ಬುಧವಾರ, ಜನವರಿ 26, 2011

ಬ್ರಹ್ಮಾಂಡದ ರಹಸ್ಯ ಭೇದಿಸಲಾದೀತೆ?

ಬ್ರಹ್ಮಾಂಡ (ಯೂನಿವರ್ಸ್) ನಿಜಕ್ಕೂ ಎಷ್ಟು ದೊಡ್ಡದು? - ಎಂಬ ಪ್ರಶ್ನೆಯ ಉತ್ತರಕ್ಕಾಗಿ ವಿಜ್ಞಾನಿಗಳತ್ತ ನೋಡುತ್ತೇವೆ. ಆದರೆ ಆ ಬಗ್ಗೆ ಎಷ್ಟೇ ಅಧ್ಯಯನ ನಡೆಯುತ್ತಿದ್ದರೂ ಬ್ರಹ್ಮಾಂಡದ ಹುಟ್ಟು ಹಾಗೂ ಅದರ ವ್ಯಾಪ್ತಿ ಕುರಿತು ವಿಜ್ಞಾನಿಗಳಿಗೂ ಖಚಿತವಾಗಿ ಏನೂ ತಿಳಿದಿಲ್ಲ! ಬ್ರಹ್ಮಾಂಡ ಅನಂತವೆ? ಅಥವಾ ಅದಕ್ಕೆ `ಗಡಿ'ಗಳಿವೆಯೆ? ಒಂದಲ್ಲದೇ ಹಲವಾರು ಬ್ರಹ್ಮಾಂಡಗಳಿವೆಯೆ? - ಇತ್ಯಾದಿ ಚಚರ್ೆ ನಡೆಯುತ್ತಲೇ ಇದೆ.

ಬ್ರಹ್ಮಾಂಡ ಅನಂತವಲ್ಲ ಎಂದುಕೊಂಡರೆ, ಅದು ಎಷ್ಟು ದೊಡ್ಡದು? ಅದರಿಂದಾಚೆಗೆ ಏನಿದೆ? - ಎಂಬ ಪ್ರಶ್ನೆಗಳೂ ಮೂಡುತ್ತವೆ.

ಮನುಷ್ಯನ ಜೀವನ ಭೂಮಿಯೊಳಗೆ ಬಂಧಿಸಲ್ಪಟ್ಟಿದೆ. ಭೂಮಿ ಬಿಟ್ಟು ಆತ ಎಲ್ಲಿಗೂ ಹೋಗುವಂತಿಲ್ಲ. ಮನುಷ್ಯರು ಹೆಚ್ಚೆಂದರೆ 100-120 ವರ್ಷ ಬದುಕಿರಬಲ್ಲರು. ನಿಮಗೊಂದು ಮ್ಯಾಜಿಕ್ ನೌಕೆ ಕೊಟ್ಟರೂ ನೀವು ಅದರಲ್ಲಿ ಕುಳಿತು 120 ವರ್ಷದಲ್ಲಿ ಎಷ್ಟು ದೂರ ಹೋಗಲು ಸಾಧ್ಯ? ಬ್ರಹ್ಮಾಂಡದ ಲೆಕ್ಕದಲ್ಲಿ ಕೋಟಿಗಳಿಗೂ ಬೆಲೆಯಿಲ್ಲ! ಕೋಟಿ ಕೋಟಿ ಎಂದರೂ ಅದು ಚಿಕ್ಕ ಸಂಖ್ಯೆಯೇ. ಹೀಗಾಗಿ ಬ್ರಹ್ಮಾಂಡದ ರಹಸ್ಯವನ್ನು ಮನುಷ್ಯ ಖುದ್ದಾಗಿ ತಿಳಿಯುವುದು ಅಸಾಧ್ಯ. ಅಲ್ಲದೇ ಮನುಷ್ಯನ ಅಂಗಾಂಗಳ, ಮೆದುಳಿನ (ಇಂದ್ರಿಯಗಳ) ಮೂಲಕ ಎಲ್ಲವನ್ನೂ ತಿಳಿಯಬಹುದು ಎನ್ನುವಂತಿಲ್ಲ.

ನಮ್ಮ ಇಂದ್ರಿಯ ಗ್ರಹಿಕೆಯ ಶಕ್ತಿಗೊಂದು ಮಿತಿಯಿದೆ. ಅದನ್ನು ಮೀರಿದ ವಿಚಾರಗಳೂ ಬ್ರಹ್ಮಾಂಡದಲ್ಲಿ ಇರಬಹುದು. ನಮಗೆ ಗೊತ್ತಿರುವಷ್ಟು ವಿಷಯಗಳು ಇರುವೆಗೆ ಗೊತ್ತೆ? ಹಾಗೆಯೇ, ನಾವು ತಿಳಿಯಲಾರದ ವಿಷಯಗಳೂ ಇರಬಹುದು. ಅಲ್ಲದೇ, ನಮ್ಮ ಭೌತಿಕ ಆಯಾಮವನ್ನು ಮೀರಿದ, ಮೇಲಿನ ಆಯಾಮಗಳೂ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು. ಅದರ ಬಗ್ಗೆ ಮುಂದೆ ನೋಡೋಣ.

ನಮ್ಮ ಸುತ್ತಲಿನ ಬಾಹ್ಯಾಕಾಶ, ನಮಗೆ ಕಾಣುತ್ತಿರುವ ಗ್ರಹ-ನಕ್ಷತ್ರಗಳು, ಗ್ಯಾಲಕ್ಸಿಗಳು - ಹೀಗೆ ಸಮೀಪದ ಸಂಗತಿಗಳನ್ನು ಅಧ್ಯಯನ ಮಾಡುವ ಮೂಲಕ ಹೊಸ ಹೊಸ ಸಿದ್ಧಾಂತಗಳನ್ನು ಸೃಷ್ಟಿಸುವುದು; ಆ ಸಿದ್ಧಾಂತಗಳನ್ನು ಆಧರಿಸಿ ಇನ್ನೂ ಹೊಸ ಅದ್ಯಯನಗಳನ್ನು ನಡೆಸುವುದು - ಇಷ್ಟನ್ನು ಈಗ ಮನುಷ್ಯ ಮಾಡಿಕೊಂಡು ಬರುತ್ತಿದ್ದಾನೆ.

ಬ್ರಹ್ಮಾಂಡದ ಬಗ್ಗೆ ಮನಸ್ಸಿನಲ್ಲಿ ಪೂರ್ಣ ಕಲ್ಪನೆ ಮಾಡಿಕೊಳ್ಳುವುದೂ ಮಾನವನ ಬುದ್ಧಿಶಕ್ತಿಗೆ ಸಾಧ್ಯವಾಗುವುದಿಲ್ಲ. ನಮ್ಮ ಭೂಮಿ ಸೌರವ್ಯೂಹದ ಒಂದು ಭಾಗ. ನಮ್ಮ ಇಡೀ ಸೌರವ್ಯೂಹವೇನೂ ದೊಡ್ಡದಲ್ಲ. ಅದು ಒಂದು ಸಾಧಾರಣ ಗಾತ್ರದ ಗ್ಯಾಲಕ್ಸಿಯ ಒಂದು ಪುಟ್ಟ ಭಾಗ.

ಯಾವುದೇ ಒಂದು ಒಂದು ಗ್ಯಾಲಕ್ಸಿಯಲ್ಲಿ ನಮ್ಮ ಸೂರ್ಯನಂತಹ (ಇನ್ನೂ ಚಿಕ್ಕ ಹಾಗೂ ದೊಡ್ಡ) ಕೋಟಿಗಟ್ಟಲೆ ನಕ್ಷತ್ರಗಳಿರುತ್ತವೆ. ಕೋಟಿಗಟ್ಟಲೆ ಸೌರವ್ಯೂಹಗಳೂ ಇರಬಹುದು! ನಾವಿರುವ ಗ್ಯಾಲಕ್ಸಿಗೆ ನಾವೇ `ಮಿಲ್ಕೀ ವೇ' ಎಂದು ಹೆಸರಿಟ್ಟುಕೊಂಡಿದ್ದೇವೆ. ನಮಗೆ ಕಾಣುವ ಇನ್ನೂ ಕೆಲವು ಗ್ಯಾಲಕ್ಸಿಗಳಿಗೆ ಇತರ ಹೆಸರುಗಳನ್ನು ಕೊಟ್ಟಿದ್ದೇವೆ. ಇಂತಹ ಗ್ಯಾಲಕ್ಸಿಗಳೂ ಕೋಟಿಗಟ್ಟಲೆ ಇವೆ!

ನೀವು ಭೂಮಿಯಿಂದ ಬಾಹ್ಯಾಕಾಶಕ್ಕೆ ಹೊರಟರೆ - ಅರೆ ಯಾವ ವೇಗದಲ್ಲಿ ಎಂದು ಹೇಳಲೇ ಇಲ್ಲವಲ್ಲ? ನಿಮ್ಮ ಕಾರು, ರಾಕೆಟ್ಗಳ ವೇಗ ಬಾಹ್ಯಾಕಾಶದ ಮುಂದೆ ಏನೇನೂ ಅಲ್ಲ. ಸರಿ, ಬೆಳಕಿನ ವೇಗದಲ್ಲಿ ಹೊರಟರೆ ಏನಾದರೂ ಸ್ವಲ್ಪ ಲೆಕ್ಕ ಹೇಳಬಹುದು. ಆದರೆ ಬೆಳಕಿನ ವೇಗದಲ್ಲಿ ಸಂಚರಿಸುವುದು ಅಸಾಧ್ಯ ಎಂದು ವಿಜ್ಞಾನಿ ಆಲ್ಬಟರ್್ ಐನ್ಸ್ಟೀನ್ ತೋರಿಸಿಕೊಟ್ಟಿದ್ದಾರೆ. ಆದರೂ ನೀವು ಬೆಳಕಿನ ವೇಗದಲ್ಲಿ ಹೊರಟಿರಿ ಎಂದುಕೊಳ್ಳೋಣ.

ಬೆಳಕಿನ ವೇಗ ಒಂದು ಸೆಕೆಂಡಿಗೆ ಸುಮಾರು 3 ಲಕ್ಷ ಕಿಲೋಮೀಟರ್! ಇಷ್ಟು ವೇಗದಲ್ಲಿ ಹೊರಟರೆ, ಸೂರ್ಯನ್ನು ಬಿಟ್ಟರೆ ಭೂಮಿಯ ಹತ್ತಿರ ಇರುವ ಇನ್ನೊಂದು ನಕ್ಷತ್ರ `ಆಲ್ಫಾ ಸೆಂಟಾರಿ'ಯನ್ನು ತಲುಪಲು 4.37 ವರ್ಷಗಳು ಬೇಕಾಗುತ್ತವೆ.

ಈಗಲೂ ನೀವು ನಮ್ಮ ಗ್ಯಾಲಕ್ಸಿಯ ಒಳಗೇ ಇರುತ್ತೀರಿ. ನಮ್ಮ ಗ್ಯಾಲಕ್ಸಿ ದಾಟಿ ಹೊರಹೋಗಲು 1 ಲಕ್ಷ ವರ್ಷಗಳು ಬೇಕು! ಇನ್ನೂ ಕೋಟ್ಯಂತರ ಗ್ಯಾಲಕ್ಸಿಗಳು ದಾರಿಯಲ್ಲಿ ಸಿಗುತ್ತವೆ. ಅವನ್ನೆಲ್ಲ ದಾಟಲು ಅದೆಷ್ಟು ಕೋಟಿ ವರ್ಷಗಳು ಬೇಕೋ ಯಾರಿಗೂ ತಿಳಿಯದು.

ಈಗ ಒಂದು ವಿಷಯ ನಿಮ್ಮ ಗಮನಕ್ಕೆ ಬಂದಿರಬಹುದು. ಬಾಹ್ಯಾಕಾಶದ ವಿಷಯಕ್ಕೆ ಬಂದಾಗ ಬೆಳಕಿನ ವೇಗವೂ ಏನೇನೂ ಅಲ್ಲ!

ಆದರೆ ಬೆಳಕಿನ ವೇಗಕ್ಕಿಂತಲೂ ಮಿಗಿಲಾದ ವೇಗ ಇನ್ಯಾವುದೂ ಇಲ್ಲ. ಹೀಗಾಗಿ ಬೆಳಕಿನ ವೇಗವನ್ನು ಬಿಟ್ಟರೆ ಬೇರೆ ಗತಿ ಇಲ್ಲ. ಆದರೆ ಸ್ವತಃ ಬೆಳಕಿಗೂ ಬ್ರಹ್ಮಾಂಡವನ್ನು ಅಳೆಯುವುದು, ಅದನ್ನು ಸವರ್ೇ ಮಾಡುವುದು ಅಸಾಧ್ಯ!

ಬ್ರಹ್ಮಾಂಡ ಹುಟ್ಟಿದ ತಕ್ಷಣ (ಅಥವಾ ಬಿಗ್ ಬ್ಯಾಂಗ್ ಆದ ಸಮಯದಲ್ಲಿ) ಎಷ್ಟೋ ನಕ್ಷತ್ರಗಳಿಂದ, ಆಕಾಶಕಾಯಗಳಿಂದ ಹೊರಟ ಬೆಳಕು ಇನ್ನೂ ನಮ್ಮ ಭೂಮಿಯನ್ನು ತಲುಪಿಲ್ಲ. ಮುಂದೆ ಬ್ರಹ್ಮಾಂಡ ಅಳಿಯುತ್ತದೆ ಎಂದುಕೊಂಡರೆ, ಅದು ಅಳಿಯುವ ಕಾಲ ಬಂದರೂ ಎಷ್ಟೋ ನಕ್ಷತ್ರಗಳಿಂದ ಹೊರಟ ಬೆಳಕಿನ ಕಿರಣಗಳು ಭೂಮಿಯನ್ನು ತಲುಪಿರುವುದಿಲ್ಲ.

ಇಂತಹ ಬ್ರಹ್ಮಾಂಡದ ವ್ಯಾಪ್ತಿಯನ್ನು ನಾವು ಅರಿಯಲಾದೀತೆ?

ಬ್ರಹ್ಮಾಂಡದ ಸ್ವರೂಪ ಎಲ್ಲ ಕಡೆಯೂ ಒಂದೇ ರೀತಿ ಇಲ್ಲ ಎಂಬುದು ಅನೇಕ ವಿಜ್ಞಾನಿಗಳ ವಾದ. ಪ್ರಸ್ತುತ ಭೌತನಿಯಮಗಳು ಅನ್ವಯವಾಗದ ಸ್ಥಳಗಳೂ ಬ್ರಹ್ಮಾಂಡದಲ್ಲಿ ಇರಬಹುದು ಎಂಬುದು ಅವರ ಊಹೆ. ಈಗ ನಮಗೆ ತಿಳಿದಿರುವ ರೀತಿಯಲ್ಲೇ ಬ್ರಹ್ಮಾಂಡ ಎಲ್ಲ ಕಡೆಗಳಲ್ಲೂ ಇರುತ್ತದೆ ಎಂದು ಇಟ್ಟುಕೊಂಡರೆ, ಮುಂದೊಂದು ದಿನ ನಮ್ಮ ವಿಜ್ಞಾನಿಗಳು ಅದರ ಉಗಮದ ಬಗ್ಗೆ, ಭವಿಷ್ಯದ ಬಗ್ಗೆ ಇನ್ನಷ್ಟು ತಿಳಿಯಬಲ್ಲರು, ಹೇಳಬಲ್ಲರು.

ನಮ್ಮ ಅನುಭವದಲ್ಲಿರುವ ಬ್ರಹ್ಮಾಂಡ ಮೂರು ಆಯಾಮಗಳಿಂದ ಕೂಡಿದೆ. ಉದ್ದ, ಅಗಲ ಹಾಗೂ ಆಳ (ಅಥವಾ ಗಾತ್ರ). `ಕಾಲ'ವೂ ಒಂದು ಆಯಾಮವೇ. ಒಟ್ಟು ಈ ನಾಲ್ಕು ಆಯಾಮಗಳು ನಮ್ಮ ಅರಿವಿನಲ್ಲಿ, ಗ್ರಹಿಕೆಯಲ್ಲಿ, ಅನುಭವದಲ್ಲಿ ಇವೆ. ಆದರೆ ವಿಜ್ಞಾನಿಗಳು ವಿವಿಧ ತರ್ಕಗಳನ್ನು ಅನ್ವಯಿಸಿ, ಹತ್ತು ಆಯಾಮಗಳು ಇರಲು ಸಾಧ್ಯ ಎಂಬ ಗಣಿತ ಸಿದ್ಧಾಂತವನ್ನು ತೋರಿಸುತ್ತಿದ್ದಾರೆ. ನಮಗಿಂತ ಮೇಲ್ಮಟ್ಟದ  ಆಯಾಮಗಳ ಲೋಕವನ್ನು `ಹೈಪರ್ಸ್ಪೇಸ್' ಎನ್ನುತ್ತಾರೆ.

ನಮ್ಮ ಪೂವರ್ಿಕರೂ ಇದೇ ರೀತಿಯಲ್ಲಿ ಗ್ರಹಿಕೆಯನ್ನು ಮಾಡಿದ್ದರು. `ಹೈಪರ್ಸ್ಪೇಸ್' ಅನ್ನು ಅವರು `ಊಧ್ರ್ವಲೋಕಗಳು' ಎಂದು ಕರೆದಿದ್ದರು. ಭೂ, ಭುವ, ಸುವ, ಮಹ, ಜನ, ತಪ ಹಾಗೂ ಸತ್ಯ ಎಂಬ ಮೇಲು ಮೇಲಿನ ಸ್ತರದ ಲೋಕಗಳ ಗ್ರಹಿಕೆಯನ್ನು ಮಂಡಿಸಿದ್ದರು.

ಈಗ ಆಧುನಿಕ ವಿಜ್ಞಾನಿಗಳ ಪ್ರಕಾರ ಹೈಪರ್ಸ್ಪೇಸ್ನ ನಿವಾಸಿಗಳು (ಈ ಕಲ್ಪನೆಗಳೆಲ್ಲ ನಿಜವಾಗಿದ್ದಲ್ಲಿ ಮಾತ್ರ) ಸರ್ವರೀತಿಯಿಂದಲೂ ನಮಗಿಂತ ಸಶಕ್ತರು. ಆದರೆ ಯಾವುದನ್ನೂ ನೀವು ಖುದ್ದಾಗಿ ಹೋಗಿ ನೋಡಿ ಪರಿಶೀಲಿಸುವ ಹಾಗಿಲ್ಲ. ಗಣಿತದ ಪ್ರಕಾರ ನಿಮ್ಮ ಸಿದ್ಧಾಂತಗಳನ್ನು ಕಾಗದದ (ಅಥವಾ ಕಂಪ್ಯೂಟರ್ ಮೂಲಕ) ಸಾಧಿಸಿ ತೋರಿಸಬೇಕು, ಅಷ್ಟೇ!

`ದೇವತೆಗಳು ಸೃಷ್ಟಿಯಾಗುವ ಮೊದಲೇ ಲೋಕವಿತ್ತು. ಅದರ ಮೂಲವನ್ನು ಬಲ್ಲವರಾರು? ಸೃಷ್ಟಿಯ ಹಿಂದಿನ ಶಕ್ತಿ ಯಾವುದು ಎಂಬುದು ದೇವತೆಗಳಿಗೂ ತಿಳಿದಿಲ್ಲ' ಎಂದು ಋಗ್ವೇದದ ನಾಸದೀಯ ಸೂಕ್ತ ಅಚ್ಚರಿಪಡುತ್ತದೆ.

ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಹಿಂದಿನವರಿಗೂ, ಈಗಿನವರಿಗೂ, ಎಲ್ಲ ಕಾಲಕ್ಕೂ ಬ್ರಹ್ಮಾಂಡ ಒಂದು ಸವಾಲೇ ಆಗಿದೆ. ಅದರ ನೈಜ ಸ್ವರೂಪ ಎಲ್ಲರ ಪಾಲಿಗೂ ರಹಸ್ಯವೇ ಆಗಿ ಉಳಿದಿದೆ.

ಹಾಗೆಂದು ಮನುಷ್ಯ ತನ್ನ ಜ್ಞಾನಯಾನವನ್ನು ನಿಲ್ಲಿಸುವ ಹಾಗಿಲ್ಲ. ಹೊಸ ಸಂಶೋಧನೆಗಳು, ಹೊಸ ಅಧ್ಯಯನಗಳು ನಡೆಯುತ್ತ ಇರಬೇಕು. ಜ್ಞಾನವನ್ನು ಗಳಿಸುವ ಪ್ರಯತ್ನದಲ್ಲಿ ಹೆಚ್ಚು ಮಜಾ ಇದೆ! ಏನಾದರೊಂದು ತಿಳಿಯುವುದು ಬಾಕಿ ಇದ್ದಾಗ ಮಾತ್ರ ಜೀವನದಲ್ಲಿ ಸ್ವಾರಸ್ಯ, ಖುಷಿ, ಥ್ರಿಲ್ ಇರುತ್ತವೆ. ಜೀವನಕ್ಕೊಂದು ಉದ್ದೇಶವೂ ಇರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ