಧಾನಮಂತ್ರಿಯ ಗದ್ದುಗೆ ಏರುವ ಕನಸು ಕಾಣಬಹುದು. ಒಮ್ಮೆ ಅಧಿಕಾರ ಹಿಡಿದ ನಂತರ ಚುನಾವಣೆಯಲ್ಲಿ ಸೋತರೂ `ರಾಜೀನಾಮೆ ಕೊಡಲ್ಲ' ಎಂದು ಹಠ ಹಿಡಿಯಬಹುದು. ಅಧಿಕಾರ ಹೋದರೂ `ಮನೆ ಬಿಡಲ್ಲ' ಎನ್ನಬಹುದು! ಇದನ್ನೆಲ್ಲ ತಡೆಯುವ ಶಕ್ತಿ `ಸಾಮಾನ್ಯ' ಜನರಿಗೆ ಇಲ್ಲ. ದೇವೇಗೌಡ, ಗುಜ್ರಾಲ್ ಅಂತಹವರಿಗೆ ಎಲ್ಲಿತ್ತು ಜನ ಬೆಂಬಲ?

ಬರಾಕ್ ಒಬಾಮಾ ಹಾಗಲ್ಲ. ಜನರ ನಡುವಿನಿಂದ, ಅವರ ಸಮ್ಮತಿಯಿಂದ, ಅಧಿಕಾರಕ್ಕೆ ಬರುವ ವ್ಯವಸ್ಥೆಯ ಸಂಕೇತವೇ ಬರಾಕ್ ಒಬಾಮಾ. ಆತ ಶುದ್ಧ ಪ್ರಜಾತಂತ್ರ ವ್ಯವಸ್ಥೆಯ ಉತ್ಪನ್ನ. ನಮಗೂ ಬರಾಕ್ ಬೇಕಾದರೆ ಮೊದಲು ನಮ್ಮ ಸಂವಿಧಾನದ ಸ್ವರೂಪ ಬದಲಾಗಬೇಕು. ಅಲ್ಲಿಯವರೆಗೆ ನಮಗೆ ಬರಾಕ್ ಒಬಾಮಾ ಸಿಗುವುದಿಲ್ಲ.

ಮೊದಲು ಜಾಜರ್್ ವಾಷಿಂಗ್ಟನ್ ಸಿಕ್ಕಿದ್ದರೆ ತಾನೆ ಬರಾಕ್ ಒಬಾಮಾ ತನಕ ಪರಂಪರೆ ಬೆಳೆದು ಬರುವುದು? ನಾವು ಎಲ್ಲವನ್ನೂ `ಪರಿಸ್ಥಿತಿ'ಯ ವಶಕ್ಕೆ ಒಪ್ಪಿಸಿ ಕುಳಿತಿದ್ದೇವೆ. ಹೀಗಾಗಿ ನಮಗೆ ಸಿವಿಲಿಯನ್ ಡ್ರೆಸ್ನಲ್ಲಿರುವ ಇದಿ ಅಮಿನ್ಗಳು ಸಿಗುವ ಸಂಭವವೇ ಹೆಚ್ಚು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ