ಬುಧವಾರ, ಸೆಪ್ಟೆಂಬರ್ 21, 2011

ಕಂಬಾರರೊಡನೆ ಮಾತುಕತೆ

ಜಾನಪದವನ್ನು ನವ್ಯದೊಡನೆ ಮೇಳೈಸಿ ವಿಶಿಷ್ಟ ಪಾಕವನ್ನು ತಯಾರಿಸಿರುವ ಡಾ. ಚಂದ್ರಶೇಖರ ಕಂಬಾರರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇದರಿಂದ ಕನ್ನಡದ ಹೆಮ್ಮೆ ಮತ್ತೊಮ್ಮೆ ವಿಜೃಂಭಿಸಿದೆ.

ಇದು ಸಂಪೂರ್ಣವಾಗಿ ಅನಿರೀಕ್ಷಿತವಲ್ಲ. ಏಕೆಂದರೆ ಜ್ಞಾನಪೀಠದ ಎತ್ತರದಲ್ಲಿ ಅವರು ಎಂದಿನಿಂದಲೋ ವಿಹರಿಸುತ್ತಿದ್ದವರು. ಕಳೆದ ಎರಡು ವರ್ಷಗಳಿಂದ ಅವರ ಹೆಸರು ಚಲಾವಣೆಯಲ್ಲಿತ್ತು. ಇದೀಗ ಪ್ರಶಸ್ತಿ ಅವರನ್ನು ಅರಸಿ ಬಂದಿದೆ.

ಪ್ರಶಸ್ತಿ ಘೋಷಣೆಯಾದ ಸಂದರ್ಭದಲ್ಲಿ `ಕರ್ಮವೀರ'ದ ಪರವಾಗಿ ಅವರನ್ನು ಅಭಿನಂದಿಸಲು ಅವರ ಮನೆಗೆ ಹೋದೆ. ಬಹಳ ಆತ್ಮೀಯತೆಯಿಂದ ಕಂಬಾರರು ಮಾತನಾಡಿದರು. ಪತ್ರಿಕೆಯೊಡನೆ ತಮಗಿರುವ ಗಾಢ ಸಂಬಂಧವನ್ನು ನೆನೆಯುತ್ತ, ನಾಡು, ನುಡಿ, ಶಿಕ್ಷಣ, ಜಾನಪದ ಎಲ್ಲವನ್ನೂ ಚಚರ್ಿಸಿದರು. ತಮ್ಮ ವೈಯಕ್ತಿಕ ಖುಷಿ, ಚಿಂತನೆಗಳನ್ನು ಹಂಚಿಕೊಂಡರು.

ಒಟ್ಟಿನಲ್ಲಿ ಕನ್ನಡ ಸಾಹಿತ್ಯಕ್ಕಿದು ಹಬ್ಬದ ಸಮಯ. ಡಾ. ಎಸ್. ಎಲ್. ಭೈರಪ್ಪನವರು ಪ್ರತಿಷ್ಠಿತ `ಸರಸ್ವತಿ ಸಮ್ಮಾನ್' ಪ್ರಶಸ್ತಿಯನ್ನು ಪಡೆದ ಬೆನ್ನಲ್ಲೇ ಡಾ. ಚಂದ್ರಶೇಖರ ಕಂಬಾರರು ಪ್ರತಿಷ್ಠಿತ `ಜ್ಞಾನಪೀಠ' ಪ್ರಶಸ್ತಿಗೆ ಆಯ್ಕೆಯಾಗಿರುವುದು ಕನ್ನಡಕ್ಕೆ ವಿಶೇಷ ಮೆರುಗು ತಂದುಕೊಟ್ಟಿದೆ. ಇವೆರಡೂ ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳು. ಎರಡೂ ಖಾಸಗಿ ಟ್ರಸ್ಟಿನ ಪ್ರಶಸ್ತಿಗಳು. ಸರಿಸುಮಾರು ಒಂದೇ ಮೊತ್ತದ ಪುರಸ್ಕಾರ ಧನವನ್ನು ಎರಡೂ ಹೊಂದಿವೆ. ಭೈರಪ್ಪನವರ ಮೂಲಕ ಮೊದಲಬಾರಿಗೆ ಕನ್ನಡಕ್ಕೆ `ಸರಸ್ವತಿ ಸಮ್ಮಾನ್' ದೊರಕಿದರೆ, ಕಂಬಾರರ ಮೂಲಕ ಕನ್ನಡಕ್ಕೆ ಎಂಟನೇ `ಜ್ಞಾನಪೀಠ'ದ ಅಗ್ರಪೀಠ ಸಿಕ್ಕಿದೆ.

ರಾಜಕೀಯ ಲಾಬಿ ನಡೆಸುವ ಜನರ ನಡುವೆ ಯೋಗ್ಯರಿಗೂ ಆಗಾಗ್ಗೆ ಪ್ರಶಸ್ತಿಗಳು ಲಭಿಸುವುದುಂಟು. ಈ ಸಾಲಿಗೆ ಭೈರಪ್ಪ, ಕಂಬಾರರು ಸೇರುತ್ತಾರೆ. ಆದರೂ ಭೈರಪ್ಪನವರಿಗೆ ಜ್ಞಾನಪೀಠ ಏಕೆ ಇನ್ನೂ ಸಿಗುತ್ತಿಲ್ಲ ಎಂಬ ಅಭಿಪ್ರಾಯ ಈಗ ಮತ್ತೊಮ್ಮೆ ಸಾಹಿತ್ಯ ವಲಯದಲ್ಲಿ ಭುಗಿಲೆದ್ದಿದೆ. ಪ್ರಶಸ್ತಿಗಳಿಗೂ ವಿವಾದಗಳಿಗೂ ಹಳೆಯ ನಂಟು. ಜ್ಞಾನಪೀಠ ಪಡೆದವರ ಪಟ್ಟಿಯ ಜೊತಗೆ ಸರಸ್ವತಿ ಸಮ್ಮಾನ್ ಪಡೆದವರ ಇನ್ನೊಂದು ಪಟ್ಟಿಯನ್ನು ಇಟ್ಟುಕೊಂಡರೆ ಇಂತಹ ವಿವಾದಗಳು ಬಹುಶಃ ತಣ್ಣಗಾಗಬಹುದು.

ಒಟ್ಟಿನಲ್ಲಿ ಪ್ರಶಸ್ತಿಗಳನ್ನು ಪಡೆಯಲು ಅದೃಷ್ಟವೂ ಬೇಕು. ಮಹಾತ್ಮ ಗಾಂಧಿಯವರಿಗೇ ನೊಬೆಲ್ ಶಾಂತಿ ಪುರಸ್ಕಾರ ಸಿಗಲಿಲ್ಲ ಎಂಬುದು ಗಮನಾರ್ಹ. ಡಿ. ವಿ. ಗುಂಡಪ್ಪ, ಗೋಪಾಲಕೃಷ್ಣ ಅಡಿಗ - ಮುಂತಾದ ಅರ್ಹ ಹಿರಿಯರಿಗೆ ಜ್ಞಾನಪೀಠದ ಅದೃಷ್ಟ ಇಲ್ಲದೇ ಹೋಗಿದ್ದೂ ಗಮನಾರ್ಹ. ಯಾರ್ಯಾರಿಗೋ `ಭಾರತರತ್ನ' ನೀಡಿದ ನಂತರ ಸದರ್ಾರ್ ಪಟೇಲರ ಹೆಸರನ್ನು ಘೋಷಿಸಲಾಯಿತು.

ಕನ್ನಡದಲ್ಲಿ ಇನ್ನೂ ಹಲವಾರು ಮಂದಿಗೆ ಜ್ಞಾನಪೀಠ ಸಿಗಬೇಕಿದೆ ಎಂಬುದು ನಿಜ. ಹಾಗೆಯೇ ಇನ್ನೂ ಅನೇಕ ಕನ್ನಡ ಸಾಹಿತಿಗಳಿಗೆ ಸರಸ್ವತಿ ಸಮ್ಮಾನ್ ಸಹ ಸಿಗಲಿ ಎಂದು ಹಾರೈಸೋಣ.
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ