ಬುಧವಾರ, ನವೆಂಬರ್ 09, 2011

ಸೋಷಿಯಲ್ ನೆಟ್ವರ್ಕಿಂಗ್ ಯುಗ

ತಂತ್ರಜ್ಞಾನಗಳ ಬಳಕೆ ಹಲವಾರು ತೆರನಾಗಿ ಆಗುತ್ತದೆ. ಬಡತನ ನಿವಾರಣೆಯಲ್ಲಿ, ಉದ್ಯೋಗ ಸೃಷ್ಟಿಯಲ್ಲಿ ಈಗ ವಿಜ್ಞಾನ, ತಂತ್ರಜ್ಞಾನ ಬಳಕೆಯಾಗುತ್ತಿರುವುದು ಸ್ವಾಗತಾರ್ಹವಾದ ಬೆಳವಣಿಗೆ. ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಸಂಶೋಧನೆಗಳು, ಆ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯಾಗುತ್ತಿರುವ ರೀತಿ, ಇವೆಲ್ಲ ಅದ್ಭುತ ಬೆಳವಣಿಗೆಗಳು. ಈಗ ಗಾಂಧೀಜಿ ಬದುಕಿದ್ದರೆ ತಮ್ಮ `ಹಿಂದ್ ಸ್ವರಾಜ್' ಪುಸ್ತಕದ ಅನೇಕ ಅಭಿಪ್ರಾಯಗಳನ್ನು ಖಂಡಿತ ಬದಲಿಸಿಕೊಳ್ಳುತ್ತಿದ್ದರು.

1960ರ ದಶಕದ ನಂತರ ಮಾನವ ಸಂಬಂಧಗಳು, ಪರಸ್ಪರ ಸಂಪರ್ಕಗಳು ಕ್ಷೀಣವಾಗುತ್ತ ಸಾಗಿರುವುದು ವಾಸ್ತವ. ಈಗ ಕಾರ್ಯನಿಮಿತ್ತ ಎಲ್ಲಿಗಾದರೂ ಹೋಗಿ ಬಂಧು-ಮಿತ್ರರ ಮನೆಯಲ್ಲಿ ತಂಗುವುದು; ಅವರು ಇವರನ್ನು ಆಗ್ರಹಪೂರ್ವಕವಾಗಿ ಆಹ್ವಾನಿಸುವುದು; ಪೂರ್ವಸೂಚನೆ ಇಲ್ಲದೇ ಬಂದರೂ ನಗುನಗುತ್ತಾ ಸ್ವಾಗತಿಸುವುದು - ಇವೆಲ್ಲ ಬಹಳ ಕಡಮೆಯಾಗುತ್ತಿರುವುದು ಸರ್ವವಿದಿತ. ಆಧುನಿಕ ವೃತ್ತಿಗಳ ಸ್ವರೂಪ, ಮನುಷ್ಯ ಭಾವನೆಗಳ ವಿಕೃತಿ - ಹೀಗೆ ಹಲವಾರು ರೀತಿಯ ಕಾರಣಗಳನ್ನು ಇದಕ್ಕೆ ಕೊಡಲಾಗುತ್ತದೆ. ಒಟ್ಟಿನಲ್ಲಿ ಇದರಲ್ಲಿ ತಪ್ಪು, ಸರಿಯ ನಿರ್ಣಯ ಕ್ಲಿಷ್ಟವಾದದ್ದು.

ನಮಗೆ ತಿಳಿದೋ ಅಥವಾ ತಿಳಿಯದೆಯೋ ಇಂಟರ್ನೆಟ್, ಇ-ಮೇಲ್, ಸೋಷಿಯಲ್ ನೆಟ್ವರ್ಕಿಂಗ್  ಬಂದ ನಂತರ ಸಾಮಾಜಿಕ ನೆಲೆಯಲ್ಲಿ ಉತ್ತಮ ಬೆಳವಣಿಗೆಗಳಾಗಿವೆ. ಬಂಧು-ಮಿತ್ರರ ನಡುವೆ ನಿರಂತರ `ರಿಯಲ್ ಟೈಮ್' ಸಂಪರ್ಕದ ಸ್ಥಾಪನೆಯಾಗಿದೆ. ದೇಶ-ವಿದೇಶ ಎಂಬ ಭೌತಿಕ-ರಾಜಕೀಯ ಗಡಿಗಳು ಅಳಿಸಿಹೋಗಿವೆ. ಸಾಮಾನ್ಯವಾಗಿ ನೀವು ಭೇಟಿ ಮಾಡುವುದು ಸಾಧ್ಯವೇ ಇಲ್ಲದ ಗಣ್ಯಾತಿಗಣ್ಯರೂ ನಿಮ್ಮ `ಆನ್ಲೈನ್ ಕಾಂಟಾಕ್ಟ್' ಆಗಿರುತ್ತಾರೆ! ದೂರದಲ್ಲಿರುವ ಪರಿಚಿತರು ಪರಸ್ಪರ ಸಂವಹನ ನಡೆಸುವುದು ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಕ್ರಮೇಣ ಈ ಸಾಧ್ಯತೆಯು ಎಲ್ಲರ ಅರಿವಿಗೆ ಬರುತ್ತಿದ್ದಂತೆ ಫೇಸ್ಬುಕ್, ಟ್ವಿಟರ್, ಸ್ಕೈಪ್ ಮುಂತಾದ ಸಾಮಾಜಿಕ ಜಾಲಬಂಧದ ಸೇವೆಗಳು ಜನಪ್ರಿಯತೆಯ ಉತ್ತುಂಗಕ್ಕೆ ಏರಿದವು. ಆಬಾಲವೃದ್ಧರಾಗಿ ಎಲ್ಲರೂ ಅವುಗಳಿಗೆ ಮುಗಿಬಿದ್ದರು. ಅಗ್ಗವಾದ ಸ್ಮಾರ್ಟ್ ಫೋನ್  ಹಾಗೂ ಟ್ಯಾಬ್ಲೆಟ್ಗಳು ಈ ಕ್ರಾಂತಿಗೆ ಬೆಳಕಿನ ವೇಗವನ್ನು ನೀಡಿಬಿಟ್ಟವು. ಈಗ ಸೋಷಿಯಲ್ ಕಾಂಟಾಕ್ಟ್ ತಂತ್ರಜ್ಞಾನಗಳ ಸೈದ್ಧಾಂತಿಕ ವಿವರಣೆಯ ಅಗತ್ಯವೇ ಉಳಿದಿಲ್ಲ. ಪುಸ್ತಕಗಳಲ್ಲಿ ಓದದೇ ಅನುಭವದ ಮೂಲಕವೇ ಅದು ಎಲ್ಲರಿಗೂ ಪ್ರಾಪ್ತವಾಗುತ್ತಿದೆ.

ಈ ಕ್ಷೇತ್ರ ಕಂಡಿರುವ ಜನಪ್ರಿಯತೆಯಿಂದಾಗಿ ಈಗ ಮಾರುಕಟ್ಟೆ ಸಮರ ಬಿರುಸಾಗಿದೆ. ಸೇವೆ ಒದಗಿಸುವ ಕಂಪೆನಿಗಳು, ಇನ್ನೂ ಹೊಸದಾಗಿ ಏನೇನು ಮಾಡಬಹುದು ಎಂಬ ನಿರಂತರ ಪ್ರಯೋಗಗಳಿಗೆ ಕೈಹಾಕುತ್ತಿವೆ. ಹೀಗಾಗಿ ವಲ್ಗ್ಯಾರಿಟಿಯೂ ನುಸುಳಿದೆ.

ಹಿಂದೆ `ಆರ್ಕುಟ್' ಮೂಲಕ ಸೋಷಿಯಲ್ ನೆಟ್ವರ್ಕಿಂಗ್  ಪ್ರಯೋಗಕ್ಕೆ ಕೈಹಾಕಿದ್ದ, ಜಗತ್ತಿನ ಅತಿ ಪ್ರಬಲ ಬ್ರಾಂಡ್ ಎನಿಸಿರುವ `ಗೂಗಲ್' ಇದೀಗ ತನ್ನ ಬಹುಚರ್ಚಿತ `ಗೂಗಲ್ ಪ್ಲಸ್' ಸೇವೆಯನ್ನು ಎಲ್ಲರಿಗೂ ಮುಕ್ತವಾಗಿಸಿದೆ. ಅದು ಹೊಂದಿರುವ ಸಾಧ್ಯಾಸಾಧ್ಯತೆಗಳತ್ತ ನೋಡಿದರೆ, ಫೇಸ್ಬುಕ್ಕಿಗೆ ಅದು ತೀವ್ರ ಪೈಪೋಟಿ ನೀಡಬಹುದು ಎಂಬುದರಲ್ಲಿ ಅನುಮಾನವಿಲ್ಲ. ಇತ್ತ ಪೇಸ್ಬುಕ್ ಸಹ ತನ್ನ ಸ್ವರೂಪ ಬದಲಾವಣೆ ಕುರಿತು ಚಿಂತಿಸುತ್ತಿದೆ.

ಅದೇನೇ ಇರಲಿ, ಇದು ಸೋಷಿಯಲ್ ನೆಟ್ವರ್ಕಿಂಗ್  ಕಾಲಘಟ್ಟ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಬೇಕಿರಲಿ, ಬೇಡವಾಗಿರಲಿ, ಅದರ ಬಗ್ಗೆ ತಿಳಿಯುವುದನ್ನು ಯಾರೂ ನಿರಾಕರಿಸುವ ಹಾಗಿಲ್ಲ. ಹಾಗೆ ಮಾಡುವವರು ನವಜಗತ್ತಿನಲ್ಲಿ ಅಪ್ರಸ್ತುತರಾಗುವ ಅಪಾಯವಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ