ಬುಧವಾರ, ನವೆಂಬರ್ 09, 2011

ಮುನ್ನೂರು ರಾಮಾಯಣಗಳ ತಕರಾರು: ಅಧ್ಯಯನ ಇರಲಿ, ವೈಚಾರಿಕ ದೀಕ್ಷೆ ಬೇಡ

ದೆಹಲಿ ವಿಶ್ವವಿದ್ಯಾಲಯದ ಅಕ್ಯಾಡೆಮಿಕ್ ಕೌಂಸಿಲ್  ಎ. ಕೆ. ರಾಮಾನುಜಂರ `ತ್ರೀ ಹಂಡ್ರೆಡ್ ರಾಮಾಯಣಾಸ್' ಪ್ರಬಂಧವನ್ನು ತಿರಸ್ಕರಿಸಿದ್ದು, ಅಕ್ಯಾಡೆಮಿಕ್ ವಲಯಗಳಲ್ಲಿ ಹೊಸ ರಣಕಹಳೆ ಮೊಳಗುವಂತೆ ಮಾಡಿದೆ. ಎಡ ಚಿಂತಕರು ಪ್ರಬಂಧದ ಪರವಾಗಿ ಸಹಿಸಂಗ್ರಹ ಅಭಿಯಾನ, ಸೆಮಿನಾರುಗಳು, ಸರದಿಯ ಮೇಲೆ ಮಾಧ್ಯಮ ಬರವಣಿಗೆ, ಹೇಳಿಕೆ ನೀಡಿಕೆ - ಇತ್ಯಾದಿಗಳನ್ನು ಜೋರಾಗಿ ಆಯೋಜಿಸುತ್ತಿದ್ದಾರೆ.

ಸುಮಾರು 30 ಪುಟಗಳ ಈ ಪ್ರಬಂಧವನ್ನು ನಾನು ಓದಿದ್ದೇನೆ. ವಿವಿಧ ಕವಿಗಳು, ವಿವಿಧ ದೇಶೀಯರು, ಮತೀಯರು, ತಂಬೂರೀ ದಾಸರು ವಾಲ್ಮೀಕಿಯ ರಾಮಾಯಣವನ್ನು ತಮ್ಮ ಕಲ್ಪನೆಯ ಅನುಸಾರ ಬದಲಿಸಿರುವುದು ನಿಜ. ಅದು ಸಾವಿರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಉತ್ತರ ಭಾರತದ ಕೆಲವು ಕಡೆಗಳಲ್ಲಿ ವಾಲ್ಮೀಕಿಯ ರಾಮಾಯಣಕ್ಕಿಂತಲೂ ತುಲಸೀದಾಸರ `ರಾಮಚರಿತಮಾನಸ'ವೇ ಹೆಚ್ಚು ಜನಪ್ರಿಯ. ಹಾಗೆಯೇ ತಮಿಳಿನ ಕಂಬ ರಾಮಾಯಣ ಇತ್ಯಾದಿ. ಈ ರಾಮಾಯಣ ಸಾಹಿತ್ಯಗಳು ರಾಮಾಯಣದ ಕೀರ್ತಿ, ಪ್ರಸಿದ್ಧಿ, ಪ್ರಭಾವಗಳ ದ್ಯೋತಕ. ಇವು ರಾಮಾನುಜಂ ಅವರ ಸ್ವಂತ ಸೃಷ್ಟಿಯಲ್ಲ. ಯಾರು ಓದಲಿ, ಬಿಡಲಿ, ಅವುಗಳು ಅಸ್ತಿತ್ವದಲ್ಲಿ ಇರುವುದಂತೂ ನಿಜ. ಅವುಗಳನ್ನು ರಾಮಾನುಜಂ ವ್ಯಾಖ್ಯಾನಿಸಿದ್ದಾರೆ. ಅದನ್ನು ಓದುವುದಿಲ್ಲ ಎನ್ನುವುದು ಅಧ್ಯಯನಶೀಲತೆಯಲ್ಲ.

ನಿಜ, ಹಿಂದು ಸಂಸ್ಕೃತಿ ಯಾವುದೇ ಒಂದು ಗ್ರಂಥವನ್ನು ಆಧರಿಸಿಲ್ಲ. ಅದರಲ್ಲೂ ರಾಮಾಯಣ, ಮಹಾಭಾರತಗಳು ಇತಿಹಾಸ ಗ್ರಂಥಗಳೆಂದು ಮಾನ್ಯವಾಗಿದ್ದರೂ ಅವು `ಗಾಸ್ಪೆಲ್'ಗಳ ತರಹ ಅಲ್ಲ. ಥಾಯ್ ರಾಮಾಯಣದಿಂದ ಕುವೆಂಪು ತನಕ ಎಲ್ಲ ರಾಮಾಯಣಗಳಿಗೂ ವಾಲ್ಮೀಕಿಯ ರಾಮಾಯಣ ಹಳೆಯದು, ಹಾಗೂ ಮೂಲವಾದದ್ದು. ಇದನ್ನು ಮರೆಯಬಾರದು. ಮೂಲ ಲೇಖಕರ ಹಕ್ಕನ್ನು ಮರೆಯಬರದು. ವಾಲ್ಮಿಕಿಯ ಬಗ್ಗೆ ತಕ್ಕಮಟ್ಟಿಗೆ ಒಪ್ಪಿಕೊಂಡೇ ರಾಮಾನುಜಂ ಬರೆದಿದ್ದಾರೆ. ಆದರೆ ತಮ್ಮ  ವಾದದಲ್ಲಿ ದೃಢವಾಗಿ ಒಪ್ಪಿಲ್ಲ.

`ಗಾಸ್ಪೆಲ್ ಟ್ರೂತ್' ಎಂಬ ಪರಿಕಲ್ಪನೆ ಭಾರತದ್ದಲ್ಲ. ಗಾಸ್ಪೆಲ್ ಟ್ರೂತ್ ಎನ್ನುವವರಲ್ಲೂ ಹಲವು, ಪರಸ್ಪರ ವೈರುಧ್ಯವುಳ್ಳ ಗಾಸ್ಪೆಲ್ಗಳಿವೆ. ಕೆಲವನ್ನು ಹತ್ತಿಕ್ಕಲಾಗಿದೆ. ಕೆಲವನ್ನು ಮಾತ್ರ ಸ್ವೀಕರಿಸಲಾಗಿದೆ. ಬೈಬಲ್ಲಿನ ಹೊಸ ಒಡಂಬಡಿಕೆಯಲ್ಲಿ  ಕೇವಲ ನಾಲ್ಕನ್ನು ಮಾತ್ರ ಒಪ್ಪಲಾಗಿದೆ (ಮಾರ್ಕ್, ಲ್ಯೂಕ್, ಡೇವಿಡ್, ಜಾನ್ - ಈ ನಾಲ್ಕರಲ್ಲೂ ಪರಸ್ಪರ ವಿರುದ್ಧಾರ್ಥಕ ಕಥನಗಳಿವೆ). ಬೈಬಲ್ಲಿನಲ್ಲಿ ಸೇರಲ್ಪಡದ ಅನೇಕ ಗಾಸ್ಪೆಲ್ಗಳಿವೆ. ಇವುಗಳ ಬಗ್ಗೆಯೂ ತಿಳಿವು ಅಗತ್ಯ. ಆಗ ನಿಜವಾದ ಅಧ್ಯಯನಶೀಲತೆಯಾಗುತ್ತದೆ.

ಆದರೆ ಇಲ್ಲಿ ಸಮಸ್ಯೆಯಿರುವುದು ನಮ್ಮ `ಪ್ರಗತಿಪರರು' (ಹಾಗೆಂದರೇನು ಎಂಬುದು ನನಗೆ ಇನ್ನೂ ಗೊತ್ತಿಲ್ಲ!) ತಳೆಯುವ ಸೆಲೆಕ್ಟಿವ್ ಧೋರಣೆಯಲ್ಲಿ. ಎ. ಕೆ. ರಾಮಾಜುಂ ಅವರ ಈ ಪ್ರಬಂಧವನ್ನು ಮುಂದಿಟ್ಟುಕೊಂಡು ಮಾರ್ಕ್ಸ್, ಮಾವೋ ಸಿದ್ಧಾಂತಗಳನ್ನು, ಈಗಿನ ತಮ್ಮ ರಣತಾಂತ್ರಿಕ ನಿಲುವುಗಳನ್ನು ಮಾತ್ರ ಪ್ರವರ್ಥಿಸುವುದು ಅನಪೇಕ್ಷಿತ. ಈ ಸೈದ್ಧಾಂತಿಕರು ನಾಸ್ಟಿಕ್ ಗಾಸ್ಪೆಲ್ಗಳ ಬಗ್ಗೆ ಕನಸಿನಲ್ಲೂ ಕನವರಿಸುವುದಿಲ್ಲ. ಡೆಡ್ ಸೀ ಸ್ಕ್ರಾಲ್ಗಳ ಬಗ್ಗೆ ಓದುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಿಲ್ಲ.

ಈಗ ಸಹಿ ಸಂಗ್ರಹ ಚಳವಳಿಗೆ ಧುಮುಕಿದವರ ಪೈಕಿ ಅನೇಕರು ಸಲ್ಮಾನ್ ರಷ್ದಿಯ `ಸಟಾನಿಕ್ ವರ್ಸಸ್' ನಿಷೇಧವನ್ನು ಬೆಂಬಲಿಸಿದವರು. ತಸ್ಲಿಮಾ ನಸ್ರೀನರ ಕೋಲ್ಕತಾ ಜೀವನವನ್ನು ಕಷ್ಟಮಯಗೊಳಿಸಿದವರು. ಅರುಣ್ ಶೌರಿ ಬೈಬಲ್ಲಿನ ಬಗ್ಗೆ ಮಂಡಿಸಿದ್ದ ವಿದ್ವತ್ಪೂರ್ಣ ಅಧ್ಯಯನವನ್ನು ಖಂಡಿಸಿದ ಕೆಲವರು ಈಗ ರಾಮಾನುಜಂ ಹಿಂದೆ ನಿಂತಿದ್ದಾರೆ. ಇದು ಅಧ್ಯಯನಶೀಲತೆಯ ಪರವಾದ ನಿಲುವೊ? ಅಥವಾ ಸೈದ್ಧಾಂತಿಕ ಆಗ್ರಹವೋ?

ಸೈದ್ಧಾಂತಿಕ ದೀಕ್ಷೆಯೇ ಶಿಕ್ಷಣವಲ್ಲ. ಇದು ಎಡ, ಬಲ, ಮಧ್ಯ - ಎಲ್ಲರಿಗೂ ಅನ್ವಯವಾಗುವ ಮಾತು. ವಿಶ್ವವಿದ್ಯಾಲಯಗಳನ್ನು, ಅಕ್ಯಾಡೆಮಿಗಳನ್ನು, ಕಮ್ಯೂನಿಸ್ಟ್ ಅಡ್ಡೆಗಳನ್ನಾಗಿ ಮಾಡಿಕೊಳ್ಳುವ ಕೆಲಸ ಬಹಳ ಹಿಂದೆಯೇ ಶುರುವಾಗಿರುವುದು ಗೊತ್ತೇ ಇದೆ. ತಾಲಿಬಾನ್ ದೇವ್ಬಂದ್ನಲ್ಲಿ ತಯಾರಾದ ಹಾಗೆ, ನೇಪಾಳದ ಮಾವೋ ಉಗ್ರರ ಹಿಂದಿನ ಸೈದ್ಧಾಂತಿಕ ರೂವಾರಿಗಳು ದೆಹಲಿಯ ಜವಹರ್ಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರೊಫೆಸರ್ಗಳು ಎಂಬುದು ಸರ್ವವಿದಿತ. ಕೆಲವು ಮಾವೋ ಮುಖಂಡರು ನೇರವಾಗಿ ಜೆಎನ್ಯು ಕ್ಯಾಂಪಸ್ಸಿನಲ್ಲೇ ತಯಾರಾದ ಉತ್ಪನ್ನಗಳು. ಎಡ ತೀವ್ರವಾದ, ಅಸಹನೆಗಳು ಹೆಚ್ಚಾದ ಪರಿಣಾಮವಾಗಿ ಈಗ ಬಲ ತೀವ್ರವಾದವೂ ಬೆಳೆದಿದೆ. ಸ್ವತಂತ್ರ ಅಧ್ಯಯನ, ಚಿಂತನೆಗಳಿಗೆ ಅವಕಾಶವೇ ಇಲ್ಲವಾಗುತ್ತಿದೆ. `ನಾನು ಹೇಳಿದಷ್ಟನ್ನು ಕಲಿತರೆ ಸಾಕು' ಎಂಬ ಧೋರಣೆ ಎರಡೂ ಕಡೆಗಳಲ್ಲಿ ಇದೆ. ಎರಡೂ ಕಡೆಯವರಿಗೆ ತಮ್ಮ ತಲೆ ಒಪ್ಪಿಸುವ ಯುವಕ, ಯುವತಿಯರು ಬೇಕು. ಈಗ ಬುದ್ಧಿವಂತರೆಲ್ಲ ಹ್ಯೂಮಾನಿಟೀಸ್ನತ್ತ ಬರದೇ ಇರುವುದು ಈ ಸೈದ್ಧಾಂತಿಕರಲ್ಲಿ ಭಾರಿ ನಿರಾಶೆ, ಹತಾಶೆ ಮೂಡಿಸಿದೆ.

`ದಿ ಕುರಾನಿಕ್ ಕಾಂಸೆಪ್ಟ್ ಆಫ್ ವಾರ್' ಎಂಬ ಪುಸ್ತಕವನ್ನು ಓದುವುದು ಪಾಕಿಸ್ತಾನದ ಸೈನಿಕ ಶಾಲೆಗಳಲ್ಲಿ ಕಡ್ಡಾಯವಾಗಿತ್ತು. ಜಿಯಾ ಉಲ್ ಹಕ್ ಬರೆಸಿದ್ದ ಈ ಪುಸ್ತಕದ ಲೇಖಕರು ಬ್ರಿಗೇಡಿಯರ್ ಎಸ್. ಕೆ. ಮಲಿಕ್ (ಅದನ್ನು ನಾನು ಓದಿದ್ದೇನೆ). ಈ ತರಹದ ವಿಚಾರಗಳನ್ನು ಆರಾಧಿಸಿದ್ದರ ಪರಿಣಾಮವಾಗಿಯೇ ಪಾಕ್ ಮಿಲಿಟರಿ ಜಿಹಾದಿ ಅಡ್ಡೆಯಾಯಿತು ಎಂಬುದನ್ನು ನಾವು ಮರೆಯಬಾರದು.

ಉನ್ನತ ಶಿಕ್ಷಣದಲ್ಲಿ ತಮಗೆ ಬೇಕಾದ ಪಠ್ಯಗಳನ್ನಿಟ್ಟು `ಇದನ್ನು ಕಡ್ಡಾಯವಾಗಿ ಓದಬೇಕು' ಎಂಬುದು ಬದಲಾಗಬೇಕು. ಇದರಿಂದ ತಮ್ಮ ಕಡೆಯವರ ಪಠ್ಯವೇ ಇರಲಿ, ಇತರರದು ಬೇಡ ಎಂಬ ರಾಜಕೀಯ ಕಡಮೆಯಾಗುತ್ತದೆ.
ವಿದ್ಯಾರ್ಥಿಗಳಲ್ಲಿ ಹಲವು ಬಗೆಯ ಗ್ರಂಥಗಳ ತೌಲನಿಕ ಅಧ್ಯಯನ ಬೆಳೆಯುವಂತೆ ಮಾಡಬೇಕು. ವಿಶ್ವವಿದ್ಯಾಲಯಗಳು ಮೂಲತಃ ಅಧ್ಯಯನ ಕೇಂದ್ರಗಳು. ವೈಚಾರಿಕ ದೀಕ್ಷಾ ಕೇಂದ್ರಗಳಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ