ಬುಧವಾರ, ಜೂನ್ 29, 2011

ಸ್ವಿಸ್ ಹಣ ವಾಪಸ್ ಬರುತ್ತಾ?


ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣವನ್ನು ನಿಜವಾಗಿಯೂ ವಾಪಸ್ಸು ತರುವುದು ಸಾಧ್ಯವೆ?

ಈ ಪ್ರಶ್ನೆಗೆ ಸರಳ ಉತ್ತರವಿಲ್ಲ. ಬರೀ ಸ್ವಿಸ್ ಬ್ಯಾಂಕುಗಳಲ್ಲಿ ಮಾತ್ರವೇ ಕಪ್ಪು ಹಣವಿದೆ ಎಂದಲ್ಲ. ಐಎಮ್ಎಫ್. ಓಇಸಿಡಿ ಮತ್ತಿತರ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಜಗತ್ತಿನಲ್ಲಿ 70ಕ್ಕೂ ಹೆಚ್ಚು ಸ್ಥಳಗಳನ್ನು `ಆಫ್ಶೋರ್ ಫೈನಾಶಿಯಲ್ ಸೆಂಟರ್ಸ್' ಎಂದು ಮಾನ್ಯ ಮಾಡಿವೆ. ಅವುಗಳನ್ನು ಆಡುಭಾಷೆಯಲ್ಲಿ `ಟ್ಯಾಕ್ಸ್ ಹೆವೆನ್ಸ್' ಎನ್ನಲಾಗುತ್ತದೆ. ಈ ಪೈಕಿ ಹಲವೆಡೆ ಸ್ವಿಸ್ ಬ್ಯಾಂಕುಗಳಿಗಿಂತಲೂ ಹೆಚ್ಚು ರಹಸ್ಯ ಕಾಪಾಡಲಾಗುತ್ತದೆ.

ಆದರೆ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಸ್ವಿಸ್  ಸರಕಾರ ತನ್ನ ಬ್ಯಾಂಕಿಂಗ್ ರಹಸ್ಯಗಳನ್ನು ತಕ್ಕಮಟ್ಟಿಗೆ ಹಂಚಿಕೊಳ್ಳುವ ದಿನ ದೂರವಿಲ್ಲ. 2006ರಲ್ಲೇ ಸ್ವಿಸ್ ಸರಕಾರ ತನ್ನ ಖಾತೆದಾರರ ವಿವರ ನೀಡುವ ಪ್ರಕಿಯೆಗೆ ಚಾಲನೆ ನೀಡಿದೆ. ಕಳೆದ ವಾರವಷ್ಟೇ ತನ್ನ ಬ್ಯಾಂಕಿಂಗ್ ಕಾನೂನಿನಲ್ಲಿ ಅದು ತಿದ್ದುಪಡಿ ಮಾಡಿದೆ. ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಬಂಧಿಸಿದ ದೇಶಗಳ ಸರಕಾರಗಳಿಗೆ ನೀಡುವ ಪ್ರಕ್ರಿಯೆಯ ಸರಳೀಕರಣ ಇದೀಗ ಆರಂಭವಾಗಿದೆ.

ಆದರೆ 2006ರಿಂದಲೇ ಅನೇಕರು ತಮ್ಮ ಸ್ವಿಸ್ ಖಾತೆಗಳನ್ನು ಇತರ ಟ್ಯಾಕ್ಸ್ ಹೆವೆನ್ಗಳಿಗೆ ವರ್ಗಾಯಿಸಲು ಆರಂಭಿಸಿದ್ದಾರೆ. ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್ಎನ್ಬಿ) ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಜನವರಿ 2008 ಹಾಗೂ ನವೆಂಬರ್ 2009ರ ನಡುವೆ ಸ್ವಿಸ್ ಖಾತೆಗಳ ಸಂಖ್ಯೆ ಶೇಕಡ 28.1ರಷ್ಟು ಕುಸಿದಿದೆ. ಕೆಲದಿನಗಳ ಹಿಂದಷ್ಟೇ (ಉಪವಾಸನಿರತ ಬಾಬಾ ರಾಮ್ದೇವ್ ಇನ್ನೂ ಆಸ್ಪತ್ರೆಯಲ್ಲಿದ್ದಾಗಲೇ) ಭಾರತದ ಅತಿಪ್ರಮುಖ ರಾಜಕಾರಣಿಯೊಬ್ಬರು ಸ್ವಿಸ್ ಪ್ರವಾಸ ಮಾಡಿದ್ದರೆಂಬ ವರದಿಗಳೂ ಇವೆ.

2006ರಲ್ಲಿ ಸ್ವತಃ `ಸ್ವಿಸ್ ಬ್ಯಾಂಕಿಂಗ್ ಅಸೋಸಿಯೇಷನ್' ಸಿದ್ಧಪಡಿಸಿದ್ದ ಅಧಿಕೃತ ವರದಿಯ ಪ್ರಕಾರ, ಸ್ವಿಸ್ ಬ್ಯಾಂಕುಗಳಲ್ಲಿ ಅತಿ ಹೆಚ್ಚು ಹಣ ಇಟ್ಟಿರುವವರು ಭಾರತೀಯ ನಾಗರಿಕತ್ವವನ್ನು ಹೊಂದಿರುವವರು. ಒಟ್ಟು 2512 ಶತಕೋಟಿ ಡಾಲರ್ ಡಿಪಾಸಿಟ್ ಹಣದಲ್ಲಿ ಭಾರತೀಯರ ಪಾಲು 1456 ಶತಕೋಟಿ ಡಾಲರ್. ಅತಿಹೆಚ್ಚು ಡಿಪಾಸಿಟ್ ಮಾಡಿರುವ ಮೊದಲ ಐದು ಸ್ಥಾನಗಳಲ್ಲಿ ಎರಡನೆಯದು ರಷ್ಯಾ. ರಷ್ಯನ್ ನಾಗರಿಕರ ಪಾಲು 470 ಶತಕೋಟಿ ಡಾಲರ್. ಯುನೈಟೆಡ್ ಕಿಂಗ್ಡಂ ನಾಗರಿಕರದು 390 ಶತಕೋಟಿ. ಉಕ್ರೇನ್ 100 ಶತಕೋಟಿ. ಕಮ್ಯುನಿಸ್ಟ್ ಚೀನಾದ ಕೊಳ್ಳೆಗಾರರದು 96 ಶತಕೋಟಿ ಡಾಲರ್. ಇದು ಒಂದು ಅಂಕಿಅಂಶ.

`ಗ್ಲೋಬಲ್ ಫೈನಾನ್ಶಿಯಲ್ ಇಂಟಿಗ್ರಿಟಿ' ನವೆಂಬರ್ 2010ರಲ್ಲಿ ಬಿಡುಗಡೆ ಮಾಡಿರುವ ಅಧ್ಯಯನ ವರದಿಯ ಪ್ರಕಾರ, ಭಾರತದಿಂದ ಈಚೆಗೆ ಹೊರ ಸಾಗಿಸಿರುವ ಕಳ್ಳದುಡ್ಡಿನ ಮೊತ್ತ 462 ಶತಕೋಟಿ ಡಾಲರ್.

ಕ್ಯಾರಿಬಿಯನ್ ಸಮುದ್ರದಲ್ಲಿರುವ ಕೇಮನ್ ಐಲ್ಯಾಂಡ್ಸ್ ಕುಪ್ರಸಿದ್ಧ ಟ್ಯಾಕ್ಸ್ ಹೆವೆನ್. ಅಲ್ಲಿನ ಜೂಲಿಯಸ್ ಬಾಯೆರ್ ಎಂಬ ಖಾಸಗಿ ಸ್ವಿಸ್ ಬ್ಯಾಂಕಿನ ಮುಖ್ಯಸ್ಥನಾಗಿದ್ದ ರೂಡೋಲ್ಫ್ ಎಲ್ಮರ್ ಅನೇಕ ರಹಸ್ಯ ಖಾತೆಗಳ ವಿವರಗಳನ್ನು ಸಿಡಿ ಮಾಡಿಸಿ ಇಟ್ಟುಕೊಂಡಿದ್ದಾನೆ. 2002ರಲ್ಲಿ ಆತನನ್ನು ಬ್ಯಾಂಕು ಕೆಲಸದಿಂದ ತೆಗೆದುಹಾಕಿತ್ತು. ಈಚೆಗೆ, ಅಂದರೆ, ಜನವರಿ 2011ರಲ್ಲಿ ಆತ ವಿಕಿಲೀಕ್ಸ್ ಮುಖ್ಯಸ್ಥ ಜೂಲಿಯನ್ ಅಸ್ಸೆಂಜ್ ಗೆ ಎರಡು ಡಿಸ್ಕ್ ಮಾಹಿತಿಯನ್ನು ಬಹಿರಂಗವಾಗಿ (ಲಂಡನ್ನಿನಲ್ಲಿ ಮಾಧ್ಯಮಗೋಷ್ಠಿಯನ್ನು ಕರೆದು, ಎಲ್ಲರೆದುರು) ನೀಡಿದ್ದಾನೆ. ಆ ಸಿಡಿಗಳಲ್ಲಿ ವಿವಿಧ ದೇಶಗಳ ಸರಕಾರಗಳ ಆಡಳಿತಗಾರರು, ಸರ್ವಾಧಿಕಾರಿಗಳು, ಭ್ರಷ್ಟ ರಾಜಕಾರಣಿಗಳು, ಅಪ್ರಾಮಾಣಿಕ ಉದ್ಯಮಿಗಳು, ಸಂಘಟಿತ ಭೂಗತ ಮಾಫಿಯಾ, ಡ್ರಗ್ಸ್ ಮಾಫಿಯಾ, ಭಯೋತ್ಪಾದಕ ಸಂಘಟನೆಗಳು - ಹೀಗೆ ಸುಮಾರು 2000 ರಹಸ್ಯ ಖಾತೆದಾರರ ವಿವರಗಳಿವೆ ಎನ್ನಲಾಗಿದೆ.
ಅದನ್ನು ಜೂಲಿಯನ್ ಅಸ್ಸೆಂಜ್ ಯಾವಾಗ ಬಹಿರಂಗ ಮಾಡುತ್ತಾನೋ ಗೊತ್ತಿಲ್ಲ. ಭಾರತದ ಸುಪ್ರೀಂ ಕೋರ್ಟ್ ಸಹ ಕಪ್ಪುಹಣದ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಪ್ರಾಮಾಣಿಕತೆಗೆ ಹೆಸರಾಗಿರುವ ಮುಖ್ಯ ನ್ಯಾಯಾಧೀಶರಾದ ಎಸ್. ಎಚ್. ಕಪಾಡಿಯಾ ಸೇವೆಯಲ್ಲಿ ಇರುವವರೆಗೆ ಪರವಾಗಿಲ್ಲ. ಆದರೆ ನಿವೃತ್ತರಾದ ನಂತರ ಹೇಗೋ ಗೊತ್ತಿಲ್ಲ.

ಸರಕಾರದ ಆಡಳಿತಗಾರರ, ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಖಾಸಗಿ ಉದ್ಯಮಗಾರರ ತೆರಿಗೆಗಳ್ಳತನ ಇವೆಲ್ಲ ಗುರುತರವಾದ ಅರ್ಥಿಕ ಅಪರಾಧಗಳು. ಭಯೋತ್ಪಾದಕರ, ಮಾಫಿಯಾದವರ ಹಣವೂ ಇರುವುದರಿಂದ ಇದು ರಾಷ್ಟ್ರೀಯ ಸುರಕ್ಷೆಯ ವಿಷಯವೂ ಹೌದು. ಆದರೆ ಸರಕಾರ ಈ ವಿಷಯದಲ್ಲಿ ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಬಂಧಿತ ಮನಿ ಲಾಂಡರರ್ ಹಸನ್ ಅಲಿಯಿಂದ ಬಾಯಿ ಬಿಡಿಸುವ ವಿಷಯದಲ್ಲೂ ಜಾಣ ಕುರುಡನ್ನು, ಜಾಣ ಕಿವುಡನ್ನು ಪ್ರದರ್ಶಿಸಲಾಗುತ್ತಿದೆ. `ದೇಶದ ಭದ್ರತೆ, ಐಕ್ಯತೆ ಹಾಗೂ ಆರ್ಥಿಕತೆಗೆ ನೇರವಾಗಿ ಸವಾಲು ಒಡ್ಡಿರುವ ಸಂಗತಿ ಇದು' ಎಂದು ಸುಪ್ರೀಮ್ ಕೋರ್ಟ್ ನೇಮಿಸಿದ್ದ ಸೋಲಿ ಸೋರಾಬ್ಜಿ ಸಮಿತಿ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದ್ದರೂ ಸರಕಾರದ ಮಟ್ಟದಲ್ಲಿ ಹಿಂಜರಿಕೆಯೇ ಪ್ರಧಾನವಾಗಿ ಕಾಣುತ್ತಿದೆ.

ಆದರೆ ಪಶ್ವಿಮದ ದೇಶಗಳು (ಉದಾ: ಅಮೆರಿಕ, ಜರ್ಮನಿ) ಕಪ್ಪು ಹಣದ ವಿಷಯವನ್ನು, ಕಪ್ಪು ಆರ್ಥಿಕತೆಯ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಿವೆ. ಅಮೆರಿಕದಲ್ಲಿ ಅನೇಕ ಜನರನ್ನು ಬಂದಿಸಲಾಗಿದೆ.

ನಮ್ಮಲ್ಲಿ, ಅಣ್ಣಾ ಹಜಾರೆ ಹಿಂದೆ ಯಾರಿದ್ದಾರೆ? ಬಾಬಾ ರಾಮ್ದೇವ್ ಏನು ಸತ್ಯ ಹರಿಶ್ಚಂದ್ರನೆ? - ಹೀಗೆಲ್ಲ ವಿಷಯಾಂತರಗಳು ನಡೆಯುತ್ತವೆ. ಇದು ಫಲಾನುಭವಿ ರಾಜಕಾರಣಿಗಳ ಕುಟಿಲ ತಂತ್ರ. ಇದನ್ನು ನಮ್ಮ ಸಾರ್ವಜನಿಕ ಅಭಿಪ್ರಾಯ ರೂಪಿಸುವವರು ಗಮನಿಸಬೇಕು.

ಯಾವುದೇ ಚಳವಳಿ ಬೃಹತ್ ರೂಪ ಪಡೆದುಕೊಂಡಾಗ ಚಳವಳಿಗಾರರ ಮೇಲೂ ಗಮನ ಹೋಗುವುದು ಸಹಜ. ಆದರೆ ಯಾವುದರ ವಿರುದ್ಧ ಜನರು ಸಂಘಟಿತರಾಗಿ ಹೋರಾಡುತ್ತಿದ್ದಾರೋ ಆ ವಿಷಯದ ಮೇಲೆ ಮಾಧ್ಯಮದವರು ಹೆಚ್ಚಾಗಿ ಬೆಳಕು ಚೆಲ್ಲಬೇಕು. ಆರೋಗ್ಯಕರ ಚರ್ಚೆಯಾಗುವ ಹಾಗೆ ನೋಡಿಕೊಳ್ಳಬೇಕು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನರ ಹಿನ್ನೆಲೆಯನ್ನು ಬಲ್ಲವರಾರು? ಕೆಲವು ಚಳವಳಿಗಾರರು ತಪ್ಪು ಮಾಡಿದ್ದರೆ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಅಡ್ಡಿಯೇನಿದೆ?

ಪ್ರತಿಭಟನೆಯ ಮೂಲ ವಿಷಯಕ್ಕಿಂತಲೂ ಚಳವಳಿಗಾರರ ವೈಯಕ್ತಿಕ ಶುದ್ಧಿ, ಅಶುದ್ಧಿ ಇತ್ಯಾದಿಗಳ ಚರ್ಚೆಯೇ ಹೆಚ್ಚಾಗಿ ವಿಜೃಂಭಿಸುತ್ತ ಹೋದರೆ ಮೂಲ ವಿಷಯವೇ ಕೈಬಿಟ್ಟುಹೋಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ