ಮಂಗಳವಾರ, ಆಗಸ್ಟ್ 03, 2010

Kavalu: A Pre-Publication Review - ಸ್ವರೂಪ ಹಾಗೂ ಸಿದ್ಧಾಂತಗಳ ಸಂಘರ್ಷ

 (Published in SK much before the official release of the novel.)
ಡಾ. ಎಸ್. ಎಲ್. ಭೈರಪ್ಪನವರ 300 ಪುಟಗಳ ಹೊಸ ಕಾದಂಬರಿ `ಕವಲು' ಹೊಸ ಸಾಮಾಜಿಕ ಸನ್ನಿವೇಶಗಳತ್ತ ಪರಿಣಾಮಕಾರಿಯಾಗಿ ನಮ್ಮ ಗಮನ ಸೆಳೆಯುತ್ತದೆ. ತುಂಬ ಗಟ್ಟಿತನದ, ಗಂಭೀರ ಆಲೋಚನೆಯನ್ನು ಅತ್ಯಗತ್ಯವಾಗಿಸುವ ಕಾದಂಬರಿ.

ವಿಕೃತ `ಸೆಕ್ಯುಲರಿಸಂ'ನ ಪ್ರಯೋಗಗಳನ್ನು ಭೈರಪ್ಪನವರ ಹಿಂದಿನ ಕಾದಂಬರಿ `ಆವರಣ' ಕಾಣಿಸಿದರೆ, `ಕವಲು' ವಿಕೃತ `ಫೆಮಿನಿಸಂ'ನ ಹಾಗೂ ಮಹಿಳಾ ಪರ ಕಾನೂನುಗಳ ಪರಿಣಾಮಗಳ ವಿಶ್ಲೇಷಣೆಯನ್ನು ಜೀವನ ಘಟನಾವಳಿಯ ಮೂಲಕ ನಡೆಸುತ್ತದೆ. ಇವೆರಡೂ ಓದಿದವರನ್ನು ಹಲವಿಧಗಳಲ್ಲಿ `ಕಾಡುವ' ಕಾದಂಬರಿಗಳು.

ಸಾಮಾಜಿಕ ಹಾಗೂ ರಾಜಕೀಯ ನೆಲೆಗಳಲ್ಲಿ ಸೈದ್ಧಾಂತಿಕ ಸ್ಥಿತ್ಯಂತರಗಳಾಗುವ ಸಮಯದಲ್ಲಿ ತಲೆದೋರುವ ವೈಯಕ್ತಿಕ ಹಾಗೂ ವ್ಯವಸ್ಥೆಗಳ ಮಟ್ಟದ ಪತನಗಳು ಭೈರಪ್ಪನವರ ಈ ಹಿಂದಿನ `ತಂತು' ಹಾಗೂ `ಮಂದ್ರ' ಕಾದಂಬರಿಗಳಲ್ಲಿ ಎಳೆ ಎಳೆಯಾಗಿ ಬಿಂಬಿತವಾಗಿದ್ದವು. ಇಲ್ಲಿ ಈ ಅಂಶಗಳು ಇನ್ನೂ ಹೆಚ್ಚಿನ ಸಾಂದ್ರತೆ ಹಾಗೂ ವಿಸ್ತರಣೆಗಳನ್ನು ಪಡೆದುಕೊಂಡಿವೆ.
ಅಸ್ತಿತ್ವವಾದಕ್ಕೆ ತಳುಕು ಹಾಕಿಕೊಂಡ ಸ್ತ್ರೀವಾದ, ಮಾಕ್ಸರ್್ವಾದ, ಫ್ರಾಯ್ಡ್ ಸಿದ್ಧಾಂತ, ಎಡಪಂಥ - ಇವುಗಳನ್ನು ವೈಯಕ್ತಿಕ ಜೀವನದಲ್ಲಿ ಪ್ರಯೋಗಿಸಿಕೊಳ್ಳುವುದು, ಜೊತೆಗೆ ಕಲಿತವರ ಸ್ವ-ಕೇಂದ್ರಿತ ಸಂಕುಚಿತ ಮನೋಭಾವ, ಅವಕಾಶವಾದ, ಅನುಕೂಲವಾದ, ಸ್ವೇಚ್ಛಾಚಾರ, ವಿವಾಹಪೂರ್ವ ಹಾಗೂ ವಿವಾಹೇತರ ಕಾಮ, ಸ್ತ್ರೀ ಸಲಿಂಗಕಾಮ, ಡೈವೋಸರ್್, ಅವುಗಳ ಪರಿಣಾಮಗಳು  - ಇವುಗಳೆಲ್ಲ ಒಟ್ಟಾರೆಯಾಗಿ ಭಾರತೀಯ ಕುಟುಂಬ ವ್ಯವಸ್ಥೆಯ ಮೇಲೆ, ಅದರ ಒಟ್ಟಾರೆ ಆರೋಗ್ಯ ಹಾಗೂ ಸಂತುಲನದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರುತ್ತಿವೆ ಎಂಬುದು ಮೂಲ ಕಥಾವಸ್ತು.

* ಬುದ್ಧಿಕುಂಠಿತ ಮಗಳಿರುವ, ಹೆಂಡತಿ ಸತ್ತ ಮೂರು ವರ್ಷಗಳ ನಂತರ ಕಾಮಪೀಡನೆ ಸಹಿಸಲಾರದೆ ಆಪ್ತ ಸಹಾಯಕಿ ಮಂಗಳೆಯ ಸಂಗ ಬಯಸುವ, ನಂತರ ಆಕೆಯ ಬ್ಲ್ಯಾಕ್ಮೇಲ್ಗೆ ಸಿಕ್ಕಿ ಅವಳನ್ನು ಮದುವೆಯಾಗುವ, ತದನಂತರ ಕರೆವೆಣ್ಣುಗಳ ಆಕರ್ಷಣೆಗೂ ಒಳಗಾಗಿ ಕಾನೂನು ಕಪಿಮುಷ್ಠಿಯಲ್ಲಿ ಸಿಲುಕಿಕೊಳ್ಳುವ ಉದ್ಯಮಿ ಜಯಕುಮಾರ್ -

* ವಿಶ್ವವಿದ್ಯಾಲಯದಲ್ಲಿ ಪಶ್ಚಿಮದ ಸ್ವಕೇಂದ್ರಿತ ಸ್ವೇಚ್ಛಾಚಾರ ಹಾಗೂ ಸ್ತ್ರೀವಾದಗಳನ್ನು ಮೈಗೂಡಿಸಿಕೊಂಡಿರುವ `ಬರಿ ಹಣೆಯ, ಸೂತಕದ ಕಳೆಯಿರುವ', ಅನುಕೂಲವಾದಿ, ಮಂಗಳೆ-

*  ಫೆಮಿನಿಸಂ, ಫ್ರೀಸೆಕ್ಸ್ಗಳನ್ನು ತರಗತಿಯಲ್ಲಿ ಬೋಧಿಸುವ ಹಾಗೂ ಅವುಗಳನ್ನು ತನ್ನ ವೈಯಕ್ತಿಕ ಜೀವನದಲ್ಲೂ ಪ್ರಯೋಗಿಸಿಕೊಳ್ಳುವ ಡಾ. ಇಳಾ -

* ಪಶ್ಚಿಮದ ಸಂಪರ್ಕವಿರುವ ಉನ್ನತ ಹುದ್ದೆಯಲ್ಲಿದ್ದರೂ ತನ್ನ ಬುದ್ಧಿಭಾವಗಳ ಸಹಜ ಸ್ವರೂಪವನ್ನು ತ್ಯಜಿಸದ ಆಕೆಯ ಪತಿ ವಿನಯಚಂದ್ರ -

* ಒಟ್ಟು ಕುಟುಂಬದ ಹಿತಕ್ಕೆ ಕಂಟಕವಾಗುವ ಸೊಸೆಯನ್ನು `ನಿಮ್ಮಪನ ಮನೆಯಿಂದೇನು ತಂದಿದ್ದೀಯ?' ಎಂದು ಕೇಳಿ ವರದಕ್ಷಿಣೆ ಕೇಸಿನಲ್ಲಿ ಜೈಲಿಗೆ ಹೋಗುವ ವೃದ್ಧೆ ರಾಜಮ್ಮ -

* `ಲಿವಿಂಗ್ ಟುಗೆದರ್' ಸಂಬಂಧದಲ್ಲಿ ದಾಂಪತ್ಯದ ಬದ್ಧತೆ ಹಾಗೂ ಸ್ಥಿರತೆಗಳನ್ನು ಬಯಸುವ, ನಂತರ ಪ್ರಿನಪ್ಷಲ್ ಅಗ್ರಿಮೆಂಟ್ ಇಲ್ಲದೇ ಎರಡು ಮಕ್ಕಳ ತಾಯಿಯೊಬ್ಬಳನ್ನು ಮದುವೆಯಾಗಿ ಅನಂತರ ವಿಚ್ಚೇದಿತನಾಗಿ ತನ್ನ ಸಂಬಳದ ಮುಕ್ಕಾಲು ಪಾಲನ್ನು ಕಳೆದುಕೊಂಡು ಇತ್ತ ಭಾರತೀಯನೂ ಅಲ್ಲದ, ಅತ್ತ ಪೂರ್ಣ ಅಮೆರಿಕನ್ನೂ ಅಲ್ಲದ ಸ್ಥಿತಿ ತಲುಪುವ ಅಮೆರಿಕದ ಪಸ್ಟ್ ಜನರೇಷನ್ ಇಮಿಗ್ರೆಂಟ್ ನಚಿಕೇತ -

* ಬುದ್ಧಿಕುಂಠಿತ ಮುಗ್ಧ ಹುಡುಗಿ ವತ್ಸಲೆ (ಪುಟ್ಟಕ್ಕ) ಹಾಗೂ ತನ್ನ ಸಮಾಜದ ಸಹಜ ಮೌಲ್ಯಗಳನ್ನು ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಸಾಗುವ ಹುಡುಗಿ ಸುಜಯಾ -

* ಸ್ತ್ರೀಲೋಲ ಹಾಗೂ ವ್ಯವಹಾರ ಚತುರನಾದ ಟ್ರಾನ್ಸ್ಪೋಟರ್್ ಅಧಿಕಾರಿ ಪ್ರಭಾಕರ, ಮಂತ್ರಿ ದೊರೆರಾಜು; ಫೆಮಿನಿಸ್ಟ್ ಅಡ್ವೋಕೇಟ್ಗಳಾದ ಮಾಲಾ ಕೆರೂರ್ ಮತ್ತು ಚಿತ್ರಾ ಹೊಸೂರ್ -

- ಇವರೆಲ್ಲ ಓದುಗರ ಬುದ್ಧಿಭಾವಗಳ ಪ್ರಚೋದಕರಾಗುವಂತೆ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.

`ಸಮಾಜೋನ್ನತ' ವರ್ಗದ ಈ ವ್ಯಕ್ತಿಗಳ ಜೀವನ-ದರ್ಶನ ಮಾಡಿಸುತ್ತ ಕಥೆ ಸಾಗುತ್ತದೆ. ಕೆಲವು ವರ್ಷಗಳ ಅವಧಿಯಲ್ಲಿ ನಡೆಯುವ ಘಟನಾವಳಿಗಳು ಬಿಚ್ಚಿಕೊಂಡಂತೆ, `ಅಬಲೆ'ಯರ ಹಿತರಕ್ಷಣೆಗೆಂದು ಪಶ್ಚಿಮದ ದೇಶಗಳಿಂದ ಸ್ಫೂತರ್ಿ ಪಡೆದು ರಚಿಸಲಾಗಿರುವ ಕಾನೂನುಗಳ `ಡ್ರೆಕೋನಿಯನ್' ಸ್ವರೂಪ; ಅವುಗಳನ್ನು ವಿದ್ಯಾವಂತ `ಸಬಲೆ'ಯರು, ದುರುಪಯೋಗ ಮಾಡಿಕೊಳ್ಳುತ್ತಿರುವ ರೀತಿಗಳು; ವೃತ್ತಿಪರ ವಕೀಲರ ಹಾಗೂ ಸೈದ್ಧಾಂತಿಕ ಚಳವಳಿಗಾರರ ಅಣತಿಗೊಳಪಟ್ಟು ನಿಮರ್ಾಣವಾಗುವ ಕೌಟುಂಬಿಕ ಸನ್ನಿವೇಶಗಳು, ಕಾನೂನುಗಳು ಹಾಗೂ ತೀಪರ್ುಗಳು - ಇವೆಲ್ಲದರ ವಿಶ್ಲೇಷಣೆ ಬರುತ್ತದೆ.

ವರದಕ್ಷಿಣೆ, ಕೌಟುಂಬಿಕ ಹಿಂಚಾಚಾರ ಮುಂತಾದ ಕೆಲವು ಕೌಟುಂಬಿಕ ವಿಷಯಗಳಲ್ಲಿ ಕೇವಲ ಆರೋಪವೇ ಸಾಕು, ಶಿಕ್ಷೆಯಾಗಲು' ಎಂಬಂತಹ ಪರಿಸ್ಥಿತಿಯ ದುಲರ್ಾಭವನ್ನು ಹೇಗೆಲ್ಲ ಪಡೆಯಬಹುದು ಎಂಬುದು ಕಥೆಯೊಳಗೆ ಹಾಸುಹೊಕ್ಕಾಗಿ ಮೂಡಿಬರುತ್ತದೆ.

`ಬೇರೆ ಹೆಣ್ಣಿನ ಸಂಪರ್ಕ ಸಿಗದಂತೆ ವಿವಾಹದ ಬಂಧನನಲ್ಲಿ ಸಿಕ್ಕಿಸಿಕೋಬೇಕು... ಮರು ಮದುವೆ ಸಾಧ್ಯವಿಲ್ಲದಂತೆ ಮಾಡಲು ವಿಚ್ಚೇದನ ಕೊಡದೇ ನರಳಿಸಬೇಕು.. ಮದುವೆಯಾದ ಕ್ಷಣದಿಂದ ಗಂಡನ ಸಮಸ್ತ ಸ್ವಯಾಜರ್ಿತ ಹಾಗೂ ಪಿತ್ರಾಜರ್ಿತ ಆಸ್ತಿಯ ಅರ್ಧಭಾಗದ ಯಜಮಾನಿಕೆ ಹಕ್ಕು ಹೆಂಡತಿಗೆ ತಂತಾನೆ ಬಂದುಬಿಡುವಂತೆ ಕಾನೂನು ತರಬೇಕು... ವರದಕ್ಷಿಣೆ ಕಾನೂನಿನಡಿ ಅವನ ಸಂಬಂಧಿಕರನ್ನೆಲ್ಲ ನರಳಿಸಬೇಕು..' - ನವ ಸ್ತ್ರೀವಾದಿಗಳ ಈ ಮಾನಸಿಕತೆಗಳು, ಲಾಲಸೆಗಳು ಸೃಷ್ಟಿಸುತ್ತಿರುವ ತಾಕಲಾಟಗಳ, ಸಮಸ್ಯೆಗಳ ಚಿತ್ರಣವಿದೆ.

`ಯಾವ ಭಾರತೀಯ ಹೆಂಗಸೂ ತನ್ನ ಶೀಲದ ವಿಷಯದಲ್ಲಿ ಸುಳ್ಳು ಹೇಳಲ್ಲ' ಎಂದು ಈಚೆಗೆ ಸುಪ್ರೀಮ್ ಕೋಟರ್್ ನ್ಯಾಯಾಧೀಶರು (ಮುಗ್ಧವಾಗಿ?) ಅಭಿಪ್ರಾಯಪಟ್ಟಿರುವುದನ್ನು ನೆನಪಿಸುವ ಸನ್ನಿವೇಶಗಳು ಬರುತ್ತವೆ.

`ಕೋಟರ್ು ಹೆಂಗಸಿನ ಕಡೆ ವಾಲುತ್ತೆ. ಯಾಕೆಂದರೆ ನಮ್ಮ ಮಹಿಳೆ ಇನ್ನೂ ಸೀತಾ ಸಾವಿತ್ರಿಯ ಅಪರಾವತಾರ ಅನ್ನುವ ಗ್ರಹಿಕೆಯಿಂದ ಕಾನೂನು ರೂಪಿಸಿದಾರೆ' ಎನ್ನುವ ವಕೀಲ ಶಿವಪ್ರಕಾಶರ ಹೇಳಿಕೆ; `ನ್ಯಾಯ, ಅನ್ಯಾಯ, ಮೌಲ್ಯ, ಅಪಮೌಲ್ಯಗಳಾವುವೂ ಕಾನೂನಿಗೆ ಸಂಬಂಧಿಸಿದ್ದಲ್ಲ, ಇರುವ ಕಾನೂನನ್ನು ಬಳಸಿಕೊಂಡೇ ಪ್ರತಿಯೊಂದು ಪಾಟರ್ಿಯೂ ಸಾಧ್ಯವಿದ್ದಷ್ಟನ್ನು ಗುಂಜಿಕೊಳ್ಳುವುದಷ್ಟೇ ಎಲ್ಲೆಲ್ಲಿಯೂ ನಡೆಯೂದು. ಈ ವಿಷಯದಲ್ಲಿ ನ್ಯಾಯಾಧೀಶರಿಗೆ ಯಾವ ಸ್ವಾತಂತ್ರ್ಯವೂ ಇಲ್ಲ... ಇಂಥ ಯಾವ ವಿವಾದದಲ್ಲೂ ಕೋಟರ್ು ಹೆಂಗಸಿನ ಮಾತನ್ನ ನಂಬುತ್ತೆಯೇ ಹೊರತು, ಗಂಡಸಿನ ಮಾತಿಗೆ ಬೆಲೆಕೊಡುಲ್ಲ ' ಎಂಬ ವಕೀಲ ಸುಬ್ಬರಾಮಯ್ಯನ ವಿಶ್ಲೇಷಣೆ; `ಓದಿದ ಗಂಡಸರೆಲ್ಲ ಎಂಗಸರಾಗ್ತಾರೆ. ಓದಿದ ಎಂಗಸರೆಲ್ಲ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ ಎಂಗಸರು ಎಂಗಸರಾಗಿ ಇರಬೇಕಾದರೆ ಯಾರೂ ಓದಕೂಡದು' ಎಂಬ ಕಾನ್ಸ್ಟೇಬಲ್ ನಂಜುಂಡೇಗೌಡನ ಅನಿಸಿಕೆ - ಇವೆಲ್ಲ ಹೊಸ ಕ್ರೂರ ಸನ್ನಿವೇಶಗಳಿಗೆ ವಿವಿಧ ಸ್ತರಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯ-ಪ್ರತಿಕ್ರಿಯೆಗಳು.

ಆಧುನಿಕ ಹೆಂಗಸರಿಂದ ಹಾಗೂ ಏಕಮುಖಿ ಕಾನೂನುಗಳಿಂದ ಒಟ್ಟು ಕುಟುಂಬ, ಗಂಡಸರು ಹಾಗೂ ವಯೋವೃದ್ಧರು ಅನುಭವಿಸುತ್ತಿರುವ ಸಮಸ್ಯೆಗಳನ್ನು ವಿಶ್ಲೇಷಿಸುತ್ತ ಭಾರತೀಯ ಕುಟುಂಬದ ಸೌಹಾರ್ದತೆ, ಸುಸ್ಥಿರತೆಗಳಿಗೆ ಉಂಟಾಗುತ್ತಿರುವ ಭಂಗವನ್ನು `ಕವಲು' ಅನ್ವೇಷಿಸುತ್ತದೆ.

`ನಮ್ಮಪ್ಪ ನಿಮ್ಮಪ್ಪ ಅಣ್ಣ-ತಮ್ಮಂದಿರು. ಆದ್ದರಿಂದ ನಾವು ಅಣ್ಣ-ತಂಗಿಯರೇ ಹೊರತು `ಕಸಿನ್'ಗಳಲ್ಲ' ಎಂಬರ್ಥದಲ್ಲಿ ಬರುವ ಹುಡುಗ ಸತೀಶನ ಮಾತುಗಳು ಭಾರತೀಯ ಕುಟುಂಬದ ಕಲ್ಪನೆಯನ್ನು ಕಾಣಿಸುತ್ತದೆ.

`ಪಿತ್ರಾಜರ್ಿತ ಆಸ್ತಿಯನ್ನು ಕಷ್ಟದಲ್ಲಿರುವ ತಮ್ಮನಿಗೆ ಬಿಟ್ಟುಕೊಡಕೂಡದು ಅಂತ ನಿನ್ನ ಆಧುನಿಕ ಧರ್ಮಶಾಸ್ತ್ರವಾದ ಸಂವಿಧಾನ ಹೇಳಿಲ್ಲ. ಕಾಹಿಲೆ ಬಿದ್ದ ಅವನ ಹೆಂಡತಿಗೆ ಚಿಕಿತ್ಸೆ ಮಾಡಿಸಿ ಬದುಕಿಸಬಾರದು ಅಂತ ನಿನ್ನ ಸಂವಿಧಾನ ಹೇಳುತ್ತೆಯೆ?' - ಎಂಬ ವಿನಯನ ಪ್ರಶ್ನೆ ಭಾರತೀಯ ಸಮಾಜದ್ದೂ ಆಗುತ್ತದೆ.

ಭಾರತೀಯ ಜೀವನ ಕ್ರಮದಲ್ಲಿ ಸಹಜವಾಗಿ ಬೆಳೆದುಬಂದಿರುವ ಮೌಲ್ಯ, ಬದ್ಧತೆ, ಬಾಧ್ಯತೆಗಳ ಮತ್ತು ಹೊಸ ಲಾಲಸ ಸನ್ನಿವೇಶಗಳು ಸೃಷ್ಟಿಸುತ್ತಿರುವ ಸ್ವಕೇಂದ್ರಿತ ಹಕ್ಕೊತ್ತಾಯಗಳ ನಡುವಣ ಸಂಘರ್ಷವನ್ನು ಘಟನಾವಳಿಯ ಮೂಲಕ ಭೈರಪ್ಪ ಕಾಣಿಸುತ್ತ ಹೋಗುತ್ತಾರೆ. ವಿವಿಧ ರೀತಿಯ ನಂಬಿಕೆ, ಚಿಂತನೆಗಳಿರುವ ಪಾತ್ರಗಳು ತಮ್ಮದೇ ದೃಷ್ಟಿಯಿಂದ ನಿರೂಪಣೆ ಮಾಡುತ್ತ ಹೋಗುತ್ತವೆ. ಭೈರಪ್ಪ ತಾವೇ ಸ್ವತಃ `ಜಜ್ಮೆಂಟಲ್' ಆಗದಿದ್ದರೂ ಕಡೆಗೆ ಕೆಲವು ಪಾತ್ರಗಳಿಗೆ ಯಾವುದೋ ರೀತಿಯ ನೆಲೆಗಳನ್ನು ಒದಗಿಸಿಕೊಡುತ್ತಾರೆ. ಕೆಲವು `ಶೋಷಿತ' ಪಾತ್ರಗಳನ್ನು ನೈತಿಕವಾಗಿ `ಗೆಲ್ಲಿಸುತ್ತಾರೆ' ಎನ್ನಬಹುದು.

ಸಿದ್ಧಾಂತ ಪ್ರವರ್ತನೆ, ಕಾಮ, ಸ್ವಕೇಂದ್ರಿತ ಚಿಂತನೆಗಳಂತಹ ಸೂಕ್ಷ್ಮ ವಿಷಯಗಳನ್ನು ಹಲವು ದಿಕ್ಕುಗಳಿಂದ ವಿಶ್ಲೇಷಿಸುವ ಪ್ರೌಢಿಮೆ ಹಾಗೂ ಜಾಣ್ಮೆ ಅವರಿಗೆ ಕರಗತವಾಗಿದೆ. ಅವರ ಲೋಕಾನುಭವ, ಕೌಶಲ ಎದ್ದುಕಾಣುತ್ತವೆ.

`ತಂತು' ಹಾಗೂ `ಮಂದ್ರ'ಗಳಲ್ಲಿ ಬಳಕೆಯಾಗಿರುವ ತಂತ್ರದ ಮುಂದುವರಿದ ರೂಪ `ಕವಲು'ವಿನಲ್ಲಿ ಕಾಣುತ್ತದೆ. ಹಾಗೆಯೇ ಈ ಕಾದಂಬರಿಯ ಹಲವು ಪಾತ್ರಗಳು ಭೈರಪ್ಪನವರ ಓದುಗರಿಗೆ ಪರಿಚಿತವಿರುವಂತೆ (ಉದಾ: ಇಳಾ ಹಾಗೂ ಮಂಗಳೆಯರಲ್ಲಿ `ತಂತು'ವಿನ ಕಾಂತಿ, `ಅಂಚು'ವಿನ ಅಮೃತಾ ಛಾಯೆಗಳು ಕಾಣುತ್ತವೆ) ಕಂಡುಬರುತ್ತವೆ. ಆದರೂ ನಿರೂಪಣೆಯಲ್ಲಿ ಹೊಸ ಆಳ, ವಿಶ್ಲೇಷಣೆ ಹಾಗೂ ಒಳನೋಟಗಳನ್ನು ಕಾಣಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಆಧುನಿಕ ಸ್ತ್ರೀವಾದದಂತಹ `ಸ್ಫೋಟಕ' ವಿಷಯದ ಮೇಲೆ ಬರೆಯುವಾಗ ತಮ್ಮ ಎಂದಿನ ನೇರವಂತಿಕೆ, ಹಾಗೂ ಧೈರ್ಯಗಳನ್ನು ಮೆರೆದಿದ್ದಾರೆ.

1 ಕಾಮೆಂಟ್‌: