ಬುಧವಾರ, ಸೆಪ್ಟೆಂಬರ್ 21, 2011

ರಾಜಕಾರಣಿಗಳೆಂದರೆ ವಾಕರಿಕೆ

ಆಗಸ್ಟ್ ಮೊದಲ ವಾರಾಂತ್ಯ ಬ್ರಿಟನ್ ಪಾಲಿಗೆ ಕರಾಳವಾಯಿತು. ಟೋಟೆನ್ಹ್ಯಾಮ್ನ ಯಾರೋ ಸ್ಥಳೀಯ `ವಾಂಟೆಡ್' ವ್ಯಕ್ತಿ ಪೊಲೀಸರ ಗುಂಡಿಗೆ ಬಲಿಯಾದ. ಆ ಘಟನೆ ಪ್ರತಿಭಟನೆಗೆ ನಾಂದಿಯಾಯಿತು. ನಂತರ ಹಠಾತ್ತಾಗಿ ಗ್ಯಾಂಗ್ ಯುವಕರ ದಂಗೆ ಭುಗಿಲೆದ್ದಿತು. ನಂತರ ಮೂಲ ಘಟನೆಗೆ ಸಂಬಂಧವೇ ಇಲ್ಲದೆ ಲಂಡನ್, ಬಮರ್ಿಂಗ್ಹ್ಯಾಮ್, ಬ್ರಿಸ್ಟಲ್, ಲಿವರ್ಪೂಲ್ ಮುಂತಾದ ಮಹಾನಗರಗಳು ಹತ್ತಿ ಉರಿಯತೊಡಗಿದವು. 10 ವರ್ಷದ ಬಾಲಕರೂ ದಂಗೆಗೆ ಧುಮುಕಿದರು! ಅಂಗಡಿ ಮುಂಗಟ್ಟುಗಳ ಲೂಟಿ ಆರಂಭವಾಯಿತು. ಮಹಿಳೆಯರೂ ಅಂಗಡಿಗಳಿಗೆ ನುಗ್ಗಿ ಸಿಕ್ಕಿದ್ದನ್ನು ದೋಚತೊಡಗಿದರು. ದೊಂಬಿ ಮಾನಸಿಕತೆ ತನ್ನ ಪೈಶಾಚಿಕ ಸ್ವರೂಪದಲ್ಲಿ ವಿಜೃಂಭಿಸಿ ಅರಾಜಕತೆಯನ್ನು ಸೃಷ್ಟಿಸಿತು.

ಬ್ರಿಟನ್ ದಂಗೆಗಳಿಗೆ ನಿಜವಾದ ಕಾರಣ ಏನು? ಆಥರ್ಿಕ ಅಸಮಾನತೆ, ಸಾಮಾಜಿಕ ಬೆಸುಗೆಯ ಕೊರತೆ - ಎಂದೆಲ್ಲ ಏನೇನೋ ವಿಶ್ಲೇಷಣೆಗಳು ಬರುತ್ತಿವೆ. ಆದರೆ ಒಂದಂತೂ ಸ್ಪಷ್ಟ. ಅದು ರಾಜಕಾರಣಿಗಳ ಮೇಲೆ ಜನರಿಗಿರುವ ಕೋಪ, ಹತಾಶೆ. ದಂಗೆಗಳಲ್ಲಿ ಭಾಗವಹಿಸಿದ್ದ ಜನರೆಲ್ಲ ರಾಜಕಾರಣಿಗಳ ಮೇಲಿನ ತಮ್ಮ ಕೋಪವನ್ನು ಬಹಿರಂಗವಾಗಿ ಮಾಧ್ಯಮದವರ ಮುಂದೆ ತೋಡಿಕೊಂಡಿದ್ದು ಗಮನಾರ್ಹ. `ನನ್ನ ತೆರಿಗೆ ಹಣವನ್ನು ಹಿಂದಕ್ಕೆ ಪಡೆಯುತ್ತಿದ್ದೇನೆ' ಎಂದು ಯಾವುದೋ ಅಂಗಡಿಯನ್ನು ಕೊಳ್ಳೆ ಹೊಡೆಯುತ್ತಿದ್ದ ಮಹಿಳೆಯೊಬ್ಬಳು ನೀಡಿದ ಹೇಳಿಕೆ ಪರಿಸ್ಥಿತಿಯ ಸೂಚಕ.

ಈಗ ಸಮಸ್ತ ಜನರ ದ್ವೇಷ, ಅಸಹ್ಯ ಹಾಗೂ ತಿರಸ್ಕಾರಕ್ಕೆ ಒಳಗಾಗಿರುವ, ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವ ಯಾವುದಾದರೂ ಒಂದು ವರ್ಗ, ಸಮುದಾಯವಿದ್ದರೆ, ಅದು ರಾಜಕಾರಣಿಗಳದು. ಹಣದ ಮೌಲ್ಯಕ್ಕಿಂತಲೂ ವೇಗವಾಗಿ ರಾಜಕಾರಣಿಗಳ ವ್ಯಕ್ತಿತ್ವದ ಮೌಲ್ಯ ಕುಸಿಯುತ್ತಿರುವುದು ಈಗ ಜಾಗತಿಕ ಮಟ್ಟದ ವಿದ್ಯಮಾನ. ಒಂದೊಂದು ದೇಶದಲ್ಲಿ ಒಂದೊಂದು ಪ್ರಧಾನ ಕಾರಣಕ್ಕಾಗಿ ರಾಜಕಾರಣಿಗಳ ವಿಷಯದಲ್ಲಿ ಹೇಸಿಗೆ ಹುಟ್ಟುತ್ತಿದೆ. ಭಾರತದಲ್ಲಿ ಭ್ರಷ್ಟಾಚಾರ, ಅಮೆರಿಕದಲ್ಲಿ ಆಥರ್ಿಕ ನಿರ್ವಹಣೆಯ ವೈಫಲ್ಯ, ಬ್ರಿಟನ್ನಿನಲ್ಲಿ ಅವ್ಯವಸ್ಥೆಯ ವಿರುದ್ಧದ ಒಳಗುದಿ - ಹೀಗೆ.

ಭಾರತದಲ್ಲಿ ನಿತ್ಯವೂ ಭ್ರಷ್ಟಾಚಾರ ವಿಜೃಂಭಿಸುತ್ತಿದೆ. 2ಜಿ-3ಜಿ ಹಗರಣ, ಕಾಮನ್ವೆಲ್ತ್ ಹಗರಣ, ಭೂಸ್ವಾಧೀನ ಹಗರಣ, ಸ್ವಿಸ್ ಬ್ಯಾಂಕ್-ಟ್ಯಾಕ್ಸ್ ಹೆವೆನ್ ಹಗರಣ, ಸಂಸದರ ಖರೀದಿಯ `ವೋಟಿಗಾಗಿ-ನೋಟು' ಹಗರಣ, ಆದರ್ಶ ಸೊಸೈಟಿ ಹಗರಣ, ಗಣಿ ಹಗರಣ, ರಿಯಲ್ ಎಸ್ಟೇಟ್ ಹಗರಣ, ಖರೀದಿ ಕಿಕ್ಬ್ಯಾಕ್ ಹಗರಣ, ಮಂತ್ರಿಗಳು ಹಾಗೂ ಮಾಜಿ ನ್ಯಾಯಾಧೀಶರೂ ಸೇರಿದಂತೆ ಅನೇಕ ಉನ್ನತ ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣಗಳು - ಒಂದೇ ಎರಡೆ? ಹಳೆಯ ಭ್ರಷ್ಟಾಚಾರದ ವಿಷಯ ಹಾಗಿರಲಿ, ಕಳೆದ ಐದು ವರ್ಷಗಳಲ್ಲಿ ಒಟ್ಟು ಎಷ್ಟು ಹಗರಣಗಳು ಬೆಳಕಿಗೆ ಬಂದಿವೆ ಎಂಬುದರ ಯಾದಿ ತಯಾರಿಸುವುದೇ ಕಷ್ಟದ ಕೆಲಸ.

ಈಚೆಗಷ್ಟೇ ಸಂಸತ್ತಿನಲ್ಲಿ ಮಂಡನೆಯಾಗಿರುವ ಲೋಕಪಾಲ್ ಮಸೂದೆಗೆ ಜನರ ಮಟ್ಟದಲ್ಲಿ ಕವಡೆಯ ಕಿಮ್ಮತ್ತೂ ಕಂಡುಬರುತ್ತಿಲ್ಲ. ಸಿಬಿಐ ಸೇರಿದಂತೆ ಹಗರಣಗಳ ತನಿಖೆಗೆ ಹೊರಟಿರುವ ಸಕರ್ಾರಿ ತನಿಖಾ ಸಂಸ್ಥೆಗಳು, ತಮ್ಮ ಕೆಲಸವನ್ನು ಸರಿಯಾಗಿ ಮಾಡದೇ ಇರುವ ಕಾರಣಕ್ಕಾಗಿ ಪದೆ ಪದೇ ಕೋಟರ್ಿನಿಂದ ಛೀಮಾರಿ ಹಾಕಿಸಿಕೊಂಡು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ತಮ್ಮ ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವವರನ್ನು ಬಗ್ಗುಬಡಿಯಲು ರಾಜಕಾರಣಿಗಳು ನಡೆಸಿರುವ ಬಹಿರಂಗ ಕಸರತ್ತುಗಳು ಜನರಲ್ಲಿ ತೀವ್ರ ಅಸಹ್ಯ ಹುಟ್ಟಿಸಿದೆ.

ಲಂಡನ್ ದಂಗೆಗಳು ಯಾವುದೇ ಸಮಸ್ಯೆಗೆ ಪರಿಹಾರ ಕೊಡಲಾರವು. ದಂಗೆ ನಡೆಸುವುದು, ಗ್ಯಾಂಗುಗಳನ್ನು ಸಂಘಟಿಸುವುದು - ಇವೆಲ್ಲ ಅನಾಗರಿಕ, ಅಮಾನವೀಯ ಹಾಗೂ ಅರಾಜಕ ಕ್ರಮಗಳು. ಸಾರ್ವಜನಿಕ ಅಪರಾಧಗಳು. ಆದರೂ ಯಾವುದೋ ಆಂತರಿಕ ಅವ್ಯವಸ್ಥೆಯ ರೋಗದ ಹೊರಲಕ್ಷಣದ ರೂಪದಲ್ಲಿ ದಂಗೆಯು ತೋರಿಕೊಳ್ಳುವ ಅಪಾಯವಿದೆ. ಅದನ್ನು ಯಾರೂ ನಿರ್ಲಕ್ಷಿಸುವ ಹಾಗಿಲ್ಲ. ಇದು ಭಾರತಕ್ಕೂ ಎಚ್ಚರಿಕೆಯ ಗಂಟೆಯಾಗಬೇಕು.
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ