ಸೋಮವಾರ, ಮಾರ್ಚ್ 23, 2009

ನಾವೂ ಏಕೆ `ಮಿಷನ್ ಅಕಾಂಪ್ಲಿಷ್ಡ್' ಎನ್ನಬಾರದು?

`ಮಿಷನ್ ಅಕಾಂಪ್ಲಿಷ್ಡ್'!!

`ಕೆಲಸ ಸಾಧಿಸಿದ್ದಾಯಿತು'!

ಇದು ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಷಣದಲ್ಲಿ ಕಂಡು ಬಂದ ತೃಪ್ತಿ, ಸಮಾಧಾನದ ಸಂದೇಶ. ಈ ಸಂದೇಶ ಹೊತ್ತ ಟಿ-ಶಟರ್್ಗಳನ್ನು ಕೆಲವು ಆಫ್ರಿಕನ್ ಅಮೆರಿಕನ್ ಹುಡುಗರು ಧರಿಸಿದ್ದರು. ಬರಾಕ್ ಬಹುಪರಾಕ್ ಮುಗಿದ ನಂತರ ಅವರೆಲ್ಲ ಸಂತುಷ್ಟರಾಗಿ ಮನೆಗೆ ಹೋದರು. ಏನನ್ನೋ ಕೊನೆಗೂ ಸಾಧಿಸಿದ ಹೆಮ್ಮೆ ಅವರದು.

ಬರಾಕ್ ಒಬಾಮಾ ಆಫ್ರಿಕನ್ ತಂದೆಯ ಮಗ. ಅವರ ತಾಯಿ ಅಮೆರಿಕನ್ ಬಿಳಿ ಮಹಿಳೆ. ವರ್ಣದಲ್ಲಿ ತಂದೆಯನ್ನೇ ಹೋಲುವ ಬರಾಕ್ ಈಗ ಅಮೆರಿಕದ 44ನೇ ಅಧ್ಯಕ್ಷನಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅವರ ಪತ್ನಿ, ಈಗ ದೇಶದ ಪ್ರಥಮ ಮಹಿಳೆ ಎನಿಸಿರುವ, ಮಿಶೆಲ್ ಇನ್ನೂ ಸಾಮಾನ್ಯ ಕುಟುಂಬದ ಮಹಿಳೆ. ಅಮೆರಿಕನ್ ಬಿಳಿಯರೊಬ್ಬರ ಮನೆಯಲ್ಲಿ ಗುಲಾಮನಾಗಿ ಬಿದ್ದಿದ್ದ ಆಫ್ರಿಕನ್ ವ್ಯಕ್ತಿಯೊಬ್ಬನ ಮರಿಮಗಳು.

ಅಮೆರಿಕ ಸಂಯುಕ್ತ ಸಂಸ್ಥಾನದ ಸ್ಥಾಪನೆಯಾಗಿ 233 ವರ್ಷಗಳು ಉರುಳಿವೆ. ಅಂತಃಕಲಹ ಮುಗಿದು 144 ವರ್ಷಗಳು ಮುಗಿದಿವೆ. ಗುಲಾಮಗಿರಿ ನಿಷೇಧಿಸಲ್ಪಟ್ಟು ಅಷ್ಟೇ ವರ್ಷಗಳು ಕಳೆದಿವೆ. ಎಲ್ಲ ನಾಗರಿಕರಿಗೆ ಸಮಾನ ನಾಗರಿಕ ಹಕ್ಕು ಲಭ್ಯವಾಗಿ 46 ವರ್ಷಗಳು ಸಂದಿವೆ. ಆದರೂ ಆಫ್ರಿಕನ್ ಅಮೆರಿಕನ್ನರು ತಾವು ಬಿಳಿಯರಿಗೆ ಸರಿಸಮಾನರು ಎಂದು ಅನಿಸಲು ಯಾವುದಾದರೂ ಒಂದು ಸಾಂಕೇತಿಕ ಘಟನೆ ಬೇಕಾಗಿತ್ತು. ಬರಾಕ್ರ ಅಧ್ಯಕ್ಷ ಪದವಿಯಲ್ಲಿ ಅದನ್ನೀಗ ಕಂಡುಕೊಂಡಿದ್ದಾರೆ. ಅವರಿಗೀಗ `ಮಿಷನ್ ಅಕಾಂಪ್ಲಿಷ್ಡ್' ಎನಿಸಿದೆ. ನ್ಯಾಯ ಸಿಕ್ಕಿತು ಎನಿಸಿದೆ.

ಆದರೆ ಭಾರತದಲ್ಲಿ ಇನ್ನೂ ಈ ಭಾವ ಕಾಣುತ್ತಿಲ್ಲ. ನಮ್ಮಲ್ಲಿ ಅಸೃಶ್ಯತೆಯನ್ನು ಸಾಮಾನ್ಯವಾಗಿ ಕರಿಯರ ಗುಲಾಮಗಿರಿಗೆ ಹೋಲಿಸಿ ಮಾತನಾಡುವವರು ಇದ್ದಾರೆ. ಆದರೆ ಅವರಾರೂ ಕೆ. ಆರ್. ನಾರಾಯಣನ್ ರಾಷ್ಟ್ರಪತಿಯಾದಾಗ `ಮಿಷನ್ ಅಕಾಂಪ್ಲಿಷ್ಡ್' ಎನ್ನಲಿಲ್ಲ. ಸಮಾಧಾನ ವ್ಯಕ್ತಪಡಿಸಲಿಲ್ಲ.

ನೆನಪಿಡಿ, ಭಾರತ ಸ್ವತಂತ್ರವಾದಾಗ ಅಮೆರಿಕದಲ್ಲಿ ಇನ್ನೂ ಸಮಾನ ನಾಗರಿಕ ಹಕ್ಕು ಇರಲಿಲ್ಲ. ಬಿಳಿಯರಿಗೆ ಸಮನಾದ ನಾಗರಿಕ ಹಾಗೂ ಮಾನವ ಹಕ್ಕುಗಳನ್ನು ಕರಿಯರಿಗೆ ನಿರಾಕರಿಸಲಾಗಿತ್ತು. ಅಮೆರಿಕದ ಸಂವಿಧಾನ ಅಸ್ತಿತ್ವಕ್ಕೆ ಬಂದು ಹತ್ತಿರ ಹತ್ತಿರ ಎರಡು ಶತಮಾನಗಳೇ ಸಂದಿದ್ದರೂ ಗುಲಾಮಗಿರಿ ಒಂದಲ್ಲ ಒಂದು ರೀತಿಯಲ್ಲಿ ಮುಂದುವರಿದೇ ಇತ್ತು. ಈ ಜನಾಂಗೀಯ ತಾರತಮ್ಯ 1960ರ ದಶಕದಲ್ಲಿ ಅಳಿಯಲು ಕಾರಣವಾಗಿದ್ದು ಡಾ. ಮಾಟರ್ಿನ್ ಲೂಥರ್ ಕಿಂಗ್ ಜೂನಿಯರ್ ನಡೆಸಿದ ಅವಿರತ ಹೋರಾಟ. ಆದರೆ 1950ರಲ್ಲಿ ನಮ್ಮ ದೇಶದ ಸಂವಿಧಾನ ಜಾರಿಗೆ ಬಂದಿದ್ದೇ ಸಮಾನ ನಾಗರಿಕ ಹಕ್ಕುಗಳ ಆಧಾರದ ಮೇಲೆ.

1865 ರ ವರೆಗೂ ಅಮೆರಿಕದ ಅನೇಕ ರಾಜ್ಯಗಳಲ್ಲಿ ಗುಲಾಮಗಿರಿ ಕಾನೂನುಸಮ್ಮತವಾಗಿತ್ತು. ಗುಲಾಮರು ಎಂದರೆ ಸಾಮಾನ್ಯವಾಗಿ ಆಫ್ರಿಕನ್ ಕಪ್ಪು ಜನರು, ಕೆಲವೊಮ್ಮೆ ಸ್ಥಳೀಯ ಇಂಡಿಯನ್ನರು. ಆಜೀವನ ಪರ್ಯಂತದ ಗುಲಾಮಗಿರಿ ಅದು. ಒಬ್ಬ ಗುಲಾಮನಾದ ಎಂದರೆ ಅವನ ಜೀವ ಇರುವವರೆಗೂ ಆತ ಗುಲಾಮನೇ. ಅವನಿಗೆ ಮಾನವಹಕ್ಕುಗಳಿರಲಿಲ್ಲ. ನಾಗರಿಕ ಹಕ್ಕುಗಳೂ ಇರಲಿಲ್ಲ. 1860ರ ಅಮೆರಿಕನ್ ಜನಗಣತಿಯ ಪ್ರಕಾರ ಗುಲಾಮಗಿರಿ ಕಾನೂನುಬದ್ಧವಾಗಿದ್ದ 15 ರಾಜ್ಯಗಳ ಒಟ್ಟು ಜನಸಂಖ್ಯೆ 1 ಕೋಟಿ 20 ಲಕ್ಷ. ಈ ಪೈಕಿ 40 ಲಕ್ಷ ಜನರು ಗುಲಾಮರು! ಬಿಳಿ ಜನರ ಒಂದೊಂದು ಕುಟುಂಬದಲ್ಲೂ 10 ಮಂದಿ ಕಪ್ಪು ಗುಲಾಮರು ಇರುತ್ತಿದ್ದರು.

ಆಫ್ರಿಕಾದಿಂದ ಕಪ್ಪು ವಣರ್ೀಯರನ್ನು ಹಿಡಿದು ತರಲಾಗುತ್ತಿತ್ತು. ಅವರನ್ನು ದನಗಳಂತೆ ಬೀದಿಯಲ್ಲಿ ನಿಲ್ಲಿಸಿಕೊಂಡು ಬಹಿರಂಗವಾಗಿ ಹರಾಜು ಹಾಕಲಾಗುತ್ತಿತ್ತು. ಒಂದು ಅಂಕಿಅಂಶದ ಪ್ರಕಾರ 16ನೇ ಶತಮಾನದಿಂದ 19ನೇ ಶತಮಾನದ ಅವಧಿಯಲ್ಲಿ ಆಫ್ರಿಕಾದಿಂದ ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳಿಗೆ ಸುಮಾರು 20 ಲಕ್ಷ ಜನರನ್ನು ಬಿಳಿಯರು ಹಿಡಿದು ಸಾಗಿಸಿದ್ದರು. ಅತಿ ಹೆಚ್ಚು ಈ ಪೈಕಿ ಜನರನ್ನು ಸಾಗಿಸಿದ್ದು ಐರೋಪ್ಯ ರೋಮನ್ ಕ್ಯಾಥೋಲಿಕ್ಕರ ವಶದಲ್ಲಿದ್ದ ಬ್ರೆಜಿಲ್ ದೇಶಕ್ಕೆ. ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ 6,45,000 ಜನರನ್ನು ಹಿಡಿದು ತರಲಾಗಿತ್ತು (ಅದಕ್ಕೂ ಮೊದಲು ಬ್ರಿಟಿಷರು ಸ್ಥಳೀಯ ಇಂಡಿಯನ್ ಜನಾಂಗದವರನ್ನು ಗುಲಾಮಗಿರಿಗೆ ಒಳಪಡಿಸಿದ್ದರು). 1619ರಲ್ಲಿ ಆರಂಭವಾದ ಈ ಅಮಾನವೀಯ ಪ್ರಕ್ರಿಯೆಯನ್ನು, ಪೈಶಾಶಿಕ ಪರಿಸ್ಥಿತಿಯನ್ನು ನಿವಾರಿಸಿದ್ದು 16ನೇ ಅಧ್ಯಕ್ಷ ಅಬ್ರಾಹಾಂ ಲಿಂಕನ್.

ಭಾರತೀಯರು ಹೀಗೆ ಎಂದೂ ಹೊರಗಿನಿಂದ ಜನರನ್ನು ಪಶುಗಳಂತೆ ಹೊತ್ತುತಂದು ಗುಲಾಮಗಿರಿಗೆ ಒಳಪಡಿಸಲಿಲ್ಲ. ನಮ್ಮ ಸ್ಥಳೀಯ ರಾಜರುಗಳು ಇಂತಹ ಅಮಾನವೀಯ ಕಾನೂನುಗಳನ್ನು ಹೊಂದಿರಲಿಲ್ಲ. `ಅಸೃಶ್ಯ'ರಾದವರೂ ಸಹ `ಗುಲಾಮ'ರು ಎನಿಸಿರಲಿಲ್ಲ. ಅಶ್ಪೃಶ್ಯತೆ ಗುಲಾಮಗಿರಿಗಿಂತಲೂ ಭಿನ್ನವಾದ, ಆದರೆ ಭೀಕರವಾದ, ಸಾಮಾಜಿಕ ಅನಿಷ್ಟ.

ವಾಸ್ತವವಾಗಿ ನಮ್ಮ ಸೆಕ್ಯುಲರಿಸ್ಟರು ಹಾಡಿ ಹೊಗಳುವ ದೆಹಲಿ ಸುಲ್ತಾನರು ಹಾಗೂ ಮುಘಲ್ ಇಸ್ಲಾಮೀ ದೊರೆಗಳು ಗುಲಾಮಗಿರಿಯನ್ನು ಕಾನೂನುಬದ್ಧಗೊಳಿಸಿದ್ದರು. ಅವರ ಗುಲಾಮರ ಪೈಕಿ ಮುಸ್ಲಿಮರೂ ಇದ್ದರು. `ಇಸ್ಲಾಮಿಕ್ ಬ್ರದರ್ಹುಡ್' ಪರ ವಾದಿಸುವವರು ಈ ಇತಿಹಾಸ ಓದಬೇಕು. ಅದರಿಂದ ಇನ್ನೂ ಒಂದು ವಿಷಯ ಸ್ಪಷ್ಟವಾಗುತ್ತದೆ. ಮುಸ್ಲಿಂ ದೊರೆಗಳ ಕಾನೂನುಗಳ ಪ್ರಕಾರ, ಈ ಗುಲಾಮರ ನಡುವೆಯೂ ವಿವಿಧ ದಜರ್ೆಗಳಿದ್ದವು. ಮುಸ್ಲಿಮೇತರ ಗುಲಾಮರು (`ಧಿಮ್ಮಿ'ಗಳು) ಹೀನ ದಜರ್ೆಯವರಾಗಿದ್ದರು. ಇದು ವಾಸ್ತವ ಇತಿಹಾಸ.

ಇಂದು `ಶಾಂತಿ', `ಪ್ರೀತಿ' ಎಂದೆಲ್ಲ ನಾಟಕವಾಡುವ ಐರೋಪ್ಯ ಆಡಳಿತಗಾರರ ಹಾಗೂ ಮಿಷನರಿಗಳ ಬೆನ್ನ ಹಿಂದಿರುವುದೂ ಇಂತಹುದೇ ಕರಾಳ ಇತಿಹಾಸ. ಆದರೆ ನಾವದನ್ನು ಎತ್ತಿ ತೋರಿಸುವುದಿಲ್ಲ. ಅವರ `ಸುಧಾರಣೆ'ಯನ್ನು ಮೆಚ್ಚುತ್ತೇವೆ. ನಮ್ಮ ಸುಧಾರಣೆ, ಸಾಧನೆಗಳನ್ನು ಹೇಳದೇ ಭಾರತವನ್ನು ನಿಂದಿಸುತ್ತ ಕೂರುತ್ತೇವೆ.

ವಾಸ್ತವವಾಗಿ ಭಾರತೀಯ ಸಮಾಜದಲ್ಲಿ ಅಮಾನವೀಯ ಅಸೃಶ್ಯತೆ ಹೆಚ್ಚಾದದ್ದು ಮುಸ್ಲಿಂ ದೊರೆಗಳ ಕಾಲದಲ್ಲಿ. ಮಧ್ಯಯುಗದಲ್ಲಿ ಮುಸ್ಲಿಂ ದೊರೆಗಳ ನೀತಿಗಳಿಂದಾಗಿ ಹೇಗೆ ಹೊಸ ಹೊಸ `ದಲಿತ' ಜಾತಿಗಳು ಹುಟ್ಟಿಕೊಂಡವು ಎಂಬುದನ್ನು ಇತಿಹಾಸಜ್ಞ ಡಾ. ಕೆ.ಎಸ್. ಲಾಲ್ ದಾಖಲೆಗಳ ಸಮೇತ ನಿರೂಪಿಸಿದ್ದಾರೆ. ಬ್ರಿಟಿಷರ ಕಾಲದಲ್ಲಿ ಜಾತಿಗಳ ಸಂಘರ್ಷ ಸೃಷ್ಟಿಯಾಗಿದ್ದೂ ಇತಿಹಾಸದಿಂದ ತಿಳಿಯುತ್ತದೆ. ಈ ಇತಿಹಾಸ ಏನೇ ಹೇಳಲಿ ಅಸ್ಪೃಶ್ಯತೆ ಹಾಗೂ ಜಾತಿ ತಾರತಮ್ಯ ಎಂದಿಗೂ ಸಹಿಸತಕ್ಕ ವಿಷಯಗಳಲ್ಲ. ಈ ಎರಡು ಅನಿಷ್ಟಗಳಿಗೆ ಭಾರತೀಯ ಸಮಾಜ ಭಾಗಶಃ ಪಾಲುದಾರ ಎಂಬುದನ್ನು ನಾವು ಗುರುತಿಸಲೇಬೇಕು. ಈ ಅನಿಷ್ಟಗಳು ನಿಜವಾಗಿಯೂ ಅಮಾನವೀಯವೇ ಸರಿ.

ಆದರೆ ಭಾರತದಲ್ಲಿ ಅಮೆರಿಕಕ್ಕೂ ಮೊದಲೇ ಸುಧಾರಣೆಯಾಗಿದೆ ಎನ್ನುವುದನ್ನೂ ನಾವು ಗಮನಿಸಬೇಕು. ಆದರೆ ಈ ಕುರಿತು ನಮ್ಮ `ವಿಚಾರವಂತರು' ಹಾಗೂ `ಸೆಕ್ಯುಲರಿಸ್ಟರು' ಜಾಣ ಕುರುಡು ಪ್ರದಶರ್ಿಸುತ್ತಾರೆ. 16ನೇ ಶತಮಾನದಲ್ಲೇ ಕನಕದಾಸರು `ನಿಮ್ಮ ಕುಲದ ನೆಲೆ ಯಾವುದು ಬಲ್ಲಿರಾ?" ಎಂದು ಪ್ರಶ್ನಿಸಿದ್ದರು. ಇಲ್ಲಿ 18 ಮತ್ತು 19ನೇ ಶತಮಾನದಲ್ಲೇ ವ್ಯವಸ್ಥಿತ ಸಾಮಾಜಿಕ ಸುಧಾರಣಾ ಪ್ರಕ್ರಿಯೆ ಆರಂಭವಾಗಿತ್ತು. ಬ್ರಹ್ಮಸಮಾಜ, ಆರ್ಯಸಮಾಜ, ಅರವಿಂದರು, ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್ ಇವರೆಲ್ಲ ಮಾಟರ್ಿನ್ ಲೂಥರ್ ಕಿಂಗ್ ಜೂನಿಯರ್ಗಿಂತಲೂ ಬಹಳ ಹಳಬರು. ಅಶ್ಪೃಶ್ಯತೆ ನಮ್ಮಲ್ಲಿ ಕಾನೂನುಬಾಹಿರ. ಜಾಮೀನುರಹಿತ ಅಪರಾಧ.

ಆದರೂ ನಾವು ಮಾತ್ರ `ಮಿಷನ್ ಅಕಾಂಪ್ಲಿಷ್ಡ್' ಎನ್ನುವುದಿಲ್ಲ. ನಮ್ಮಲ್ಲಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಹಾಗೂ ಎಲ್ಲ ಜಾತಿವರ್ಗದವರು ದೇಶವನ್ನು ಆಳಿದ್ದಾರೆ. ಆಳುತ್ತಿದ್ದಾರೆ. ಆದರೂ ನಾವು ಇನ್ನೂ `ಸಾಮಾಜಿಕ ನ್ಯಾಯ ಸಿಕ್ಕಿಲ್ಲ' ಎನ್ನುತ್ತೇವೆ. ಹಾಗೆ ನೋಡಿದರೆ ಬರಾಕ್ ಒಬಾಮಾ ಅಮೆರಿಕದ ಮತೀಯ ಅಲ್ಪಸಂಖ್ಯಾತರಲ್ಲ. ಅವರು ತಮ್ಮ ತಂದೆಯಂತೆ ಇನ್ನೂ ಮುಸ್ಲಿಂ ಆಗಿಯೇ ಉಳಿದಿದ್ದರೆ ಅಮೆರಿಕದ ಅಧ್ಯಕ್ಷನಾಗುವುದು ಸಾಧ್ಯವಿತ್ತೆ? ಲ್ಯೂಸಿಯಾನಾದ ಗವರ್ನರ್, ಭಾರತೀಯ ಮೂಲದ, ಬಾಬಿ ಜಿಂದಾಲ್ರ ತಂದೆತಾಯಿಗಳು ಈಗಲೂ ಹಿಂದೂಗಳು. ಆದರೆ ಬರಾಕ್ ಮತ್ತು ಬಾಬಿ ಇಬ್ಬರೂ ಕ್ರಿಶ್ಚಿಯನ್ನರಾಗಿ ಮತಾಂತರಗೊಂಡ ನಂತರವೇ ಅಮೆರಿಕದ ರಾಜಕೀಯದಲ್ಲಿ ಸ್ವೀಕೃತವಾಗಿದ್ದು. ಅಮೆರಿಕದಲ್ಲಿ ಇನ್ನೂ ಕ್ರೈಸ್ತೇತರರು, ಮಹಿಳೆಯರು ಅಧ್ಯಕ್ಷರಾಗಿಲ್ಲ ಎನ್ನುವುದು ಗಮನಾರ್ಹ. ಆದರೂ ಅಮೆರಿಕವನ್ನು ಹೊಗಳುವ ನಾವು ನಮ್ಮ ಬಗ್ಗೆ ಅಸಹ್ಯಪಟ್ಟುಕೊಳ್ಳುತ್ತೇವೆ.

ನಮ್ಮಲ್ಲಿ ಜಾತಿಗಳು ಈಗಲೂ ಪರಿಗಣನೆಯ ಮಾನದಂಡಗಳಾಗಿರುವುದು ರಾಜಕೀಯದಲ್ಲಿ ಮಾತ್ರ. ಇದಕ್ಕೆ ಪ್ರಬಲ ಜಾತಿವಾದಿ ರಾಜಕಾರಣಿಗಳು ಮಾತ್ರ ಕಾರಣರೇ ಹೊರತು ನಮ್ಮ ಸಮಾಜ ಕಾರಣವಲ್ಲ. ಜಾತಿಗಳನ್ನು ವೋಟ್ಬ್ಯಾಂಕ್ ಮಾಡಿಕೊಳ್ಳುವ, ಜಾತಿ ಆಧಾರಿತ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಶಕ್ತಿಗಳು ಯಾವುವು ಎಂಬುದು ನಮಗೆ ಗೊತ್ತಿಲ್ಲವೆ?

ಅಸ್ಪೃಶ್ಯತೆ ಕೆಲವು ಕಡೆಗಳಲ್ಲಿ ಇನ್ನೂ ಜೀವಂತವಾಗಿದೆ ಎನ್ನುವುದು ನಿಜ. ಆದರೆ ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂಬುದೂ ಗಮನಾರ್ಹ. ಅಪರಾಧಿಗಳಿದ್ದಾರೆ ಎಂದರೆ ಅಪರಾಧಕ್ಕೆ ಅಧಿಕೃತ ಮಾನ್ಯತೆ ಇದೆ ಎಂದು ಅರ್ಥವಲ್ಲ. ಹಾಗೆ ನೋಡಿದರೆ ಅಮೆರಿಕದಲ್ಲಿ ಈಗಲೂ ಗುಲಾಮಗಿರಿ ಇದೆ. ಇದು ವಾಸ್ತವ ಸತ್ಯ. ಅಲ್ಲಿ ಗುಲಾಮಗಿರಿ ಅನಧಿಕೃತವಾಗಿ ಈಗಲೂ ಮುಂದುವರಿದಿದೆ. ಸಿಐಎ ಹಗೂ ಸ್ಟೇಟ್ (ವಿದೇಶಾಂಗ) ಇಲಾಖೆಗಳ ಅಧಿಕೃತ ವರದಿಗಳ ಪ್ರಕಾರ ಈಗಲೂ ಪ್ರತಿವರ್ಷ ಅಮೆರಿಕಕ್ಕೆ 50,000 ದಿಂದ 1,00,000 ದಷ್ಟು ಜನರನ್ನು, ಅದರಲ್ಲೂ ಮಹಿಳೆಯರನ್ನು, ಮಕ್ಕಳನ್ನು ಅನಧಿಕೃತವಾಗಿ ಬಲವಂತದಿಂದ ಕರೆತಂದು ಗುಲಾಮಗಿರಿಗೆ ಒಳಪಡಿಸಲಾಗುತ್ತಿದೆ! ಲೈಂಗಿಕ ಚಟುವಟಿಕೆಗಳಿಗೆ ದೂಡಲಾಗುತ್ತಿದೆ.

ಈ ಅಪರಾಧಗಳನ್ನು ಆಧಾರವಾಗಿ ಇಟ್ಟುಕೊಂಡು ನಾವು ಅಮೆರಿಕದ ಸಮಾಜವನ್ನು ಜರಿಯುತ್ತೇವೆಯೆ? ಅಮೆರಿಕದ ಇಮೇಜ್ ಇದರಿಂದ ಹಾಳಾಗಿದೆಯೆ? ಹಾಗಾದರೆ ನಾವೇಕೆ ಭಾರತವನ್ನು ಜರಿಯಬೇಕು? ವಾಸ್ತವ ಗುರುತಿಸೋಣ. ಭಾರತ ಈಗಾಗಲೇ ಅನೇಕ ಬರಾಕ್ ಒಬಾಮಾರನ್ನು ಸೃಷ್ಟಿಸಿದೆ.

ಭಾರತದಲ್ಲೂ `ಮಿಷನ್ ಅಕಾಂಪ್ಲಿಷ್ಡ್' ಎನ್ನೋಣ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ