ಬುಧವಾರ, ನವೆಂಬರ್ 09, 2011

ಮುಂದಿನ ಪ್ರಧಾನಿ ಯಾರು?

ಭ್ರಷ್ಟಾಚಾರ ಕಳಂಕಿತ ಆಡಳಿತದ ಉಸ್ತುವಾರಿ ವಹಿಸಿರುವ, ನಾಯಕತ್ವದ ಗುಣವನ್ನು ಪ್ರದರ್ಶಿಸದ, ಪ್ರಸ್ತುತ ಪ್ರಧಾನಿ ಮನಮೋಹನ್ ಸಿಂಗ್ ದಿನದಿಂದ ದಿನಕ್ಕೆ ಅಪ್ರಸ್ತುತರಾಗುತ್ತಿದ್ದಾರೆ. ಅನೇಕ ವಿದೇಶಿ ಆಡಳಿತಗಳು ಹಾಗೂ ಮಾಧ್ಯಮಗಳು ಈಗಾಗಲೇ ಪ್ರಸ್ತುತ ಆಡಳಿತವನ್ನು ಕಡೆಗಣಿಸಿ, 2014ರ ಲೋಕಸಭಾ ಚುನಾವಣೆಯ ಬಗ್ಗೆ ಹೆಚ್ಚಾಗಿ ಗಮನ ಕೇಂದ್ರೀಕರಿಸತೊಡಗಿವೆ. ಮನಮೋಹನ್ ಸಿಂಗರ ಅಸಾಮರ್ಥ್ಯ ಢಾಳಾಗಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರಧಾನಿಯ ಬಗ್ಗೆ ಚರ್ಚೆಗಳು ಭಾರತದಲ್ಲೂ ಆರಂಭವಾಗಿವೆ.

ಈ ದಿಶೆಯಲ್ಲಿ ಮುಂಚೂಣಿಯಲ್ಲಿರುವುದು ಮೂರು ಹೆಸರುಗಳು: ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ, ಎಐಸಿಸಿ (ಕಾಂಗ್ರಸ್) ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್.

ಮೊದಲಿಗೆ, ಸೋನಿಯಾ ಗಾಂಧಿ ಪರಿವಾರದ ಏಕಸ್ವಾಮ್ಯ ಹೊಂದಿರುವ ಕಾಂಗ್ರೆಸ್ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರೆ, ನಂತರ ರಾಹುಲ್ ಗಾಂಧಿ ಬಯಸಿದರೆ, ಅವರು ಪ್ರಧಾನಿಯಾಗಬಹುದು. ಆದರೆ ಆ ಸ್ಥಾನಕ್ಕೆ ತಕ್ಕ ಅರ್ಹತೆ ಅವರಲ್ಲಿ ಎಷ್ಟಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಪ್ರಧಾನಿಯಾಗುವ ಅರ್ಹತೆಯುಳ್ಳ ಹಲವಾರು ಮುಖಂಡರು (ಉದಾ: ಪ್ರಣಬ್ ಮುಖರ್ಜಿ) ಕಾಂಗ್ರೆಸ್ಸಿನಲ್ಲಿ ಇದ್ದರೂ ರಾಹುಲ್-ಸೋನಿಯಾ ಇರಾದೆಯೇ ಅಂತಿಮವಾಗುತ್ತದೆ. ಯಾವ ಕಾಂಗ್ರಸ್ಸಿಗರೂ ಅದನ್ನು ಪ್ರಶ್ನಿಸುವ ಸ್ಥಿತಿಯಲ್ಲಿಲ್ಲ.

ಈ ಮಧ್ಯೆ, `ರಾಹುಲ್ ಪ್ರಧಾನಿಯಾಗಲು ಸಿದ್ಧರಾಗುತ್ತಿದ್ದಾರೆ' ಎಂದು ಅವರ ಹೊಗಳುಭಟ್ಟರು ಹೇಳಿಕೆಗಳನ್ನು ನೀಡಿಕೊಂಡು ತಿರುಗಾಡುತ್ತಿದ್ದಾರೆ. ಬೋರ್ಡ್ ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಾಗುವ ಹಾಗೆ ಪ್ರಧಾನಿ ಸ್ಥಾನಕ್ಕೆ `ಟ್ಯೂಷನ್' ಕೊಡಿಸಿ ಸಿದ್ಧಪಡಿಸಬಹುದು ಎಂಬುದೇ ವಿಚಿತ್ರ, ಬಾಲಿಶ ಕಲ್ಪನೆ. ಬೌದ್ಧಿಕ ಸಾಮಥ್ರ್ಯ, ಆಡಳಿತಾತ್ಮಕ ಅನುಭವ, ಸಂವಹನ ಕೌಶಲ್ಯ, ರಾಜನೀತಿ, ರಾಜತಂತ್ರ, ನಾಯಕತ್ವದ ಗುಣಗಳು, ಆಡಳಿತ ಕೌಶಲ್ಯ - ಇವೆಲ್ಲ ಮನೆಪಾಠದ ಮೂಲಕ ಕಲಿಯುವ ವಿಷಯಗಳಲ್ಲ. ಅನುಭವದ ಮೂಸೆಯಲ್ಲಿ ಪಳಗಿದ ಅನೇಕರ ಪೈಕಿ ಯಾರೋ ಒಬ್ಬಿಬ್ಬರು ಯಶಸ್ವಿಯಾಗುತ್ತಾರೆ ಅಷ್ಟೇ. ಹೀಗಿರುವಾಗ ಮಧ್ಯಮಹಂತದಿಂದ ಆರಂಭಿಸಿ ಯೋಗ್ಯತೆಯ ಅನುಸಾರ ಮೇಲೇರುವುದೇ ಸರಿಯಾದ ಕ್ರಮ.
ವಿತ್ತಮಂತ್ರಿಯಾಗಿ ಪಿ. ವಿ. ನರಸಿಂಹರಾವ್ ಹೇಳಿದಷ್ಟು ಮಾಡಿಕೊಂಡಿದ್ದ ಮನಮೋಹನ್ ಸಿಂಗರೇ  ಈಗ ಸೋನಿಯಾ ಹೇಳಿದಷ್ಟು ಮಾಡಿಕೊಂಡಿರುವ ಪ್ರಧಾನಿ ಎನಿಸಿಕೊಂಡಿರುವ ಉದಾಹರಣೆ ಇದೆ. ಹೀಗಿರುವಾಗ ಮನೆಪಾಠದವರಿಂದ ಏನು ಪ್ರಯೋಜನವಾಗುತ್ತದೆ? ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶಗಳು ಎಷ್ಟು ಎಂಬುದೂ ಇಲ್ಲಿ ಗಮನಾರ್ಹ.

ಇನ್ನು ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್. ಇಬ್ಬರೂ `ಯಶಸ್ವಿ' ಮುಖ್ಯಮಂತ್ರಿಗಳು ಎನಿಸಿಕೊಂಡಿದ್ದಾರೆ.  ಪ್ರಧಾನಿ ಸ್ಥಾನಕ್ಕೆ ಹಲವು ವಿಧಗಳಲ್ಲಿ ಅರ್ಹರು ಎನಸಿದ್ದಾರೆ. ಆದರೆ ಅವರು ಆ ಸ್ಥಾನ ಹಿಡಿಯುವ ಸಂಭಾವ್ಯತೆ ಎಷ್ಟಿದೆ ಎಂಬುದು ಗಮನಾರ್ಹ. NDA ಅಧಿಕಾರಕ್ಕೆ ಬಂದರೆ ಬಿಜೆಪಿ ಪ್ರಧಾನಿ ಸ್ಥಾನವನ್ನು ಕಿರಿಯ ಪಕ್ಷವಾದ ಜೆಡಿಯುಗೆ ಬಿಟ್ಟುಕೊಡುವ ಸಂಭವ ಇಲ್ಲ. ಹೀಗಾಗಿ ನಿತೀಶ್ ಗೆ  ಅವಕಾಶಗಳು ಕಡಮೆ. ಅವರು ಕಾಂಗ್ರೆಸ್ ಮೈತ್ರಿಕೂಟಕ್ಕೆ ಹೋದರೂ ಪ್ರಯೋಜನವಿಲ್ಲ. ಅದು ರಾಹುಲಮಯ. ತೃತೀಯ ರಂಗವಂತೂ ಹಲವಾರು ಪ್ರಧಾನಿ ಸ್ಥಾನದ ಆಕಾಂಕ್ಷಿಗಳಿಂದ ತುಂಬಿಹೋಗಿದೆ.  ಮಾಯಾವತಿ, ಮುಲಾಯಂ ಸಿಂಗ್, ಲಾಲೂ ಯಾದವ್, ದೇವೇಗೌಡ, ಎಡ ನಾಯಕರು - ಹೀಗೆ. ಅಲ್ಲದೇ, ಬರೀ ತೃತೀಯ ಶಕ್ತಿಗಳೇ ಸೇರಿ ಅಧಿಕಾರ ನಡೆಸಬೇಕಾದರೆ ಕಾಂಗ್ರೆಸ್ಸಿನ ಬೆಂಬಲ ಖಂಡಿತ ಬೇಕಾಗುತ್ತದೆ. ಅದರ ಸಂಭವನೀಯತೆ ಈಗಲೇ ತಿಳಿಯುವಂತಹುದಲ್ಲ.

ಪ್ರಧಾನಿ ಸ್ಥಾನಕ್ಕೆ ಯಶಸ್ವಿ ಮುಖ್ಯಮಂತ್ರಿಗಳ ಹೆಸರನ್ನು ಬಿಂಬಿಸುವುದು ಸಾಮಾನ್ಯ ಕ್ರಮ. ಹಿಂದೆ ರಾಮಕೃಷ್ಣ ಹೆಗಡೆ, ಚಂದ್ರಬಾಬು ನಾಯ್ಡು ಈ ರೀತಿ ಬಿಂಬಿತರಾಗಿದ್ದರು. ಒಂದು ಹಂತದಲ್ಲಿ ಎನ್. ಟಿ. ರಾಮರಾವ್ ಹಾಗೂ ಜಯಲಲಿತಾರನ್ನೂ ಬಿಂಬಿಸಲಾಗಿತ್ತು. ಆದರೆ ಅವರ್ಯಾರಿಗೂ ಅಗ್ರಪೀಠ ದಕ್ಕಲಿಲ್ಲ.

ಬಿಜೆಪಿ ಹಾಗೂ ಎನ್ಡಿಎ ಒಂದುವೇಳೆ ಚುನಾವಣೆಯಲ್ಲಿ ಗೆದ್ದರೆ, ಬಿಜೆಪಿಯ ಉಳಿದ ಮುಖಂಡರು ಹಾಗೂ ಎನ್ಡಿಎ ಮುಖಂಡರು ಒಪ್ಪಿದರೆ, ನರೇಂದ್ರ ಮೋದಿಗೆ ಅದೃಷ್ಟ ಒಲಿಯುತ್ತದೆ. ಇದೂ ಸುಲಭದ ಮಾತಲ್ಲ. ಕೇಂದ್ರದಲ್ಲಿ ಅಭಿವೃದ್ಧಿ ಮಂತ್ರದ `ಮೋದಿ ಎಫೆಕ್ಟ್' ಆಗಿಬಿಟ್ಟರೆ ತಮಗೆ ಗದ್ದುಗೆ ಬಹಳ ದೂರವಾಗಿಬಿಡುತ್ತದೆ ಎಂಬ ಒಳಭಯ ಎಲ್ಲ ಮುಖಂಡರಲ್ಲೂ ಇದೆ. ಎನ್ಡಿಎ ಒಳಗಿದ್ದುಕೊಂಡೇ ನಿತೀಶ್ ಕುಮಾರ್ ಮತ್ತು ಇತರರು ಮೋದಿಯ ಅವಕಾಶವನ್ನು ತಗ್ಗಿಸಬಹುದು.

ಹೀಗಾಗಿ 2014ರ ಚುನಾವಣೆ ತುಂಬ ಕುತೂಹಲಕಾರಿಯಾಗಿರುತ್ತದೆ ಎಂದಷ್ಟೇ ಈ ಹಂತದಲ್ಲಿ ಹೇಳಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ