ಬುಧವಾರ, ಸೆಪ್ಟೆಂಬರ್ 21, 2011

ಇದಕ್ಕೆಲ್ಲಿದೆ ಪರಿಹಾರ?

ರಾಷ್ಟ್ರೀಯ ಸುರಕ್ಷೆಯ ವಿಷಯಕ್ಕೆ ಬಂದಾಗ ಶಿವರಾಜ್ ಪಾಟೀಲ್ ಅವರಿಗಿಂತಲೂ ತಾನು ಭಿನ್ನ ಎಂದು ಪಿ. ಚಿದಂಬರಂ ಯಾವ ರೀತಿಯಲ್ಲೂ ಸಾಬೀತು ಮಾಡಿಲ್ಲ. 26/11 ಸಮಯದಲ್ಲಿ ಪಾಟೀಲ್ ಬಟ್ಟೆ ಬದಲಿಸುವುದರಲ್ಲಿ, ಮುಖಕ್ಕೆ ಪೌಡರ್ ಹಾಕಿಕೊಳ್ಳುವುದರಲ್ಲಿ ಸಮಯ ಕಳೆಯುತ್ತಿದ್ದರೆ, ಇತರ ದಾಳಿಗಳ ಸಮಯದಲ್ಲಿ ಚಿದಂಬರಂ ತಮ್ಮ ಹಳೆಯ ವಿಚಿತ್ರ ಹೇಳಿಕೆಗಳನ್ನೇ ಬದಲಿಸಿ ನೀಡುತ್ತ ಕಾಲ ಕಳೆಯುತ್ತಿದ್ದಾರೆ.

ದೆಹಲಿ ಹೈಕೋಟರ್ಿನಲ್ಲಿ, ಒಂದೇ ಸ್ಥಳದಲ್ಲಿ, ಕೆಲವೇ ತಿಂಗಳುಗಳ ಅಂತರದಲ್ಲಿ, ಎರಡು ಬಾರಿ ಸ್ಫೋಟವಾಗಿದೆ ಎಂದರೆ ಏನರ್ಥ? ಇದಕ್ಕೆ ಚಿದು ನೀಡಿರುವ ಸ್ಪಷ್ಟೀಕರಣ: `ಭಯೋತ್ಪಾದಕರು ರಹಸ್ಯವಾಗಿ ಕಾಯರ್ಾಚರಣೆ ಮಾಡುತ್ತಾರೆ' ಎಂದು! ಇದು ಯಾರಿಗೂ ಗೊತ್ತಿಲ್ಲದ ಮಹಾ ರಹಸ್ಯ! ಇದನ್ನು ಪಲುಕಲು ಒಬ್ಬ ಗೃಹಮಂತ್ರಿ ನಮಗೆ ಬೇಕಾ?

9/11 ನಂತರ ಅಮೆರಿಕದ ಆಂತರಿಕ ಸುರಕ್ಷೆಯನ್ನು ಹೇಗೆ ಭದ್ರಪಡಿಸಲಾಗಿದೆ ಎಂಬುದು ಗಮನಾರ್ಹ. ಅಮೆರಿಕದ ಎಫ್ಬಿಐ (ಫೆಡೆರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ರಾಷ್ಟ್ರೀಯ ಕಾನೂನು ಜಾರಿ ಹಾಗೂ ತನಿಖಾ ಸಂಸ್ಥೆ. 9/11 ಜಿಹಾದಿ ಭಯೋತ್ಪಾದಕ ದಾಳಿಯ ನಂತರ ಅದರ ಪಾತ್ರ ಸಂಪೂರ್ಣವಾಗಿ ಬದಲಾಯಿತು. ಅಪರಾಧಗಳ ತನಿಖೆ ನಡೆಸುವ `ಪ್ರತಿಕ್ರಿಯಾತ್ಮಕ' ಸ್ವರೂಪದಿಂದ ಅಪರಾಧಗಳನ್ನು ತಡೆಯುವ `ಸಕ್ರಿಯಾತ್ಮಕ' ಸ್ವರೂಪವನ್ನು ಅದಕ್ಕೆ ನೀಡಲಾಯಿತು. ಅದಕ್ಕಾಗಿ ಎಫ್ಬಿಐ ಅನೇಕ ಆಂತರಿಕ ಸುಧಾರಣೆಗಳಿಗೆ ಒಳಪಟ್ಟಿತು. ಗುಪ್ತಚಾರ ಸಂಸ್ಥೆಗಳೊಡನೆ ಒಟ್ಟಿಗೆ ಕೆಲಸ ಮಾಡುವ ಹಾಗೆ ಅದನ್ನು ಸಂಯೋಜಿಸಲಾಯಿತು.

ಭಾರತದ ಗುಪ್ತಚಾರ ಏಜೆನ್ಸಿಗಳ ನಡುವೆ ಚೂರೂ ಹೊಂದಾಣಿಕೆಯಿಲ್ಲ. ತನಿಖಾ ಸಂಸ್ಥೆಗಳಿಗೂ ಗುಪ್ತಚಾರ ಸಂಸ್ಥೆಗಳಿಗೂ ಸರಿಯಾದ ಬಾಂಧವ್ಯವಿಲ್ಲ. ಎನ್ಎಸ್ಎ (ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್) ಸ್ಥಾನವೂ ರಾಜಕೀಯ ನೇಮಕಾತಿಗೆ ಒಳಪಟ್ಟಿದೆ. ಎನ್ಐಎ (ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ) ಸರಿಯಾದ ಸ್ವಾಯತ್ತ ಸ್ವರೂಪವನ್ನು ಇನ್ನೂ ಪಡೆದುಕೊಂಡಿಲ್ಲ. ಅದೂ ಸಿಬಿಐ ತರಹ ರಾಜಕೀಯದ ನೆರಳಿನಲ್ಲೇ ಇದೆ. ಭಯೋತ್ಪಾದನಾ ನಿಗ್ರಹಕ್ಕಾಗಿ ಪ್ರತಿದೇಶದಲ್ಲೂ ವಿಶೇಷ ಕಾನೂನು ಇರಬೇಕು ಎಂಬುದು ಅಂತಾರಾಷ್ಟ್ರೀಯ ಸರ್ವಸಮ್ಮತಿ. ವಿಸ್ವಸಂಸ್ಥೆಯ ಭದ್ರತಾ ಮಂಡಳಿ ಈ ಕುರಿತು 9/11 ನಂತರ ನಿರ್ಣಯ ಅಂಗೀಕರಿಸಿತ್ತು (1373). ಭಾರತವೂ ಅದಕ್ಕೆ ಬದ್ಧವಾಗಿದೆ. ಆದರೂ ನಮ್ಮಲ್ಲಿ ಭಯೋತ್ಪಾದನಾ ನಿಗ್ರಹ ವಿಶೇಷ ಕಾನೂನು ಇಲ್ಲ. ಎನ್ಡಿಎ ಕಾಲದ ಪೋಟಾ ಕಾಯ್ದೆಯನ್ನು ರದ್ದುಮಾಡಲಾಗಿದೆ.

`ಭಯೋತ್ಪ್ಪಾದನಾ ಕಾಯ್ದೆ ಇದ್ದಮಾತ್ರಕ್ಕೆ ಭಯೋತ್ಪಾದಕ ಕೃತ್ಯಗಳನ್ನು ತಡೆಯಲು ಸಾಧ್ಯವೆ?', `ಜನಲೋಕಪಾಲ್ ಕಾಯ್ದೆ ಬಂದುಬಿಟ್ಟರೆ ಭ್ರಷ್ಟಾಚಾರ ಹೋಗಿಬಿಡುತ್ತಾ?' - ಮುಂತಾದ ಅಸಂಬದ್ಧ ವಾದಸರಣಿ ನಮ್ಮ ನಾಯಕಮಣಿಗಳದು. ಈ ದೃಷ್ಟಿಯಿಂದ ನೋಡಿದರೆ ಯಾವ ಕಾಯ್ದೆಯೂ ಇರಬಾರದು. ಐಪಿಸಿ ಅಪರಾಧಗಳನ್ನು ತಡೆದುಬಿಟ್ಟಿದೆಯೆ?

ಕಾಯ್ದೆಗಳಿಂದ ಅಪರಾಧಗಳ ತಡೆ ಆಗುತ್ತದೋ ಇಲ್ಲವೋ ಎನ್ನುವುದು ಬೇರೆ ಮಾತು. ಆದರೆ ಅಪರಾಧಿಗಳ ಶಿಕ್ಷೆಗೆ ಅವು ಅತ್ಯಾವಶ್ಯಕ. ಸೂಕ್ತ ಭಯೋತ್ಪಾದನಾ ನಿಗ್ರಹ ಕಾಯ್ದೆಗಳಿಲ್ಲದಿರುವರಿಂದ ಶಿಕ್ಷಾ ಪ್ರಮಾಣ (ಕನ್ವಿಕ್ಷನ್ ರೇಟ್) ಕಡಮೆಯಾಗಿದೆ. ಹೇಗೋ ಐಪಿಸಿ ಮೂಲಕವೇ ಉಗ್ರರ ಅಪರಾಧ ಸಾಬೀತಾಗಿ ಅವರಿಗೆ ಶಿಕ್ಷೆಯಾದರೂ ರಾಜಕೀಯ ಮುಖಂಡರೇ ಉಗ್ರರ ಪರವಾಗಿ ನಿಲ್ಲುವುದನ್ನು ಕಾಣುತ್ತೇವೆ. ಇದು ನಮ್ಮ ದೇಶದ ಪರಿಸ್ಥಿತಿ. ಅಮೆರಿಕದಲ್ಲಿ ಭಯೋತ್ಪಾದಕರ ಪರವಾಗಿ ಮಾತನಾಡಿ ಯಾವ ರಾಜಕಾರಣಿಯೂ ಉಳಿದುಕೊಳ್ಳಲಾರ. ಇಲ್ಲಿ ಭಯೋತ್ಪಾದಕರನ್ನೇ ಹೀರೋಗಳ ಹಾಗೆ ಬಿಂಬಿಸುವ ಮುಖಂಡರು ತುಂಬಿ ತುಳುಕುತ್ತಿದ್ದಾರೆ. ಜನಲೋಕಪಾಲ್ ಮಸೂದೆಯನ್ನು ವಿಶ್ಲೇಷಿಸುವ ಸ್ಥಾಯಿ ಸಮಿತಿಯಲ್ಲೂ ಇಂತಿಂತಹ ಜಾತಿಯವರು ಇರಲೇಬೇಕು ಎಂದು ಒತ್ತಾಯ ಹಾಕುವ ಮಹಾತ್ಮರಿದ್ದಾರೆ!

ಜಾತಿ, ಲಿಂಗ, ಭಾಷೆ, ಸಮುದಾಯ. ಕೋಮು - ಇವುಗಳನ್ನು ಆಧರಿಸಿದ ಹೀನ ರಾಜಕೀಯ ಎಲ್ಲೆಲ್ಲೂ ವಿಜೃಂಭಿಸುತ್ತಿದೆ. ಭ್ರಷ್ಟಾಚಾರ, ನಾಚಿಕೆಬಿಟ್ಟು ಹಣಕ್ಕಾಗಿ ಜೊಲ್ಲು ಸುರಿಸುವ ಹಾಗೂ ರಕ್ತ ಚೆಲ್ಲಾಡುವ ಪ್ರವೃತ್ತಿ - ಇವೆಲ್ಲ ಎದ್ದುಕಾಣುತ್ತಿವೆ. ಹೀನ ಮನಸ್ಸಿನ ಜನರು ಪ್ರಮುಖ ಸ್ಥಾನಗಳಲ್ಲಿ ಕಂಡುಬರುತ್ತಿದ್ದಾರೆ. ಜೈಲಿನಲ್ಲಿ ಶಾಶ್ವತವಾಗಿ ಇರಬೇಕಾದವರು ದೇಶವನ್ನು ಮುನ್ನಡೆಸಲು (!?) ಬಯಸುತ್ತಾರೆ.

ಇಂತಹವರೆಲ್ಲ ಇರುವಾಗ ದೇಶದ ನಾಶಕ್ಕೆ ಬಾಹ್ಯ ಶತ್ರುಗಳೇಕೆ ಬೇಕು?

ಇವರೇ ಸಾಕು.
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ