ಬುಧವಾರ, ಸೆಪ್ಟೆಂಬರ್ 21, 2011

ಜನತೆ - ಜನಪ್ರತಿನಿಧಿ

ಅಣ್ಣಾ ಹಜಾರೆ ಆಂದೋಲನದ ಕಾವು ಹೆಚ್ಚಾದ ಸಮಯದಲ್ಲಿ ಜನರ ಹಾಗೂ `ಜನಪ್ರತಿನಿಧಿಗಳ' ನಡುವಿನ ಕಂದಕ ಸ್ಪಷ್ಟವಾಗಿಯೇ ಕಂಡಿತು. ಅದನ್ನು ತಕ್ಷಣ ಸರಿಪಡಿಸದಿದ್ದರೆ ನಮ್ಮ ಪ್ರಜಾತಂತ್ರದ ಬುನಾದಿಯಲ್ಲೇ ಬಿರುಕು ಮೂಡುತ್ತದೆ.

ಆಂದೋಲನದ ಉದ್ದಕ್ಕೂ ಘರ್ಷಣೆಗೆ, ಮಥನಕ್ಕೆ ಕಾರಣವಾದ ಪದಗುಚ್ಛ `ಸಂಸತ್ತಿನ ಪರಮಾಧಿಕಾರ'. ಕಾನೂನುಗಳನ್ನು ರೂಪಿಸುವ ಅಧಿಕಾರ ಶಾಸನಸಭೆಗಳದು ಮಾತ್ರ ಎಂಬುದು ಇದರ ಅರ್ಥ. ಅದು ನಿಜ. ಆದರೆ ಈ ಸಭೆಗಳು ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬಾರದು ಎಂದು ಸಂವಿಧಾನದಲ್ಲಿ ಎಲ್ಲಿ ಹೇಳಿದೆ?

ವಾಸ್ತವವಾಗಿ ಜನರೇ (ಮತದಾರರು) ಸಂಸತ್ತಿನ ಸೃಷ್ಟಿಕರ್ತರು. ಕೋಟ್ಯಂತರ ಜನರು ಒಟ್ಟಾಗಿ ಕೂತು ಶಾಸನ ರೂಪಿಸುವುದು ಸಾಧ್ಯವಿಲ್ಲದ್ದರಿಂದ ಜನಪ್ರತಿನಿಧಿಗಳನ್ನು ಆರಿಸುವ ಪರಿಪಾಠ ಪ್ರಜಾತಂತ್ರದಲ್ಲಿ ಬಂದಿದೆ. ಹಾಗೆಂದ ಮಾತ್ರಕ್ಕೆ `ಜನರು ಇಲ್ಲಿ ಅಪ್ರಸ್ತುತ' ಎಂದು ಭಾವಿಸಬಾರದು. ಯಾವುದೇ ಜನಪ್ರತಿನಿಧಿ ತಾನೇ ಜನರಿಗಿಂತ ಹೆಚ್ಚು ಎಂದು ಭಾವಿಸುವುದು ಆದರ್ಶ ವ್ಯವಸ್ಥೆಯಲ್ಲ.

ನಮ್ಮ ಪ್ರಸಕ್ತ ವ್ಯವಸ್ಥೆ ಹೇಗಿದೆ? ಆಳುವ ಪಕ್ಷದ ನಾಯಕರು ಮನಸ್ಸು ಮಾಡಿದರೆ ಯಾವುದೇ ಶಾಸನಸಭೆಯ ಸದಸ್ಯರಲ್ಲದವರನ್ನು ಕರೆತಂದು ಆರು ತಿಂಗಳ ಕಾಲ ಮಂತ್ರಿಯಾಗಿಸಬಹುದು. ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಸ್ಥಾನಗಳನ್ನೂ ನೀಡಬಹುದು.  ಅವರು ತಮ್ಮ ಈ ಅಧಿನಾಯಕರು ಹೇಳಿದಂತೆ ಕೇಳಿದರೆ ಸಾಕು, ಅದೇ ಅವರ ಪರಮ `ಅರ್ಹತೆ'! ಈ ಕ್ರಮ ಜನರ ಅಭಿಪ್ರಾಯಕ್ಕೆ ಮಾನ್ಯತೆ ಕೊಡುತ್ತದೆಯೆ? ಜನರ ಹಕ್ಕಿಗೆ ಮನ್ನಣೆ ನೀಡುತ್ತದೆಯೆ? ಜನರ ಹಂಗೇ ಇಲ್ಲದೇ ಅಧಿಕಾರ ಹಿಡಿಯಬಹುದಾದ ಈ ಕ್ರಮ ಪ್ರಜಾತಂತ್ರದ ಮೂಲತತ್ತ್ವಗಳಿಗೆ ಬದ್ಧವಾಗಿದೆಯೆ? ಇದರಿಂದ ಸಂಸತ್ತಿನ/ವಿಧಾನಸಭೆಯ ಪಾರಮ್ಯಕ್ಕೆ ಯಾವ ಬೆಲೆ ಸಿಕ್ಕಂತಾಯಿತು?

ವಾಸ್ತವವಾಗಿ, `ಸಂಸತ್ತಿನ ಪಾರಮ್ಯ' ಎಂಬುದು ಸಂಪೂರ್ಣ ಪರಿಕಲ್ಪನೆಯಲ್ಲ. ಯಾವುದೇ ಸಾರ್ವಭೌಮ ದೇಶದ ಸಂಸತ್ತೇ ಆದರೂ ಅಂತಾರಾಷ್ಟ್ರೀಯ (ದ್ವಿಪಕ್ಷೀಯ, ಬಹುಪಕ್ಷೀಯ) ಒಪ್ಪಂದಗಳಿಗೆ ಬದ್ಧವಾಗಿರಲೇಬೇಕಾಗುತ್ತದೆ. ವಿಶ್ವಸಂಸ್ಥೆಯ ನಿರ್ಣಯಗಳನ್ನು ಅನುಮೋದಿಸಲೇಬೇಕಾಗುತ್ತದೆ. ಅದಕ್ಕೆ ತಕ್ಕ ಕಾನುನುಗಳನ್ನು ರೂಪಿಸಬೇಕಾಗುತ್ತದೆ. ಯೂನಿವರ್ಸಲ್ ಡಿಕ್ಲರೇಷನ್ ಆಫ್ ಹ್ಯೂಮನ್ ರೈಟ್ಸ್, ಸಿಟಿಬಿಟಿ, ಎನ್ಪಿಟಿ, ಕ್ಯೋಟೋ ಪ್ರೋಟೋಕಾಲ್, ಗ್ಯಾಟ್, ಸೆಕ್ಯೂರಿಟಿ ಕೌಂಸಿಲ್ ರೆಸಲ್ಯೂಷನ್ಸ್ - ಇವೆಲ್ಲ ಜಾಗತಿಕ ಮಟ್ಟದಲ್ಲಿ ಎಲ್ಲ ಸದಸ್ಯರಾಷ್ಟ್ರಗಳಿಗೂ, ಅಂಕಿತ ಹಾಕಿದ ದೇಶಗಳಿಗೂ ಅನ್ವಯವಾಗುತ್ತವೆ.
(ವಿಶ್ವಸಂಸ್ಥೆಯ ಸುರಕ್ಷಾ ಮಂಡಳಿಯ ನಿರ್ಣಯ 1373 ಅನ್ವಯ ವಿಶೇಷ ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ನು ರೂಪಿಸಬೇಕು. ಈ ಅಂತಾರಾಷ್ಟ್ರೀಯ ನಿರ್ಣಯಕ್ಕೆ ಭಾರತ ಬದ್ಧವಾಗಿದೆ. ಆದರೂ ಅದನ್ನು ಸರಿಯಾಗಿ ಪಾಲಿಸಿಲ್ಲ).

ಹಾಗೆ ನೋಡಿದರೆ ಸಂಸತ್ತಿನ ಪಾರಮ್ಯಕ್ಕೆ ಧಕ್ಕೆ ತಂದಿರುವುದು ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿ. ನಮ್ಮ ಸಂವಿಧಾನದಲ್ಲಿ ಈ ರೀತಿಯ ಮಂಡಳಿಗಳ ಪರಿಕಲ್ಪನೆಯೇ ಇಲ್ಲ. `ಇಂತಿಂತಹ ಕಾನೂನುಗಳನ್ನು ಮಾಡಿ' ಎಂದು ಸಂಸತ್ತಿಗೆ ಹೇಳುತ್ತ ಹೋಗುವ ಒಂದು ಶಾಶ್ವತ ಮಂಡಳಿ ಏಕೆ ಬೇಕು? ಹೀಗಿರುವಾಗ `ನಮಗೆ ಪ್ರಬಲವಾದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಬೇಕು' ಎಂದು ಕೋಟ್ಯಂತರ ಜನರು ಬಯಸಿದ್ದು ಸಂಸತ್ತಿನ ಪಾರಮ್ಯಕ್ಕೆ ಚ್ಯುತಿ ತರುತ್ತದೆಯೆ?

ತಮ್ಮ ಸ್ವಹಿತಾಕ್ತಿಗೆ ಧಕ್ಕೆ ಬರಬಹುದು ಎಂಬ ಭಾವನೆಯಿಂದ ಕೆಲವು ಸಂಸದರು ಕೆಲವೊಂದು ಪ್ರಬಲ ಕಾನೂನುಗಳನ್ನು ವಿರೋಧಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂತಹ ವಿಶೇಷ ಸಮಯದಲ್ಲಿ ಜನರು ಒಟ್ಟಾಗಿ ತಮ್ಮ ಅಭಿಪ್ರಾಯವನ್ನು ಪ್ರಕಟ ಮಾಡಿದ್ದು ತಪ್ಪಲ್ಲ. ಉಳಿದಂತೆ, ಸಂಸತ್ತಿನ ಪಾರಮ್ಯವನ್ನು ಜನರೂ ಒಪ್ಪಬೇಕು. ತಮಗೆ ಬೇಕಾದ ಹಾಗೆ ಕಾನೂನುಗಳನ್ನು ಬರೆಸಿಕೊಳ್ಳಲು ಕೆಲವು ಎನ್ಜಿಓಗಳು ಹಪಹಪಿಸುತ್ತಿರುವುದೂ ಕಟುವಾಸ್ತವವೇ. ಈ ಕುರಿತು ಜನರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ನಮ್ಮ ಸಂಸತ್ತು, ನಮ್ಮ ಪ್ರತಿನಿಧಿಗಳು, ನಮ್ಮದೇ ಜನರ ಮಾತುಗಳನ್ನು ಪ್ರಾಮಾಣಿಕವಾಗಿ ಆಲಿಸುವುದರಲ್ಲಿ ತಪ್ಪಿಲ್ಲ. ಹಾಗೆ ಮಾಡುವುದರಿಂದ ಯಾರ ಕಿರೀಟವೂ ಕಳಚಿ ಬೀಳುವುದಿಲ್ಲ. ಬದಲಾಗಿ ನಮ್ಮ ಪ್ರಜಾತಂತ್ರ ವಿಶ್ವಕ್ಕೇ ಮಾದರಿಯಾಗುತ್ತದೆ. ಜನರಲ್ಲೂ ತಮ್ಮ ಪ್ರತಿನಿಧಿಗಳ ಬಗ್ಗೆ ಗೌರವ ಮೂಡುತ್ತದೆ. ಸಂಸತ್ತಿನ ಅಭಿಪ್ರಾಯವೇ ಜನರ ಅಭಿಪ್ರಾಯ ಎಂದು ಭಾವಿಸುವುದರ ಬದಲು ಬಹುಜನತೆಯ ಅಭಿಪ್ರಾಯವೇ ಸಂಸತ್ತಿನ ಅಭಿಪ್ರಾಯ ಎನ್ನುವಂತಾಗುವುದೇ ನಿಜವಾದ ಪ್ರಜಾತಂತ್ರ. 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ